ವಾಲ್ಮೀಕಿ ನಿಗಮ ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೆದಕಿದಷ್ಟೂ ಅಕ್ರಮದ ಹೂರಣ ಬಯಲು

| Published : Jul 17 2024, 12:53 AM IST

ವಾಲ್ಮೀಕಿ ನಿಗಮ ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೆದಕಿದಷ್ಟೂ ಅಕ್ರಮದ ಹೂರಣ ಬಯಲು
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಐಟಿ ಅಧಿಕಾರಿಗಳು ಬಳ್ಳಾರಿ ನಗರ ಹಾಗೂ ತಾಲೂಕಿನ ಐವರಿಗೆ ನೊಟೀಸ್ ಜಾರಿಗೊಳಿಸಿದ್ದಾರೆ ಎಂದು ತಿಳಿದು ಬಂದಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಕೆದಕಿದಷ್ಟೂ ಅವ್ಯವಹಾರದ ಹೂರಣ ಹೊರ ಬರುತ್ತಿದೆ. ಅಕ್ರಮದ ಜಾಡು ಹಿಡಿದು ಹೊರಟ ಎಸ್‌ಐಟಿ ಅಧಿಕಾರಿಗಳಿಗೆ, ಬಳ್ಳಾರಿ ಜಿಲ್ಲೆಯಲ್ಲಿಯೇ ಕೆಲವು ಜನರ ಖಾತೆಗೆ ವರ್ಗಾವಣೆಯಾಗಿರುವುದು ತನಿಖೆ ವೇಳೆ ಬಯಲಾಗಿದೆ.

ಒಂದೆಡೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ತಂಡ, ಬೆಂಗಳೂರು, ಬಳ್ಳಾರಿ, ರಾಯಚೂರು, ಮುಂಬೈ, ಚೆನ್ನೈ ಹಾಗೂ ಹೈದರಾಬಾದ್ ಸೇರಿದಂತೆ 20ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ, ಪರಿಶೀಲನೆ ನಡೆಸಿರುವ ನಡುವೆಯೇ ಎಸ್‌ಐಟಿ ಅಧಿಕಾರಿಗಳು ಸಹ ಪ್ರಕರಣದಲ್ಲಿ ಸಿಲುಕಿಕೊಂಡಿರುವವರ ಹುಡುಕಾಟ ಮುಂದುವರಿಸಿದ್ದಾರೆ.

ಎಸ್‌ಐಟಿ ಅಧಿಕಾರಿಗಳು ಬಳ್ಳಾರಿ ನಗರ ಹಾಗೂ ತಾಲೂಕಿನ ಐವರಿಗೆ ನೊಟೀಸ್ ಜಾರಿಗೊಳಿಸಿದ್ದಾರೆ ಎಂದು ತಿಳಿದು ಬಂದಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಬಳ್ಳಾರಿ ತಾಲೂಕಿನ ಕೃಷ್ಣಾನಗರ ಕ್ಯಾಂಪ್, ಯರ್ರಂಗಳಿ ಕ್ಯಾಂಪ್ ಹಾಗೂ ಬಳ್ಳಾರಿಯ ಕೆಲ ವ್ಯಕ್ತಿಗಳ ಹೆಸರಿನಲ್ಲಿ ಹಣ ವರ್ಗಾವಣೆಯಾಗಿರುವ ಕುರಿತು ಎಸ್‌ಐಟಿ ತನಿಖೆಯಲ್ಲಿ ಬಯಲಾಗಿದೆ ಎಂದು ಹೇಳಲಾಗುತ್ತಿದೆ. ಕೆಲವರಿಗೆ ಈಗಾಗಲೇ ನೊಟೀಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಏತನ್ಮಧ್ಯೆ ಬಳ್ಳಾರಿ ತಾಲೂಕಿನ ಕೃಷ್ಣಾನಗರ ಕ್ಯಾಂಪ್‌ನ ನಿವಾಸಿ ನಾಗೇಶ್ವರ ರಾವ್ ಅವರ ಹೆಸರಿನಲ್ಲಿ ₹10 ಲಕ್ಷ ವರ್ಗಾವಣೆಗೊಂಡಿರುವ ಮಾಹಿತಿ ಎಸ್‌ಐಟಿಗೆ ಲಭ್ಯವಾಗಿದೆ. ನಿಗಮದ ಹಣ ವರ್ಗಾವಣೆಯಾದ 200 ಜನರ ಪಟ್ಟಿಯಲ್ಲಿ ಕೃಷ್ಣಾನಗರ ಕ್ಯಾಂಪ್‌ನ ವ್ಯಕ್ತಿ ನಾಗೇಶ್ವರರಾವ್ ಅವರು 77ನೇಯವರು. ಮೂಲತಃ ಬಳ್ಳಾರಿ ತಾಲೂಕಿನ ಕೃಷ್ಣಾನಗರ ಕ್ಯಾಂಪ್‌ನವರಾದ ರಾವ್, ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಈ ವ್ಯಕ್ತಿಗೆ ನೊಟೀಸ್ ನೀಡಿ ಕರೆಸಿಕೊಂಡು ವಿಚಾರಣೆ ನಡೆಸಿರುವ ಎಸ್‌ಐಟಿ ಅಧಿಕಾರಿಗಳು, ನಿಗಮದ ಹಣ ತನ್ನ ಖಾತೆಗೆ ವರ್ಗಾವಣೆಯಾಗಿದ್ದು ಹಣ ವಾಪಾಸ್ ನೀಡುವಂತೆ ಸೂಚನೆ ನೀಡಿದ್ದಾರೆ. ತನ್ನ ಖಾತೆಗೆ ನಿಗಮದ ಅಕ್ರಮದ ಹಣ ವರ್ಗಾವಣೆಯಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳುತ್ತಿದ್ದಂತೆಯೇ

