ಧಾರ್ಮಿಕ ಭಾವನೆಯಿಂದ ವಾಲ್ಮೀಕಿ ಜಯಂತಿ ಆಚರಣೆ ಮಾದರಿ

| Published : Oct 08 2025, 01:00 AM IST

ಧಾರ್ಮಿಕ ಭಾವನೆಯಿಂದ ವಾಲ್ಮೀಕಿ ಜಯಂತಿ ಆಚರಣೆ ಮಾದರಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗದಲ್ಲಿ ವಾಲ್ಮೀಕಿ ಮಹರ್ಷಿ ಅವರ ಭಾವಚಿತ್ರವನ್ನು ವಿವಿಧ ಜಾನಪದ ಕಲಾ ಮೇಳದೊಂದಿಗೆ ವೀರಭದ್ರಸ್ವಾಮಿ ದೇವಾಲಯದಿಂದ ವೇದಿಕೆಯವರೆಗೆ ಮೆರವಣಿಗೆ ನಡೆಸಲಾಯಿತು. ಶಾಸಕ ಬಿ.ಜಿ.ಗೋವಿಂದಪ್ಪ ಸೇರಿ ಮುಖಂಡರು ಇದ್ದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಡಿಜೆ ಸಂಸ್ಕೃತಿಯಿಂದ ಹೊರಬಂದು ಧಾರ್ಮಿಕ ಭಾವನೆಯಿಂದ ಭಜನೆ ಡೊಳ್ಳು ವೀರಗಾಸೆ ಭಕ್ತಿಗೀತೆಗಳ ಮೂಲಕ ವಾಲ್ಮೀಕಿ ಜಯಂತಿ ಆಚರಣೆ ಮಾಡಿರುವುದು ಮಾದರಿಯಾಗಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ಪಟ್ಟಣದ ಅಶೋಕ ರಂಗಮಂದಿರದಲ್ಲಿ ಮಂಗಳವಾರ ತಾಲೂಕ ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ , ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಲ್ಮೀಕಿ ಮಹರ್ಷಿಗಳು ರಾಮಾಯಣ ರಚಿಸದಿದ್ದರೆ ಅಯೋಧ್ಯ ರಾಮ, ಸೀತಾರಾಮ, ಕೌಶಲ್ಯರಾಮ ಇವರ್ಯಾರು ಇರುತ್ತಿರಲಿಲ್ಲ ಕೀಳು ಜಾತಿಯವರಿಂದ ರಾಮಾಯಣ ಮಹಾಭಾರತ ಗ್ರಂಥಗಳನ್ನು ಬರೆಯಲು ಸಾಧ್ಯವೇ ಎಂದು ಕೆಲವು ಮುಂದುವರೆದ ಜಾತಿಯವರು ಸಂಶಯ ವ್ಯಕ್ತಪಡಿಸುವುದು ಸರಿಯಲ್ಲ. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಮತಪೆಟ್ಟಿಗೆಯಲ್ಲಿ ಮಹಾರಾಜ ಹೊರ ಬರುತ್ತಿದ್ದಾನೆ, ಇವರೆಲ್ಲರೂ ಹಿಂದುಳಿದ ಜಾತಿಯವರು ಎಂದರು.

ಶಿಕ್ಷಣ ಅಕ್ಷರ ಜ್ಞಾನ ಯಾವುದೇ ಜಾತಿಗೆ ಸೀಮಿತವಾದದಲ್ಲ ಕಲಿಯುವ ಆಸಕ್ತಿ ಇರುವವನಿಗೆ ಶಿಕ್ಷಣ ಜ್ಞಾನ ಬರುತ್ತದೆ ಅಂಬೇಡ್ಕರ್ ವಾಲ್ಮೀಕಿ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದ್ದಾರೆ. ತಾಲೂಕಿನ ಎಲ್ಲಾ ಸಮುದಾಯಗಳನ್ನ ಅಭಿವೃದ್ಧಿ ಮಾಡಲು ನನ್ನದೇ ಆದ ಸೇವೆ ಮಾಡಿದ್ದೇನೆ, ಅವರೆಲ್ಲರ ಪ್ರೀತಿ ವಾತ್ಸಲ್ಯದಿಂದ ನಾಲ್ಕು ಬಾರಿ ಶಾಸಕನಾಗಿದ್ದೇನೆ, ವಾಲ್ಮೀಕಿ ಸಮುದಾಯ ಸಾಕಷ್ಟು ಮತ ನೀಡಿ ನನ್ನ ಗೆಲುವಿಗೆ ಕಾರಣಿಕರ್ತರಾಗಿದ್ದಾರೆ. ಈ ಸಮುದಾಯಕ್ಕೆ ಹಕ್ಕು ಪತ್ರ ವಿತರಣೆ, ಸಮಾಜ ಕಲ್ಯಾಣ ಇಲಾಖೆಯಿಂದ ಗಂಗಾ ಕಲ್ಯಾಣ, ಸೇರಿದಂತೆ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಯಶಸ್ವಿಗೊಳಿಸಿದ್ದೇನೆ ಎಂದರು.

