ಸಾರಾಂಶ
ಮಹರ್ಷಿ ವಾಲ್ಮೀಕಿ ಅವರು ಯಾವುದೇ ಒಂದು ಸಮಾಜಕ್ಕೆ ಸೀಮಿತರಾದವರಲ್ಲ ಸಮಸ್ತ ಭಾರತೀಯ ಸಂಸ್ಕೃತಿ ಪ್ರತಿನಿಧಿಯಾಗಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯ ಭೂಮಿ ರಾಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಮಹರ್ಷಿ ವಾಲ್ಮೀಕಿ ಅವರು ಯಾವುದೇ ಒಂದು ಸಮಾಜಕ್ಕೆ ಸೀಮಿತರಾದವರಲ್ಲ ಸಮಸ್ತ ಭಾರತೀಯ ಸಂಸ್ಕೃತಿ ಪ್ರತಿನಿಧಿಯಾಗಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯ ಭೂಮಿ ರಾಜು ತಿಳಿಸಿದರು. ಗುಬ್ಬಿ ತಾಲೂಕಿನ ಉನಗನಾಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ರಚಿಸಿದ ರಾಮಾಯಣವು ನಮ್ಮ ಬದುಕಿನ ಆದರ್ಶವಾಗಬೇಕು. ವಾಲ್ಮೀಕಿ ಮಹರ್ಷಿಗಳ ರಾಮರಾಜ್ಯ ದಾರಿಯಲ್ಲಿ ನಾವೆಲ್ಲರೂ ಕೂಡ ಸಾಗಬೇಕು. ವಾಲ್ಮೀಕಿ ಸಮುದಾಯವು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಬೇಕು ರತ್ನಾಕರ ವಾಲ್ಮೀಕಿಯಾಗಿ ತಾನು ಪಡೆದ ಜ್ಞಾನವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ನಮ್ಮ ದೇಶದಲ್ಲಿ ಸಂಸ್ಕೃತಿ ಧಾರ್ಮಿಕತೆ ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ಮಹರ್ಷಿ ವಾಲ್ಮೀಕಿ ಅಂತ ಮಹನೀಯರ ಕೊಡುಗೆ ಅಪಾರವಾಗಿದೆ ಎಂದರು. ರಾಮಾಯಣದ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿತ್ವ ಮೌಲ್ಯಗಳನ್ನು ನೀಡಿರುವ ಮಹರ್ಷಿಯವರು ಸಮಾಜದ ಸುಸ್ಥಿರತೆಗೆ ಕಾರಣರಾಗಿದ್ದಾರೆ. ಸಂಸ್ಕೃತದಲ್ಲಿ ಮೊಟ್ಟ ಮೊದಲು ರಚಿಸಿರುವ ರಾಮಾಯಣವೆಂಬ ಮಹಾಗ್ರಂಥದ ಚರಿತ್ರೆಯನ್ನು ಪ್ರತಿಯೊಬ್ಬರೂ ಕೂಡ ಅರ್ಥೈಸಿಕೊಂಡು ಅವರ ಮಾರ್ಗದರ್ಶನ ದಲ್ಲಿ ಸಾಗಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮುಖಂಡರಾದ ರಾಘವೇಂದ್ರ ನಾಯಕ್, ಮಹದೇವಯ್ಯ, ಸೋಮಣ್ಣ , ದ್ಯಾವರನಹಟ್ಟಿ ಮಹಾದೇವಯ್ಯ, ಅರ್ಚಕ ಚನ್ನ ಬಸವರಾಜು, ಮೀಸೆರಾಜು , ಪೆಟ್ಟಿಗೆ ರಂಗಯ್ಯ, ಶಿವಣ್ಣ, ಧರ್ಮಯ್ಯ, ವಾಲ್ಮೀಕಿ ಗೆಳೆಯರ ಬಳಗ ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.