ಸಾರಾಂಶ
ವಾಲ್ಮೀಕಿ ವಿಚಾರ ಯುವ ಸಮೂಹ ಅರ್ಥೈಸಿಕೊಳ್ಳಬೇಕಾಗಿದೆ
ಕನಕಗಿರಿ: ರಾಮಾಯಣ ಕಾವ್ಯ ರಚಿಸಿದ ವಾಲ್ಮೀಕಿ ಮಹರ್ಷಿಗಳು ವಿಶ್ವಕ್ಕೆ ಜೈ ಶ್ರೀರಾಮ ಘೋಷಣೆ ಪರಿಕಲ್ಪನೆ ನೀಡಿದ್ದಾರೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಗೌರವಾಧ್ಯಕ್ಷ ಮುದಿಯಪ್ಪ ನಾಯಕ ಹೇಳಿದರು.
ಅವರು ಪಟ್ಟಣದಲ್ಲಿನ ವಾಲ್ಮೀಕಿ ವೃತ್ತಕ್ಕೆ ವಾಲ್ಮೀಕಿ ಜಯಂತಿ ನಿಮಿತ್ತ ಪುಷ್ಪ ನಮನ ಸಲ್ಲಿಸಿ ಮಂಗಳವಾರ ಮಾತನಾಡಿದರು. ಕೊಲೆ,ದರೋಡೆಯಲ್ಲಿ ಕಸುಬಾಗಿರಿಸಿಕೊಂಡಿದ್ದ ರತ್ನಾಕರನಿಗೆ (ವಾಲ್ಮೀಕಿ) ಜ್ಞಾನೋದಯವಾಗಿ ಮಹರ್ಷಿಯಾದ. ಖಡ್ಗ ಬಿಟ್ಟು ಲೇಖನಿ ಹಿಡಿದು ಆದಿಕವಿಯಾದ.ಕೊನೆಗೆ ಶ್ರೀರಾಮ, ಆಂಜನೇಯ, ಸೀತಾಮಾತೆ ಸೇರಿದಂತೆ ಅನೇಕ ಮಹಾನ್ ಪುರುಷರ ಕುರಿತು ರಾಮಾಯಣ ಎಂಬ ಮಹಾಕಾವ್ಯ ರಚಿಸಿದ್ದಾರೆ.ಇಂತಹ ದಾರ್ಶನಿಕನ ಆದರ್ಶ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿವೆ ಎಂದರು.ನಂತರ ಸಮಾಜದ ಮುಖಂಡ ನರಸಪ್ಪ ಪೂಜಾರಿ ಮಾತನಾಡಿ, ವಾಲ್ಮೀಕಿ ವಿಚಾರ ಯುವ ಸಮೂಹ ಅರ್ಥೈಸಿಕೊಳ್ಳಬೇಕಾಗಿದೆ. ನಮ್ಮ ಧರ್ಮದಲ್ಲಿ ಹಿಂದಿನ ಕಾಲದ ಸ್ಥಿತಿಗತಿ ಹೇಗಿತ್ತು? ಎಂತಹ ಘಟನೆಗಳು ನಡೆಯುತ್ತಿದ್ದವು? ಹೀಗೆ ಹತ್ತಾರು ಪ್ರಶ್ನೆಗಳಿಗೆ ವಾಲ್ಮೀಕಿಯ ರಾಮಾಯಣದಲ್ಲಿ ಉತ್ತರ ಸಿಗಲಿದೆ. ನಮ್ಮ ಮಕ್ಕಳು ಮೊಬೈಲ್ ಗೀಳಿಗೆ ಸಿಲುಕಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೋಷಕರು ಸಂಸ್ಕಾರಯುತ ವಿದ್ಯೆಗೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ ಎಂದು ತಿಳಿಸಿದರು.
ಪ್ರಮುಖರಾದ ನಾಗೇಶಪ್ಪ ಮಲ್ಲಾಪೂರ, ಅಮರಪ್ಪ ಗದ್ದಿ, ಸಿದ್ದೇಶ ಹಿರೇಖೇಡ, ಸಿಂಧು ಬಲ್ಲಾಳ, ನಿಂಗಪ್ಪ ನಾಯಕ ನವಲಿ, ಶಿವಾನಂದ ಬೆನಕನಾಳ, ಹುಲಿಗೆಮ್ಮ ನಾಯಕ, ರಾಮು ಆಗೋಲಿ, ಪಂಪಾಪತಿ ಸೋಮಸಾಗರ, ರಾಮಣ್ಣ ಹೂಗಾರ, ಕರಿಯಪ್ಪ ಹನುಮನಾಳ, ಮಂಜುನಾಥ ನಾಯಕ ಸೇರಿದಂತೆ ವಾಲ್ಮೀಕಿ ಸಮಾಜದವರು ಇದ್ದರು.ವಿವಿಧೆಡೆ: ಕನಕಗಿರಿಯನ್ನಾಳಿದ ರಾಜಾ ಉಡಚಪ್ಪ, ಪರಸಪ್ಪ ನಾಯಕ, ರಾಣಿ ಗೌರಮ್ಮ ಸೇರಿ ವಿವಿಧ ದೊರೆಗಳನ್ನು ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಿ ಪುಷ್ಪ ಸಮರ್ಪಿಸಲಾಯಿತು.
ಇನ್ನೂ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಮಹರ್ಷಿ ವಾಲ್ಮೀಕಿ ಆರಾಧನೆ ನಡೆಯಿತು.