ಅನ್ಯ ಜಾತಿಯವರು ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ಸಿಂಧುತ್ವ ಪ್ರಮಾಣ ಪತ್ರ ಪಡೆದು ಸರ್ಕಾರಿ ಹುದ್ದೆಯನ್ನು ಅನುಭವಿಸುತ್ತಿದ್ದು ಸರ್ಕಾರದ ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ತಕ್ಷಣವೇ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಲಿದೆ. ಕುರುಬರನ್ನು ಎಸ್ಟಿಗೆ ಸೇರಿಸುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಿಯೂ ಹೇಳಿಲ್ಲ ಇದರ ಬಗ್ಗೆ ಗೊಂದಲ ಬೇಡ ಎಂದರು.

ತಹಸೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಎಂದರೆ ಜ್ಞಾನದ ಸಂಕೇತ ಪರಿವರ್ತನೆಯ ಸಂಕೇತ, ರಾಮಾಯಣ ಕೇವಲ ಒಂದು ಸಮುದಾಯ ಒಂದು ಕಾಲಘಟ್ಟಕ್ಕೆ ಸೀಮಿತವಾಗದೆ ಪ್ರಸ್ತುತ ಕಾಲಘಟ್ಟಕ್ಕೆ ಪ್ರತ್ಯಕ್ಷವಾಗಿರುವುದೇ ಅಹಿಂಸವಾದದ ರಾಮಾಯಣ ಮಹಾಕಾವ್ಯ. ಮಹಾತ್ಮಗಾಂಧಿಗೆ ಪ್ರಭಾವ ಬೀರಿದ ಗ್ರಂಥ ರಾಮಾಯಣ. ರಾಮಾಯಣ ಮಹಾ ಕಾವ್ಯದ ಮುಖಾಂತರ ಸಮಾಜ ಕುಟುಂಬ ಅಣ್ಣ ತಮ್ಮ ಅಕ್ಕ ತಂಗಿಯರ ಪಾತ್ರಗಳನ್ನ ನಿಜ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದರು.

ಪ್ರಸ್ತುತ ರಾಮಾಯಣದ ಮೌಲ್ಯಗಳು ಸಮಾಜದಲ್ಲಿ ಅನುಷ್ಠಾನಕ್ಕೆ ಬಾರದಿರುವುದು ದುರಂತ, ತಂದೆ ತಾಯಿಗಳನ್ನ ಮಕ್ಕಳು ವೃದ್ದಾಶ್ರಮಕ್ಕೆ ಕಳಿಸುತ್ತಿದ್ದಾರೆ, ಅಣ್ಣ ತಮ್ಮಂದಿರ ಮಧ್ಯೆ ಕಲಹ, ರಾಮಾಯಣದ ಮೌಲ್ಯಗಳನ್ನು ಅರಿತವರು ಸುಖಿ ಜೀವನ ನಡೆಸಬಲ್ಲರು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ರುದ್ರಪ್ಪ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷೆ ಗೀತಾ ಆಸಂದಿ, ಕಾಂಗ್ರೆಸ್ ಮುಖಂಡ ಅಲ್ತಾಫ್ ಪಾಷಾ, ವಾಲ್ಮೀಕಿ ಸಮಾಜದ ಅಧ್ಯಕ್ಷ ಎನ್ ತಿಪ್ಪೇಸ್ವಾಮಿ, ಕಾರ್ಯದರ್ಶಿ ರಂಗನಾಥ್, ಸಮಾಜ ಕಲ್ಯಾಣ ಅಧಿಕಾರಿ ಗೋಪಾಲಪ್ಪ, ಮಹಮ್ಮದ್ ಇಸ್ಮಾಯಿಲ್, ಕಾರೆಹಳ್ಳಿ ಬಸವರಾಜ್, ಮತ್ತಿತರರು ಹಾಜರಿದ್ದರು.