ಮಾನವನ ಬದುಕಿಗೆ ಮೌಲ್ಯಗಳು ಅವಶ್ಯಕ: ಬಡಿಗೇರ್ ಮೌನೇಶ್

| Published : Jan 16 2025, 12:45 AM IST

ಮಾನವನ ಬದುಕಿಗೆ ಮೌಲ್ಯಗಳು ಅವಶ್ಯಕ: ಬಡಿಗೇರ್ ಮೌನೇಶ್
Share this Article
  • FB
  • TW
  • Linkdin
  • Email

ಸಾರಾಂಶ

ತಿಮ್ಮಲಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಮರಿಯಮ್ಮನಹಳ್ಳಿ ಕಸಾಪ ಹಳ್ಳಿ ಹೋಬಳಿ ಘಟಕದ ವತಿಯಿಂದ ಸುಭ್ರದಮ್ಮ ಮತ್ತು ಕರಣಂ ಭೀಮಸೇನಾ ರಾವ್‌ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಮರಿಯಮ್ಮನಹಳ್ಳಿ: ಜೀವನ ಮೌಲ್ಯಗಳು ಮಾನವನ ಬದುಕಿಗೆ ಅತ್ಯಂತ ಅವಶ್ಯಕ. ಅವುಗಳು ಮನುಷ್ಯನ ಬದುಕಿನ ಚಿಂತನೆಯನ್ನು ಧನಾತ್ಮಕತೆಯತ್ತ ಕೊಂಡೊಯ್ಯುತ್ತವೆ ಎಂದು ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಡಿಗೇರ್ ಮೌನೇಶ್ ತಿಳಿಸಿದರು.

ಸಮೀಪದ ತಿಮ್ಮಲಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಮರಿಯಮ್ಮನಹಳ್ಳಿ ಕಸಾಪ ಹಳ್ಳಿ ಹೋಬಳಿ ಘಟಕದ ವತಿಯಿಂದ ಸುಭ್ರದಮ್ಮ ಮತ್ತು ಕರಣಂ ಭೀಮಸೇನಾ ರಾವ್‌ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಹಳೆಗನ್ನಡ, ನಡುಗನ್ನಡ, ಮತ್ತು ಹೊಸಗನ್ನಡದಲ್ಲಿ ಜೀವನ ಮೌಲ್ಯಗಳು ಯಥೇಚ್ಛವಾಗಿವೆ. ಅವುಗಳನ್ನು ನಿರಂತರ ಅಧ್ಯಯನದಿಂದ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಉತ್ತಮ ಸ್ಥಿತಿಯತ್ತ ಸಾಗಲು ಸಹಾಯಕಾರಿಯಾಗುತ್ತದೆ. ಶಿವಕೋಟ್ಯಾಚಾರ್ಯರ ವಡ್ಡಾರಾಧನೆ ಕೃತಿಯ ಸತ್ಯವಾದಿ ಸುದಾಮೆಯ ಸತ್ಯ, ಆದಿಪುರಾಣದಲ್ಲಿನ ಅತ್ತಿಮಬ್ಬೆಯ ದಾನ, ವಚನ ಸಾಹಿತ್ಯದಲ್ಲಿನ ಕಾಯಕ ಮತ್ತು ದಾಸೋಹ ತತ್ವ, ಅಕ್ಕಮಹಾದೇವಿಯ ತಾಳ್ಮೆ ಮತ್ತು ಸಹನೆಗಳು ಜೀವನ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗಿವೆ ಎಂದು ಹೇಳಿದರು.

ಹೊಸಗನ್ನಡ ಸಾಹಿತ್ಯದಲ್ಲಿ ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗಗಳು, ಕುವೆಂಪು ಅವರ ರಾಮಾಯಣ ದರ್ಶನಂ ಸೇರಿದಂತೆ ಹಲವಾರು ಬರಹಗಾರರು ಅಲಕ್ಷಿತ ವ್ಯಕ್ತಿತ್ವ ಮತ್ತು ಚಿಂತನೆಗಳನ್ನು ಲಕ್ಷತೆಯತ್ತ ಹಿಡಿದು ಸಾಹಿತ್ಯದಲ್ಲಿ ಮೌಲ್ಯಾತ್ಮಕ ಚಿಂತನೆಯನ್ನು ಬೋಧಿಸಿದ್ದಾರೆ ಎಂದು ವಿವರಿಸಿದರು.

ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ. ಮಾರ್ಗದಪ್ಪ ಮುಖ್ಯಅತಿಥಿಗಳಾಗಿ ಮಾತನಾಡಿ, ಕಸಾಪ ಸದಾ ಕನ್ನಡಪರ ಹೋರಾಟಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ. ನಾವು ನೆಲ-ಜಲ, ಭಾಷೆ ವಿಚಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸದಾ ಬೆಂಬಲವಾಗಿ ನಿಲ್ಲಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಭಾಷೆಯ ಬಗ್ಗೆ ಅತ್ಯಂತ ಆಳವಾಗಿ ತಿಳಿಯುವ ಮತ್ತು ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಕಸಾಪ ಮರಿಯಮ್ಮನಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಬಿ.ಎಂ.ಎಸ್. ಮೃತ್ಯುಂಜಯ ಮಾತನಾಡಿ, ಕನ್ನಡ ಸಾಹಿತ್ಯದ ಬಗ್ಗೆ ಈಗಿನ ಯುವ ಜನರಲ್ಲಿ ಅರಿವಿನ ಕೊರತೆ ಇದ್ದು ಯುವಜನಾಂಗ ಕುವೆಂಪು, ಡಿವಿಜಿ, ಬೇಂದ್ರೆಯವರ ಸಾಹಿತ್ಯ, ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ನಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಸಾಪ ಮರಿಯಮ್ಮನಹಳ್ಳಿ ಕೋಶಾಧ್ಯಕ್ಷ ಈ. ರಮೇಶ್, ಕರವೇ ಮರಿಯಮ್ಮನಹಳ್ಳಿ ಘಟಕದ ಅಧ್ಯಕ್ಷ ಬಿ. ರಾಘವೇಂದ್ರ, ರಂಗ ಕಲಾವಿದ ಗೊಲ್ಲರಹಳ್ಳಿಯ ಜಿ. ಮಲ್ಲಪ್ಪ ತಿಪ್ಪಣ್ಣಾಚಾರ್ಯ, ಸಿ. ಪ್ರಕಾಶ್ ಭಾಗವಹಿಸಿದ್ದರು.

ಕಲಾವಿದ ಜಿ. ಮಲ್ಲಪ್ಪ ಪ್ರಾರ್ಥಿಸಿದರು. ಕಸಾಪ ಮರಿಯಮ್ಮನಹಳ್ಳಿ ಹೋಬಳಿ ಘಟಕದ ಕಾರ್ಯದರ್ಶಿ ಬಿ. ಪರಶುರಾಮ್ ನಿರೂಪಿಸಿದರು.