ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಭಾರತದ ಮಾಜಿ ಪ್ರಧಾನಿ, ಶ್ರೇಷ್ಠ ವಾಗ್ಮಿ, ಕವಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಉತ್ತಮ ಆಡಳಿತ ದಿನ (ಗುಡ್ ಗವರ್ನನ್ಸ್ ಡೇ) ಎಂದು ಆಚರಿಸುತ್ತಾ ಬಂದಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.ನಗರದ ತಮ್ಮ ಗೃಹಕಚೇರಿಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಳದಿಂದ ಹಮ್ಮಿಕೊಂಡ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದ ವಾಜಪೇಯಿ ಅವರು ಬಿಜೆಪಿಯಿಂದ ದೇಶದ ಮೊದಲು ಪ್ರಧಾನಿಯಾಗಿದ್ದರು. ದೇಶದ ಅಭಿವೃದ್ಧಿಗೆ ವಾಜಪೇಯಿ ನೀಡಿದ ಕೊಡುಗೆ ಸ್ಮರಿಸಲು 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನ (ಸುಶಾಸನ ದಿನ)ವನ್ನಾಗಿ ಆಚರಿಸಲು ನಿರ್ಧರಿಸಿತು. ಚಿಕ್ಕಂದಿನಿಂದಲೂ ಕಾವ್ಯದ ಮೇಲೆ ಒಲವು ಹೊಂದಿದ್ದ ಅವರು, 10ನೇ ತರಗತಿಯಲ್ಲಿದ್ದಾಗ ತಮ್ಮ ಮೊದಲ ಕವಿತೆ ಬರೆದಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ 23 ದಿನಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದ ಅವರು 3 ಬಾರಿ ಪ್ರಧಾನಿಯಾಗಿ, 11 ಬಾರಿ ಲೋಕಸಭೆ ಹಾಗೂ 2 ಬಾರಿ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 47 ವರ್ಷಗಳ ಕಾಲ ಸಂಸತ್ ಸದಸ್ಯರಾಗಿದ್ದ ಹಿರಿಮೆ ಅವರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಮಾಜಿ ಜಿಪಂ ಸದಸ್ಯರಾದ ಟಿ.ಆರ್. ಕಾಗಲ, ಎಂ.ಎಲ್. ತೋಳಿನವರ, ನಗರಸಭೆ ಸದಸ್ಯರಾದ ಕುತ್ಬುದ್ದಿನ್ ಗೋಕಾಕ, ಅಬ್ಬಾಸ ದೇಸಾಯಿ, ಬಸವರಾಜ ಆರೇನ್ನವರ, ಜಯಾನಂದ ಹುಣಚ್ಯಾಳ, ಮುಖಂಡರಾದ ಪರಶುರಾಮ ಭಗತ, ಅಶೋಕ ಗೋಣಿ, ಅನೀಲ ತುರಾಯಿದಾರ, ಆನಂದ ಉಳ್ಳಾಗಡ್ಡಿ, ಬಸವರಾಜ ಹಿರೇಮಠ, ಲಕ್ಕಪ್ಪ ತಹಶೀಲ್ದಾರ ಸೇರಿದಂತೆ ಅನೇಕರು ಇದ್ದರು.