ಸಂವಿಧಾನ ರಚನೆಯಲ್ಲಿ ವಲ್ಲಭಭಾಯಿ ಪಟೇಲರ ಪಾತ್ರ ದೊಡ್ಡದು: ಡಾ. ವಿ.ಟಿ. ನಾಯ್ಕರ್

| Published : Nov 07 2025, 02:30 AM IST

ಸಂವಿಧಾನ ರಚನೆಯಲ್ಲಿ ವಲ್ಲಭಭಾಯಿ ಪಟೇಲರ ಪಾತ್ರ ದೊಡ್ಡದು: ಡಾ. ವಿ.ಟಿ. ನಾಯ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ದಾರ್‌ ವಲ್ಲಭಭಾಯಿ ಪಟೇಲರು ಮೂಲಭೂತ ಹಕ್ಕುಗಳ ಕುರಿತಾದ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೆಲವು ನಿರ್ಬಂಧಗಳನ್ನು ವಿಧಿಸುವ ಮೂಲಕ ನಾಗರಿಕ ಹಕ್ಕುಗಳನ್ನು ಸಮತೋಲನಗೊಳಿಸಲು ಶ್ರಮಿಸಿದರು.

ಗದಗ: ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರಾ. ಡಾ. ವಿ.ಟಿ. ನಾಯ್ಕರ್ ತಿಳಿಸಿದರು.ನಗರದ ಆದರ್ಶ ಶಿಕ್ಷಣ ಸಮಿತಿಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತ್ಯುತ್ಸವ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ಸಲಹಾ ಸಮಿತಿಯ ಮುಖ್ಯಸ್ಥರಾಗಿ ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರು ಹಾಗೂ ಬುಡಕಟ್ಟು ಪ್ರದೇಶಗಳ ಹಕ್ಕುಗಳ ಕುರಿತ ಉಪಸಮಿತಿಗಳಿಗೆ ನಿರ್ವಹಿಸಿದರು. ಅಲ್ಲದೆ, ಪಟೇಲರು ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆಯನ್ನು ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದರು. ಎನ್ನೆಸ್ಸೆಸ್ ವಿಭಾಗದ ವಿದ್ಯಾರ್ಥಿ ಪ್ರತಿನಿಧಿ ಭರತದ ಸ್ವಾಮಿ ಮಾತನಾಡಿ, ಭಾರತದ ಸಂವಿಧಾನ ರಚನೆಯ ಸಮಯದಲ್ಲಿ, ಅವರು ಮಧ್ಯಂತರ ಸರ್ಕಾರದಲ್ಲಿ ಗೃಹ, ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದರು ಮತ್ತು 565 ರಾಜಪ್ರಭುತ್ವದ ರಾಜ್ಯಗಳೊಂದಿಗೆ ಮಾತುಕತೆ ನಡೆಸುವ ಮತ್ತು ಅವುಗಳನ್ನು ಭಾರತದ ಒಕ್ಕೂಟಕ್ಕೆ ಸಂಯೋಜಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅದರೊಂದಿಗೆ ಪಟೇಲ್‌ರಿಗೆ ಭಾರತದ ಉಕ್ಕಿನ ಮನುಷ್ಯ ಎಂಬ ಬಿರುದು ದೊರೆಯಿತು. ಸ್ವತಂತ್ರ ಭಾರತದ ಮೊದಲ ಗೃಹ ಸಚಿವ ಮತ್ತು ಉಪಪ್ರಧಾನ ಮಂತ್ರಿಯಾಗಿ, ಅವರು ನಿರಾಶ್ರಿತರಿಗೆ ಪರಿಹಾರ ಪ್ರಯತ್ನಗಳನ್ನು ಸಂಘಟಿಸಿದರು ಎಂದರು.

ಅಕ್ಷಯ್ ಮಾತನಾಡಿ, ಸರ್ದಾರ್‌ ವಲ್ಲಭಭಾಯಿ ಪಟೇಲರು ಮೂಲಭೂತ ಹಕ್ಕುಗಳ ಕುರಿತಾದ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೆಲವು ನಿರ್ಬಂಧಗಳನ್ನು ವಿಧಿಸುವ ಮೂಲಕ ನಾಗರಿಕ ಹಕ್ಕುಗಳನ್ನು ಸಮತೋಲನಗೊಳಿಸಲು ಶ್ರಮಿಸಿದರು. ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಒತ್ತು ನೀಡಿದರು ಮತ್ತು ಪ್ರತ್ಯೇಕ ಮತದಾರ ಪದ್ಧತಿಯನ್ನು ಕೊನೆಗೊಳಿಸಲು ಮುಸ್ಲಿಂ ನಾಯಕರೊಂದಿಗೆ ಸಹಕರಿಸಿದರು. ಹಾಗೆ ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆಯಂತಹ ಅಖಿಲ ಭಾರತ ಸೇವೆಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂಥ ಒಬ್ಬ ನಾಯಕರ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದರು.

ಈ ವೇಳೆ ಎನ್ನೆಸ್ಸೆಸ್‌ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಪಿ. ಜೈನರ, ವಿದ್ಯಾರ್ಥಿ ಪ್ರತಿನಿಧಿಗಳಾದ ವರ್ಷ ಕಲ್ಕಂಬಿ, ನಮೃತಾ ಪಾಟೀಲ ಸೇರಿದಂತೆ ಸಿಬ್ಬಂದಿ, ಸ್ವಯಂಸೇವಕರು ಇದ್ದರು.