ಸಾರಾಂಶ
ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಬಿಜೆಪಿ ಎಸ್‌ಟಿ ಮೋರ್ಚಾ ವತಿಯಿಂದ ಗದಗದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿದರು.
ಗದಗ: ಬಿಜೆಪಿ ಜಿಲ್ಲಾ ಎಸ್‌ಟಿ ಮೋರ್ಚಾ ವತಿಯಿಂದ ಶುಕ್ರವಾರ ಗದಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಪ ಸದಸ್ಯ ಎಸ್.ವಿ. ಸಂಕನೂರ, ಪರಿಶಿಷ್ಟ ಪಂಗಡದ ಅನುದಾನ ₹187 ಕೋಟಿ ಸಂಶಯಾಸ್ಪದ ಖಾತೆಗೆ ವರ್ಗಾವಣೆ ಮಾಡಿ, ವಾಲ್ಮೀಕಿ ನಿಗಮದಲ್ಲಿದ್ದ ಸರ್ಕಾರಿ ಹಣವನ್ನು ಕಾಂಗ್ರೆಸ್ ಚುನಾವಣಾ ವೆಚ್ಚಕ್ಕೆ ಬಳಕೆ ಮಾಡಿದೆ. ರಾಜ್ಯದ ಜನರ ದುಡ್ಡನ್ನು ಗೋಲ್‌ಮಾಲ್ ಮಾಡಿರುವ ಕಾಂಗ್ರೆಸ್ ಸರ್ಕಾರದ ಆಡಳಿತದಿಂದಾಗಿ ಅಮಾಯಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅದರ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು. ಸರ್ಕಾರದಲ್ಲಿರುವ ಪ್ರಭಾವಿಗಳು ನಡೆಸಿರುವ ಅವ್ಯವಹಾರದಿಂದ ಮನನೊಂದ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೊಂದು ಗಂಭೀರ ಪ್ರಕರಣವಾಗಿದ್ದು, ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ಬಿಜೆಪಿ ಆಡಳಿತ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಯೋಜನೆಗಳಿಗೆ ₹28,234 ಕೋಟಿ ಮೀಸಲಿಡಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೆ ವರ್ಷದಲ್ಲಿ ಎಸ್‌ಟಿ ನಿಗಮಗಳಲ್ಲಿ ಅವ್ಯವಹಾರ ಮಾಡಿದೆ, ಈ ಮೂಲಕ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ ಎಂದು ಹೇಳಿದರು.
ಸಚಿವ ನಾಗೇಂದ್ರ ರಾಜೀನಾಮೆ ಇದಕ್ಕೆ ಪರಿಹಾರವಲ್ಲ, ಇದರ ಹಿಂದೆ ಇನ್ನು ಬಹಳಷ್ಟು ಜನರಿದ್ದಾರೆ. ಕಾಂಗ್ರೆಸ್ ರಾಜ್ಯದ ಜನತೆಗೆ ಗ್ಯಾರಂಟಿ ಎಂಬ ನೆಪವೊಡ್ಡಿ ಎಸ್‌ಸಿ, ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಳ್ಳುವುದಲ್ಲದೇ ವಾಲ್ಮೀಕಿ ನಿಗಮದ ಹಣವನ್ನು ಕೂಡಾ ದುರ್ಬಳಕೆ ಮಾಡಿಕೊಂಡಿದೆ. ಅಲ್ಲದೆ ಅಧಿಕಾರಿ ಸಾವಿಗೆ ಕಾರಣವಾಗಿದೆ. ರಾಜ್ಯದ ಜನತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬುದ್ಧಿ ಕಲಿಸಿದ್ದಾರೆ ಎಂದು ಹೇಳಿದರು.