ನಾಗೇಶ್ವರ ರಾವ್ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ನಾಗೇಶ್ವರರಾವ್ ಅವರು ನೆಕ್ಕಂಟಿ ನಾಗರಾಜ್ ಅವರ ಹತ್ತಿರದ ಸಂಬಂಧಿ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.

"ಕೆಲ ತಿಂಗಳ ಹಿಂದೆ ನನ್ನ ಸ್ನೇಹಿತರೊಬ್ಬರಿಗೆ ₹10 ಲಕ್ಷ ಹಣ ನೀಡಿದ್ದೆ. ಅವರೇ ಹಣ ಖಾತೆಗೆ ಹಾಕಿರಬಹುದು ಎಂದು ಸುಮ್ಮನಾಗಿದ್ದೆ. ಆದರೆ, ಅದು ನಿಗಮದ ಅಕ್ರಮದ ಹಣ ಎಂದು ಗೊತ್ತಾಗಿಲ್ಲ " ಎಂದು ನಾಗೇಶ್ವರರಾವ್ ಅವರು ಎಸ್‌ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ. ಹಣ ವಾಪಸ್ ನೀಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ, ನಾನೀಗಾಗಲೇ ಹಣ ಖರ್ಚು ಮಾಡಿಕೊಂಡಿದ್ದೇನೆ. ಹಣ ಹೊಂದಿಸಲು ಒದ್ದಾಡುತ್ತಿದ್ದೇನೆ ಎಂದು ಆಪ್ತರ ಬಳಿ ರಾವ್ ಹೇಳಿಕೊಂಡಿದ್ದಾರೆ.

ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ಬಳ್ಳಾರಿಯಷ್ಟೇ ಅಲ್ಲ; ರಾಯಚೂರು, ತುಮಕೂರು, ಮಂಡ್ಯ ಜಿಲ್ಲೆಗಳ ಕೆಲ ವ್ಯಕ್ತಿಗಳ ಹೆಸರಿನಲ್ಲಿ ವರ್ಗಾವಣೆಯಾಗಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು, ವಿಚಾರಣೆ ತೀವ್ರಗೊಳಿಸಿದ್ದಾರೆ. ನಿಗಮದ ಹಣ ಅಕ್ರಮ ವರ್ಗಾವಣೆಯ ಪ್ರಕರಣದ ತನಿಖೆಯನ್ನು ಎಸ್‌ಐಟಿ ಹಾಗೂ ಇಡಿ ಅಧಿಕಾರಿಗಳು ಮತ್ತಷ್ಟೂ ಚುರುಕುಗೊಳಿಸಿದ್ದು, ಮಾಜಿ ಸಚಿವ ನಾಗೇಂದ್ರ ಅವರ ಆಪ್ತರಿಗೆ ನಡುಕು ಶುರುವಾಗಿದೆ.