ವಿಶ್ವಕ್ಕೆ ಮಾರ್ಗದೀಪರಾದ ವಾಲ್ಮೀಕಿ ಮಹರ್ಷಿ: ಶಾಸಕ ಕೆ.ಎಂ. ಶಿವಲಿಂಗೇಗೌಡ

| Published : Oct 08 2025, 01:00 AM IST

ವಿಶ್ವಕ್ಕೆ ಮಾರ್ಗದೀಪರಾದ ವಾಲ್ಮೀಕಿ ಮಹರ್ಷಿ: ಶಾಸಕ ಕೆ.ಎಂ. ಶಿವಲಿಂಗೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ದೈವಾಂಶ ಸಂಭೂತರಾದ ವಾಲ್ಮೀಕಿ ಮಹರ್ಷಿಯವರು ಸತ್ಪ್ರವೃತ್ತಿ, ತಪಸ್ಸು ಮತ್ತು ಆತ್ಮಶುದ್ಧಿಯ ಮೂಲಕ ಮಾನವ ಜೀವನವನ್ನು ಪುನೀತಗೊಳಿಸುವ ಮಾರ್ಗವನ್ನು ತೋರಿಸಿದರು. ಇಂದಿಗೂ ಅವರ ತತ್ವಗಳು ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಧರ್ಮದ ಬಲವನ್ನು ಬೋಧಿಸುತ್ತಿವೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ವಾಲ್ಮೀಕಿ ಮಹರ್ಷಿ ಭಾರತೀಯ ಸಂಸ್ಕೃತಿಯ ಮಹಾನ್ ