ಸಾರಾಂಶ
ಶಿವಮೊಗ್ಗ: ರಾಜ್ಯ ಸರ್ಕಾರ ವಾಲ್ಮೀಕಿ ಜಯಂತಿ ಈ ಬಾರಿ ಅದ್ಧೂರಿಯಾಗಿ ಆಚರಿಸಿದೆ. ವಿಶೇಷವಾಗಿ ಜಾಹಿರಾತು ನೀಡಿದ್ದು, ಅನೇಕ ಕಾರ್ಯಕ್ರಮಗಳನ್ನು ಘೋಷಿಸಿದೆ. ಆದರೆ, ಸರ್ಕಾರ ಯಾವ ಮುಖ ಇಟ್ಟು ಈ ಜಯಂತಿ ಆಚರಿಸುತ್ತಿದೆ ಎಂಬುದೇ ಗೊತ್ತಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಕಿಡಿಕಾರಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ್, ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ಈ ನಿಗಮದ ಅವ್ಯವಹಾರ ಬೆಳಕಿಗೆ ಬಂದಿದೆ. ಆದ್ದರಿಂದ ಸರ್ಕಾರ ಮೊದಲು ರಾಜ್ಯದ ಜನರ ಕ್ಷಮೆ ಕೇಳಿ ಬಳಿಕ ವಾಲ್ಮೀಕಿ ಜಯಂತಿ ಆಚರಣೆ ಮಾಡಬೇಕಿತ್ತು ಎಂದು ಹರಿಹಾಯ್ದರು.ಪ್ರಕರಣ ಬೆಳಕಿಗೆ ಬಂದಾಗ ಹಗರಣವೇ ನಡೆದಿಲ್ಲ, ಮಂತ್ರಿಗಳು ಭಾಗಿಯಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಚಂದ್ರಶೇಖರನ್ ಅವರ ಡೆತ್ ನೋಟ್‌ನಲ್ಲಿ ಮಂತ್ರಿಗಳ ಹೆಸರು ಇತ್ತು, ಆದರೂ ತನಿಖೆಗೆ ಎಸ್‌ಐಟಿ ನೇಮಕ ಮಾಡಿ ಎಫ್‌ಐಆರ್‌ನಲ್ಲಿ ಮಂತ್ರಿಗಳ ಹೆಸರು ಕೈಬಿಡಲಾಗಿತ್ತು. ಇಡಿ ಈ ಪ್ರಕರಣಕ್ಕೆ ಕೈಹಾಕಿದ ಮೇಲೆ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅದರಲ್ಲಿ ಸಚಿವ ನಾಗೇಂದ್ರರೇ ಈ ಪ್ರಕರಣದ ಕಿಂಗ್‌ಪಿನ್ ಎಂಬುದು ಗೊತ್ತಾಯಿತು ಎಂದು ಕುಟುಕಿದರು,
ಇಷ್ಟೆಲ್ಲ ಆದ ಬಳಿಕ ಸಿಎಂ ಸಿದ್ದಾರಾಮಯ್ಯ ಅವರು 187 ಕೋಟಿ ಅಲ್ಲ 87 ಕೋಟಿ ರು. ಹಗರಣ ಆಗಿದೆ ಎಂದು ಸ್ವತಃ ಸದನದಲ್ಲಿ ಹೇಳಿಕೆ ನೀಡಿದ್ದರು. ಇಡಿ ಚಾರ್ಜ್‌ಶೀಟ್‌ನಲ್ಲಿ 14.8 ಕೋಟಿ ರು. ಬಳ್ಳಾರಿ ಶಾಸಕರಾದ ಭರತ್ ರೆಡ್ಡಿ, ಕಂಪ್ಲಿ ಶಾಸಕ ಗಣೇಶ್, ಕೂಡ್ಲಿಗೆ ಶಾಸಕ ಶ್ರೀನಿವಾಸ್ ಅವರ ಮೂಲಕ ಮತದಾರರಿಗೆ ಹಂಚಲಾಗಿದೆ ಎಂದು ದಾಖಲೆ ಸಹಿತ ಇಡಿ ತಿಳಿಸಿದೆ. ಆದರೆ, ಎಸ್.ಐ.ಟಿ., ಚಾರ್ಜ್‌ಶೀಟ್‌ನಲ್ಲಿ ಈ ಯಾವ ಅಂಶಗಳಿಲ್ಲ. ಇದು ಈ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ. ಅದಕ್ಕಾಗಿಯೇ ಬಿಜೆಪಿ ಈ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದೆ. ಅಲ್ಲದೆ, ತೆಲಂಗಾಣದ ಹಲವು ಬೇನಾಮಿ ಖಾತೆಗಳಿಗೆ ನಿಗಮದ ಹಣ ಜಮೆಯಾಗಿದೆ. ಇದರ ಬಗ್ಗೆಯೂ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದೆ ಎಂದು ತಿಳಿಸಿದರು. ಮೃತ ಅಧಿಕಾರಿ ಚಂದ್ರಶೇಖರನ್ ಪತ್ನಿ ಕವಿತಾ ಅವರ ಹೇಳಿಕೆಯನ್ನು ಮೂರು ಬಾರಿ ಬದಲಾಯಿಸಲಾಗಿದೆ. ಶಿವಮೊಗ್ಗದ ಡಿವೈಎಸ್ಪಿ ಅವರು ತಾವೇ ಹೇಳಿಕೆ ಬರೆದು ಚಂದ್ರಶೇಖರನ್ ಪತ್ನಿಯ ಸಹಿ ಹಾಕಿಸಿಕೊಂಡಿದ್ದಾರೆ. ಡೆತ್‌ನೋಟ್ ಅನ್ವಯ ಎಫ್.ಐ.ಆರ್. ದಾಖಲಿಸಿಲ್ಲ ಎಂದು ಆರೋಪಿಸಿದರು.ವಾಲ್ಮೀಕಿ ಸಮುದಾಯದ ಗಂಗಾ ಕಲ್ಯಾಣ ಯೋಜನೆ, ವಿದ್ಯಾರ್ಥಿ ವೇತನ, ಭೂಮಿ ಖರೀದಿಗೆ ಸಹಾಯ ಧನ, ಮಾರ್ಚ್ ಅಂತ್ಯದೊಳಗೆ ನೀಡ ಬೇಕಿತ್ತು. ಅದನ್ನು ನಿಗಮದಿಂದ ನೀಡದೆ ಆ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಈ ಸರ್ಕಾರ ಭ್ರಷ್ಟ ಸರ್ಕಾರವಾಗಿದ್ದು, ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ. ಗುತ್ತಿಗೆದಾರರಿಗೆ ಹಣ ನೀಡದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತರಿಗೆ ವೇತನ ಬಿಡುಗಡೆಯಾಗಿಲ್ಲ. ಗ್ಯಾರಂಟಿ ಕೂಡ ವಿಫಲವಾಗಿದೆ ಎಂದರು.ಇಷ್ಟೊಂದು ಹಣ ದುರುಪಯೋಗ ಮಾಡಿಕೊಳ್ಳಲು ಮಂತ್ರಿ ಹಾಗೂ ಮುಖ್ಯಮಂತ್ರಿಯ ಗಮನಕ್ಕೆ ಬರದೆ ಸಾಧ್ಯವೇ ಇಲ್ಲ. ಮುಡಾ ಹಗರಣ, ವಕ್ಫ್ ಮಂಡಳಿ ಹಗರಣ ಹೀಗೆ ಹಗರಣಗಳು ನಡೆದಿವೆ. ಸರ್ಕಾರ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿ ಹಣಗಳು ಫಲಾನುಭವಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಸಮುದಾಯದ ಕ್ಷಮೆಯಾಚಿಸಬೇಕು. ಜೊತೆಗೆ ಸಿಎಂ ಸಿದ್ದರಾಮಯ್ಯ ಇದರ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಪ್ರಮುಖರಾದ ಎಸ್.ದತ್ತಾತ್ರಿ, ಜ್ಞಾನೇಶ್ವರ್, ಶಿವರಾಜ್, ಚಂದ್ರಶೇಖರ್, ಅಣ್ಣಪ್ಪ ಇದ್ದರು.ಮುಖವಾಡ ಕಳಚಿದ್ದಕ್ಕೆ ಇಡಿ ವಿರುದ್ಧ ಆರೋಪ
ಇಡಿಯವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಹೇಳಲು ಹೇಳಿದ್ದರು ಎಂಬ ನಾಗೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಆರಗ ಜ್ಞಾನೇಂದ್ರ, ಈ ರೀತಿ ನಾಗೇಂದ್ರ ಹೇಳಿದರೆ ಬೇಲ್ ರದ್ದುಪಡಿಸಲು ಮುಂದಾಗಲಿ. ತಾವೇನು ಅಪರಾಧ ಮಾಡಿದ್ದೇವೆ ಎಂದು ನಾಗೇಂದ್ರ ಹೇಳಬೇಕು. ಇಡಿ ಅವರು ಸತ್ಯವನ್ನು ಬಯಲಿಗೆ ಎಳೆದಿದ್ದಾರೆ. ಇವರ ಮುಖವಾಡ ಕಳಚಿದೆ. ಹಾಗಾಗಿ ಇಡಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಇಡಿ ಅವರು ಸಾಕ್ಷ್ಯಾಧಾರದ ಮೂಲಕ ಬಯಲಿಗೆ ಎಳೆದಿದ್ದಾರೆ. ಇವರ ಹೇಳಿಕೆಗೆ ಯಾವ ಸಾಕ್ಷಿಗಳು ಇಲ್ಲ ಎಂದರು.ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಎರಡು ಮೂರು ದಿನಗಳಲ್ಲಿ ಆಗಲಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲಗಳಿಲ್ಲ ಹಿರಿಯರು ಕುಳಿತು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.