ಸಾರಾಂಶ
ಪ್ರೇಮಿಗಳ ದಿನವನ್ನು ಕಾವೇರಿ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಕಾಲೇಜು ವಿದ್ಯಾರ್ಥಿಗಳು ವಿಶೇಷವಾಗಿ ಆಚರಣೆ ಮಾಡಿ ಯುವಪೀಳಿಗೆಗೆ ಹೊಸ ಸಂದೇಶ ನೀಡಿದ ಕಾರ್ಯಕ್ರಮ ಕುಶಾಲನಗರದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಪ್ರೇಮಿಗಳ ದಿನವನ್ನು ಕಾವೇರಿ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಕಾಲೇಜು ವಿದ್ಯಾರ್ಥಿಗಳು ವಿಶೇಷವಾಗಿ ಆಚರಣೆ ಮಾಡಿ ಯುವ ಪೀಳಿಗೆಗೆ ಹೊಸ ಸಂದೇಶ ನೀಡಿದ ಕಾರ್ಯಕ್ರಮ ಕುಶಾಲನಗರದಲ್ಲಿ ಶುಕ್ರವಾರ ನಡೆಯಿತು.ಕುಶಾಲನಗರ ಸಮೀಪದ ಕೊಪ್ಪ ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಕುಶಾಲನಗರ ಕೊಪ್ಪ ಗಡಿ ಭಾಗದ ಕಾವೇರಿ ನದಿಯಲ್ಲಿ ಇಳಿದು ‘ಐ ಲವ್ ಕಾವೇರಿ’ ಘೋಷಣೆಯೊಂದಿಗೆ ನದಿಯಲ್ಲಿದ್ದ ತ್ಯಾಜ್ಯಗಳ ತೆರವು ಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡ ದೃಶ್ಯ ಕಂಡು ಬಂತು.
ಕುಶಾಲನಗರ ಕೊಪ್ಪ ಕಾವೇರಿ ನದಿ ಸೇತುವೆ ಮೇಲ್ಭಾಗದಿಂದ ಜನರು ಎಸೆದ ಪೂಜಾ ಸಾಮಗ್ರಿಗಳು, ಬಳಕೆಗೆ ಯೋಗ್ಯವಲ್ಲದ ವಸ್ತುಗಳನ್ನು 100ಕ್ಕೂ ಅಧಿಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ತೆರವುಗೊಳಿಸಿ ಕುಶಾಲನಗರ ಪುರಸಭೆ ಮತ್ತು ಕೊಪ್ಪ ಗ್ರಾಮ ಪಂಚಾಯಿತಿಗಳ ಕಸ ವಿಲೇವಾರಿ ವಾಹನಗಳಿಗೆ ತುಂಬಿಸಿ ನದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಳೆದ ವರ್ಷ ಫೆ.14ರಂದು ಕೂಡ ಇದೇ ರೀತಿಯ ಅಭಿಯಾನದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ತೊಡಗಿಸಿಕೊಂಡು ಕಾವೇರಿ ನದಿಯ ಸ್ವಚ್ಛತೆ ಕಾರ್ಯ ನಡೆಸಿದ್ದರು.ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕರಾದ ಎಂ ಎನ್ ಚಂದ್ರಮೋಹನ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜಿನ ಫಾ .ಜೈಸನ್, ಫಾ. ಅಬ್ರಹಾಂ, ಎನ್ಎಸ್ಎಸ್ ಅಧಿಕಾರಿ ಹೆಚ್ ಆರ್ ದಿನೇಶ್ ದೈಹಿಕ ಶಿಕ್ಷಣ ನಿರ್ದೇಶಕ ಅಭಿಷೇಕ್ ಮುಖ್ಯಸ್ಥರಾದ ಶಶಾಂಕ್ ಲೀನಾ, ಬೃಂದಾ ಮತ್ತು ಉಪನ್ಯಾಸಕ ವೃಂದದವರು ಪಾಲ್ಗೊಂಡಿದ್ದರು.