ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕರ್ನಾಟಕ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮಹರ್ಷಿ ವಾಲ್ಮೀಕಿ ಜಯಂತಿಯಂದು ಸಮುದಾಯದ ವಿಶೇಷ ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡಿ ಅವರಿಗೆ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸುತ್ತದೆ.ಪ್ರಸ್ತುತ 2025ರ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಹಿರಿಯ ರಂಗತಜ್ಞ, ನಿರ್ದೇಶಕ, ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಲೇಖಕ ಪಿ.ತಿಪ್ಪೇಸ್ವಾಮಿಯವರಿಗೆ ಘೋಷಿಸಿದ್ದು ಅ.7ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪಿ.ತಿಪ್ಪೇಸ್ವಾಮಿಯವರಿಗೆ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಎಸ್.ಜ್ಯೋತಿ ಈ ಬಗ್ಗೆ ಪ್ರಕಟಣೆ ನೀಡಿ ರಾಜ್ಯದ ವಿವಿಧ ರಂಗದಲ್ಲಿ ಸೇವೆಸಲ್ಲಿಸಿದ ವಾಲ್ಮೀಕಿ ಸಮುದಾಯದ ಹಿರಿಯರನ್ನು ಗುರುತಿಸಿ ಗೌರವಿಸಲಾಗಿದೆ. ಚಳ್ಳಕೆರೆ ನಗರದ ವಿಠಲನಗರ ನಿವಾಸಿ ಪಿ.ತಿಪ್ಪೇಸ್ವಾಮಿಯವರಿಗೆ ಪ್ರಸ್ತುತ ವರ್ಷದ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ದೊರಕಿದೆ ಎಂದಿದ್ದಾರೆ.ಹಿರಿಯ ರಂಗತಜ್ಞ ಪಿ.ತಿಪ್ಪೇಸ್ವಾಮಿ ಕಳೆದ ಸುಮಾರು 50 ವರ್ಷಗಳಿಂದ ಕಲೆ, ನಾಟಕ, ರಂಗಭೂಮಿ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ತಾಲೂಕಿನಲ್ಲಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ನೆರವು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕು ಅಲ್ಲದೆ, ಜಿಲ್ಲೆಯ ಬಹುತೇಕ ಭಾಗಗಳ ಹಿರಿಯ ರಂಗಕಲಾವಿದರಿಗೆ ಇವರು ಆಸರೆಯಾಗಿದ್ದಾರೆ. ಮಾಜಿ ಸಚಿವ ತಿಪ್ಪೇಸ್ವಾಮಿಯವರ ಒಡನಾಡಿಯಾಗಿದ್ದು, ಅವರೊಂದಿಗೆ ಅನೇಕ ಪಾತ್ರಗಳಲ್ಲಿ ನಡೆಸಿದ್ದಾರೆ. ಅನೇಕ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿ, ನಿರ್ದೇಶಿಸಿದ್ದಾರೆ. ಹಿರಿಯ ರಂಗತಜ್ಞ ಪಿ.ತಿಪ್ಪೇಸ್ವಾಮಿಯವರ ಸಾಮಾಜಿಕ ಸೇವೆ ಹಾಗೂ ಕಳಕಳಿ ಗುರುತಿಸಿ ರಾಜ್ಯ ಸರ್ಕಾರ 2023ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಈಗ ಮತ್ತೊಮ್ಮೆ ಎರಡನೇ ಬಾರಿಗೆ ರಾಜ್ಯಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಲಭಿಸಿದೆ. ವಿಶೇಷವಾಗಿ ಚಳ್ಳಕೆರೆ ತಾಲೂಕು ಮಹರ್ಷಿ ವಾಲ್ಮೀಕಿ ಪ್ರಶಸ್ತಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಮೊದಲ ಬಾರಿಗೆ ಮಾಜಿ ಸಚಿವ ತಿಪ್ಪೇಸ್ವಾಮಿ, ಎರಡನೇ ಬಾರಿಗೆ ನನ್ನಿವಾಳದ ಕಿಲಾರಿ ಜ್ಯೋಗಯ್ಯಗೆ ದೊರೆಕಿದ್ದು, ಮೂರನೇ ಬಾರಿ ಪಿ.ತಿಪ್ಪೇಸ್ವಾಮಿಯವರಿಗೆ ದೊರಕಿದೆ.
ಮಹರ್ಷಿ ವಾಲ್ಮೀಕಿ ಪ್ರಶಸ್ತಿ ವಿಜೇತ ಪಿ.ತಿಪ್ಪೇಸ್ವಾಮಿಯವರನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಬಾಳೆಮಂಡಿ ರಾಮದಾಸ್, ಕೆ.ಟಿ.ಕುಮಾರಸ್ವಾಮಿ, ಸಿ.ಟಿ.ಶ್ರೀನಿವಾಸ್, ಕೆ.ಸೂರನಾಯಕ, ಬಿ.ತಿಮ್ಮಣ್ಣ ಮರಿಕುಂಟೆ, ಯು.ಎಸ್.ವಿಷ್ಣುಮೂರ್ತಿರಾವ್, ಎಂ.ಎನ್.ಮೃತ್ಯುಂಜಯ, ಜಿ.ಟಿ.ವೀರಭದ್ರಸ್ವಾಮಿ, ಸಿ.ಟಿ.ವೀರೇಶ್, ಎಲ್‌ಐಸಿ ತಿಪ್ಪೇಸ್ವಾಮಿ ಎಸ್.ಟಿ.ತಾಲೂಕು ಕಲ್ಯಾಣಾಧಿಕಾರಿ ಎಂ.ಟಿ.ಶಿವರಾಜ್, ಮುಂತಾದವರು ಅಭಿನಂದಿಸಿದ್ದಾರೆ.