ರಾಮನ ವೈಭವೀಕರಿಸಿ ವಾಲ್ಮೀಕಿ ಗೌಣ ಸಲ್ಲದು

| Published : Jan 01 2024, 01:15 AM IST

ಸಾರಾಂಶ

ಮೈಸೂರುನಗರದ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದ ಜಿಲ್ಲಾ ಸಮಿತಿಯು ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ 2024ನೇ ಸಾಲಿನ ಕ್ಯಾಲೆಂಡರ್‌ ಬಿಡುಗಡೆ

- ಚಿಂತಕ ಆರ್‌. ಮಹದೇವಪ್ಪ ಸಲಹೆ

- ಎಸ್ಸಿ, ಎಸ್‌ಟಿ ನೌಕರರ ಸಂಘದ ಕ್ಯಾಲೆಂಡರ್‌ ಬಿಡುಗಡೆ----

ಕನ್ನಡಪ್ರಭ ವಾರ್ತೆ ಮೈಸೂರು

ಅಯೋಧ್ಯೆ ರಾಮಮಂದಿರದಲ್ಲಿ ಮೊದಲು ವಾಲ್ಮೀಕಿಗೆ ನಮನ ಸಲ್ಲಬೇಕು. ವಾಲ್ಮೀಕಿಯ ವಿದ್ವತ್ತಿಗೆ ಗೌರವ ಸಲ್ಲಬೇಕು. ಆದರೆ, ರಾಮನ ವೈಭವೀಕರಿಸಿ ವಾಲ್ಮೀಕಿ ಗೌಣ ಮಾಡುವುದು ಸಲ್ಲದು ಎಂದು ಚಿಂತಕ ಆರ್‌. ಮಹದೇವಪ್ಪ ತಿಳಿಸಿದರು.

ನಗರದ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದ ಜಿಲ್ಲಾ ಸಮಿತಿಯು ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ 2024ನೇ ಸಾಲಿನ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಯೋಧ್ಯೆಯಲ್ಲಿ 30 ಸಾವಿರ ಕೋಟಿ ಖರ್ಚು ಮಾಡಿ ದೇಗುಲ ನಿರ್ಮಿಸುವ ವೈದಿಕರು ಎಂದಾದರೂ ವಾಲ್ಮೀಕಿ ಜಯಂತಿ ಆಚರಿಸಿದ್ದಾರೆಯೇ? ರಾಮನ ಆರಾಧಿಸಿ, ಹನುಮಂತನಿಗೆ ಪ್ರಚಾರ ಕೊಡುವ ವೈದಿಕರು, ವಾಲ್ಮೀಕಿಯನ್ನು ಪಕ್ಕಕ್ಕೆ ಸರಿಸುತ್ತಾರೆ. ಅಯೋಧ್ಯೆಯಲ್ಲಿ ನಿರ್ಮಿಸಿರುವ ರಾಮ ಮಂದಿರವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ದೂರಿದರು.

ಜಾತಿ ಇರುವ ತನಕ ಪ್ರೀತಿ ಇರಲ್ಲ. ಸೋದರಭಾವ ಉಂಟಾಗದೇ ಪ್ರಜಾಪ್ರಭುತ್ವಕ್ಕೆ ಅರ್ಥ ಇಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ನಡುವೆ ಭಾತೃತ್ವ ಬೆಸೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಅವರು ಸಲಹೆ ನೀಡಿದರು.

ಹೋರಾಟಗಾರ ಅಹಿಂದ ಜವರಪ್ಪ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ಶಿಕ್ಷಣ, ಉದ್ಯೋಗ, ಭೂಮಿ ಒಂದಂಶವಾಗಬೇಕು. ಸರ್ಕಾರಿ ನೌಕರರು ವಾರದಲ್ಲಿ ಒಂದು ದಿನ ತಮ್ಮೂರಿಗೆ ಹೋಗಿ ದಿಕ್ಕು ತಪ್ಪಿದ ಯುವಕರಿಗೆ ಸರಿ ದಾರಿ ತೋರಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಡಾ.ಡಿ. ಚಂದ್ರಶೇಖರಯ್ಯ ಮಾತನಾಡಿ, ಸರ್ಕಾರಿ ಉದ್ಯೋಗದಲ್ಲಿರುವ ಎಸ್ಸಿ, ಎಸ್ಟಿ ನೌಕರರಿಗೆ ಬಹಳ ಅನ್ಯಾಯವಾಗುತ್ತಿದೆ. ತಮ್ಮ ಸಮಸ್ಯೆಗಳನ್ನು ಚರ್ಚಿಸಲು ದಲಿತ ಸಚಿವರು ಸಮಯ ನೀಡುತ್ತಿಲ್ಲ. ಸಂಘಟನೆ ಬಲಿಷ್ಠವಾಗಿ ಅನ್ಯಾಯ ಪ್ರಶ್ನಿಸದಿದ್ದರೆ ಮತ್ತಷ್ಟು ತೊಂದರೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಸಂಘದ ಮಾಜಿ ಜಿಲ್ಲಾಧ್ಯಕ್ಷ ಡಿ. ಹರೀಶ್‌ ಬಾಬು, ಗೌರವ ಸಲಹೆಗಾರ ದ್ಯಾವಪ್ಪನಾಯಕ, ಉಪಾಧ್ಯಕ್ಷ ಮಹದೇವನಾಯಕ,

ಪ್ರಧಾನ ಕಾರ್ಯದರ್ಶಿ ಪಿ. ರಾಘವೇಂದ್ರ ಇದ್ದರು. ಗಾನಸುಮಾ ಸ್ವಾಗತಿಸಿದರು. ಮಹದೇವ ನಿರೂಪಿಸಿದರು. ಭಾಮಾ ವಂದಿಸಿದರು.