ಎಸ್‌ಟಿ ಮೋರ್ಚಾ ಗದಗ ಜಿಲ್ಲಾಧ್ಯಕ್ಷ ಈಶ್ವರಪ್ಪ ರಂಗಪ್ಪನವರ ಮಾತನಾಡಿ, ರಾಜ್ಯದಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆಗೆ ತಕ್ಕ ಪಾಠವನ್ನು ರಾಜ್ಯದಲ್ಲಿ ನಮ್ಮ ಸಮುದಾಯ ಬರುವ ದಿನಗಳಲ್ಲಿ ಕಲಿಸುತ್ತದೆ. ಈ ಅವ್ಯವಹಾರಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಯುವ ಮುಖಂಡ ಉಮೇಶಗೌಡ ಪಾಟೀಲ, ಲಿಂಗರಾಜ ಪಾಟೀಲ, ಫಕ್ಕಿರೇಶ ರಟ್ಟಿಹಳ್ಳಿ, ಆರ್.ಕೆ. ಚವ್ಹಾಣ, ಎಂ.ಎಸ್. ಕರೀಗೌಡ್ರ, ಜಗನ್ನಾಥಶಾ ಭಾಂಡಗೆ, ಈಶಪ್ಪ ನಾಯ್ಕರ, ಎಚ್.ಕೆ. ಹಟ್ಟಿಮನಿ, ಉಷಾ ದಾಸರ, ವಿನಾಯಕ ಮಾನ್ವಿ, ಅನಿಲ ಅಬ್ಬಿಗೇರಿ, ಮುತ್ತಣ್ಣ ಕಡಗದ, ರವಿ ಕರಿಗಾರ, ನಿಂಗಪ್ಪ ಮಣ್ಣೂರ, ಮುತ್ತಣ್ಣ ಜಂಗಣ್ಣವರ, ವೈ.ಪಿ. ಅಡ್ನೂರ, ಯಲ್ಲಪ್ಪ ಶೇರಿ, ಬೂದಪ್ಪ ಹಳ್ಳಿ, ಭದ್ರೇಶ ಕುಸ್ಲಾಪುರ, ಮುತ್ತಪ್ಪ ಮೂಲಿಮನಿ, ನಾಗರಾಜ ತಳವಾರ, ಸಿದ್ದು ಪಲ್ಲೇದ, ಗಂಗಾಧರ ಹಬೀಬ, ದೇವಪ್ಪ ಗೊಟೂರ, ರಾಘವೇಂದ್ರ ಯಳವತ್ತಿ, ಮಾಧುಸಾ ಮೇರವಾಡೆ, ಲಕ್ಷ್ಮೀ ಶಂಕರ ಕಾಕಿ, ಮುತ್ತು ಮುಶಿಗೇರಿ, ಅಶೋಕ ಸಂಕಣ್ಣವರ, ಸುರೇಶ ಚಿತ್ತರಗಿ, ಅಶೋಕ ಕರೂರ, ವೆಂಕಟೇಶ ಕೊಣಿ, ಮಂಜುನಾಥ ತಳವಾರ, ವಸಂತ ಮೇಟಿ, ಅಶೋಕ ನವಲಗುಂದ, ಮಾಂತೇಶ ನಲವಡಿ, ಶಿವು ಹಿರೇಮನಿಪಾಟೀಲ, ಇರ್ಷಾದ್ ಮಾನ್ವಿ, ನಾಗರಾಜ ಕುಲಕರ್ಣಿ, ಗೋವಿಂದರಾಜ ಪೂಜಾರ, ಸಂತೋಷ ಅಕ್ಕಿ, ನಿರ್ಮಲಾ ಕೊಳ್ಳಿ, ಬಸವರಾಜ ಹರ್ಲಾಪುರ, ಬಸವರಾಜ ಬಡಿಗೇರ, ಮಹೇಶ ಶಿರಹಟ್ಟಿ, ಮಾರುತಿ ನಾಗರಳ್ಳಿ, ಪ್ರವೀಣ ಶಂಕಿನದಾಸರ, ಮಂಜುನಾಥ ಮುಳಗುಂದ, ಅಯ್ಯಪ್ಪ ಅಂಗಡಿ, ಶರಣಪ್ಪ ಚಿಂಚಲಿ, ರತ್ನಾ ಕುರಗೋಡ, ರೇಖಾ ಬಂಗಾರಶೆಟ್ಟರ, ಅಪ್ಪಣ್ಣ ಟೆಂಗಿನಕಾಯಿ, ಬಸವಂತಪ್ಪ ತಳವಾರ, ಯಲ್ಲಪ್ಪ ತಳವಾರ, ಲಕ್ಷ್ಮಣ ರಣತೂರ, ರಂಗಪ್ಪ ಯರಗೂಡಿ, ಪಾರಿಶನಾಥ ಮೆಲಾಣಿ, ವೀರಸಂಗಯ್ಯ ಮೊಕಾಶಿ, ಜಯಶ್ರೀ ಪಾಟೀಲ, ಜಯಶ್ರೀ ಅಣ್ಣಿಗೇರಿ ಹಾಜರಿದ್ದರು.