ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರಫೇಸ್ ಬುಕ್ ನಲ್ಲಿಯೇ ಕವಿತೆ ಹಾಗೂ ಕಥೆಗಳನ್ನು ಬರೆದುಕೊಳ್ಳುವ ನೂರಾರು ಮಂದಿ ಸಾಹಿತ್ಯಾಸಕ್ತರನ್ನು ಸೇರಿಸಿ ರಚಿಸಿರುವ ಕನ್ನಡ ಬರಹಗಳ ಕೈಪಿಡಿಯ ‘ಸ್ನೇಹ ಕೂಟ’ ಕನ್ನಡ ಕಥಾಗುಚ್ಛದ ಮಂದಿಗೆ ಕಣಿವೆಯ ರಾಮಲಿಂಗೇಶ್ವರ ಸಭಾಂಗಣ ಭಾನುವಾರ ವೇದಿಕೆಯಾಗಿತ್ತು.
ಕನ್ನಡ ಕಥಾ ಗುಚ್ಛ ಬರಹಗಳ ಕೈಪಿಡಿಯ ಜಾಲತಾಣದ ಸಾಹಿತ್ಯ ಬಳಗದ ಸ್ನೇಹ ಕೂಟದ ಸಂಸ್ಥಾಪಕಿ ಲತಾ ಜೋಷಿ ನೇತೃತ್ವದಲ್ಲಿ ಹೊರ ಜಿಲ್ಲೆಗಳ ನೂರಾರು ಮಂದಿ ಸಾಹಿತಿಗಳು ಸೇರಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಕೊಡಗಿನ ಕಲೆ, ಸಂಸ್ಕೃತಿ, ಆಚಾರ ವಿಚಾರಗಳು ಮೇಳೈಸುವ ವಿವಿಧ ಕಲಾ ಪ್ರಾಕಾರಗಳು ನಡೆದವು.ಪ್ರಾಸ್ತಾವಿಕ ನುಡಿಗಳಾಡಿದ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಅನೇಕ ಜಿಲ್ಲೆಗಳ ಸಾಹಿತ್ಯಾಸಕ್ತರನ್ನು ಸೇರಿಸಿ ಸ್ನೇಹ ಬಳಗ ಕಟ್ಟಿ ಸಾಹಿತ್ಯಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದರು.ಸ್ನೇಹ ಕೂಟದ ಅಧ್ಯಕ್ಷೆ ಲತಾ ಜೋಷಿ ಮಾತನಾಡಿ, ಸಂಯೋಜಕಿ ಸುಮಾ ಕಳಸಾಪೂರ್ ಫೇಸ್ ಬುಕ್ ಸಾಹಿತ್ಯ ವೇದಿಕೆ ಕಳೆದ ಆರು ವರ್ಷಗಳ ಹಿಂದೆ ಆರಂಭವಾಯಿತು ಎಂದು ಮಾಹಿತಿ ಒದಗಿಸಿದರು.
ಇದರಲ್ಲಿ ಸಾಹಿತ್ಯ ಪ್ರಾಕಾರಗಳ ಕೃಷಿ ಮಾಡುವ ಬೇರೆ ಬೇರೆ ಜಿಲ್ಲೆಗಳ ಸಹಸ್ರಾರು ಮಂದಿ ಸದಸ್ಯರಾಗಿದ್ದಾರೆ.ನಮ್ಮಲ್ಲಿರುವ ಸದಸ್ಯರೇ ಬರೆಯುವ ಅರ್ಥಗರ್ಭಿತ ಸಾಹಿತ್ಯಗಳ ಸಂಗ್ರಹಗಳನ್ನು ಕಲೆ ಹಾಕಿ ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿದ್ದೇವೆ. ಸ್ನೇಹ ಕೂಟದ ಸದಸ್ಯರೆಲ್ಲರೂ ಫೇಸ್ ಬುಕ್ ನಲ್ಲಿಯೇ ಚರ್ಚಿಸಿ ತೀರ್ಮಾನಗಳನ್ನು ಕೈಗೊಂಡು ವರ್ಷದಲ್ಲಿ ಎರಡು ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದು ಮಾಹಿತಿ ನೀಡಿದರುಪ್ರತೀ ವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸಾಹಿತ್ಯ ಪ್ರವಾಸ ಹಮ್ಮಿಕೊಂಡು ಅಲ್ಲಿನ ಪ್ರಕೃತಿ, ಪರಿಸರ ಹಾಗೂ ಜನಜೀವನದ ಜೊತೆಗೆ ಅಲ್ಲಿನ ಸಾಂಸ್ಕ್ರತಿಕ ವೈಭವಗಳನ್ನು ಅರಿಯುವ ಕೆಲಸ ಮಾಡುತ್ತೇವೆ ಎಂದು ಚಟುವಟಿಕೆಗಳ ಬಗ್ಗೆ ವಿವರ ನೀಡಿದರು.
ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಕೊಡವ ಸಮಾಜದ ಮಹಿಳೆಯರು ಕೊಡವ ಹಾಡಿಗೆ ನೃತ್ಯ ನಡೆಸಿಕೊಟ್ಟರು.ಮಿಲನ ಭರತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರೆ ಭಾಷೆ ಸಂಸ್ಕೃತಿ ಸಾರುವ ಸುಗ್ಗಿ ಸುವ್ವಾಲೆ ನೃತ್ಯ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ. ಜಿ. ಅನಂತಶಯನ, ಜಯಶ್ರೀ ಅನಂತ ಶಯನ, ರಂಜಿತ್ ಹಾಗೂ ಕೌಸರ್ ಅವರಿಂದ ಹುತ್ತರಿ ಹಾಡು, ಕೊಕ್ಕಲೆರ ಧರಣಿ ತಂಡದಿಂದ ಕನ್ನಡ ಹಾಡು, ಭಾವಗೀತೆ, ಜಾನಪದ ಗೀತೆ ಮೊದಲಾದ ನೃತ್ಯ ವೈಭವಗಳು ನಡೆದವು.
ಕನ್ನಡ ಕಥಾ ಗುಚ್ಛದ ಸಂಘಟಕ ಚಾಮರಾಜನಗರದ ಬಾಹುಬಲಿ ಜಯರಾಜು, ಹಿರಿಯ ಸಂಘಟಕ ಕೆ.ವಿ.ಶಶಿಧರ್, ಆಪ್ತ ಸಲಹೆಗಾರ ಡಿ.ಮಲ್ಲಾರೆಡ್ಡಿ, ಪ್ರಮುಖರಾದ ಗಿರೀಶ್ ಕುಲಕರ್ಣಿ, ಚಂದ್ರಶೇಖರ್, ರಾಘವೇಂದ್ರ ಇನಾಮ್ ದಾರ್, ಹರೀಶ್ ಕುಮಾರ್ ರಾವ್, ಸುಜಾತ ರೆಡ್ಡಿ, ಇಂದೂಮಣಿ, ಕೊಡಗಿನ ಸದಸ್ಯರಾದ ನೌಷಧ್ ಜನ್ನತ್, ಇರ್ಫಾನ್ ಹಸನ್ ಕುಟ್ಟಿ, ಸೌಮ್ಯ ಉಮೇಶ್, ಕೃಪಾ ದೇವರಾಜು,ಹೇಮಂತ್ ಪಾರೆರ, ನೂತನ್, ಶಿಲ್ಪ, ಪವಿತ್ರ, ರೇಣುಕಾ, ಜಯಶ್ರೀಅನಂತಶಯನ, ಕೃಪಾ ದೇವರಾಜ್, ಹಾ.ತಿ. ಜಯಪ್ರಕಾಶ್ ಹಾಗೂ ಮಾಲತಿ ಭಾರದ್ವಾಜ್, ಸೂರ್ಯನಾರಾಯಣ ಹಾಗೂ ಕಣಿವೆ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್ ಇದ್ದರು.ಸಾಹಿತಿ ಕಣಿವೆಯ ಭಾರದ್ವಾಜ್ ಆನಂದ ತೀರ್ಥ ಕುಟುಂಬ ಬೆಳಗ್ಗೆ ಹಾಗೂ ಮಧ್ಯಾಹ್ನದ ಊಟೋಪಚಾರಗಳ ವ್ಯವಸ್ಥೆ ಕಲ್ಪಿಸಿದ್ದರು. ಸ್ನೇಹ ಕೂಟದ ಪ್ರಮುಖರಿಗೆ ಗಿಡಗಳನ್ನು ನೀಡಿ ಗೌರವಿಸಲಾಯಿತು.ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೆ ಎನ್ ಸುರೇಶ್, ವೈದ್ಯ ಸೂರ್ಯ ಕುಮಾರ್, ಬಿ. ಜಿ. ಅನಂತ ಶಯನ ಹಾಗೂ ಸಂಘಟಕರನ್ನು ಸನ್ಮಾನಿಸಲಾಯಿತು.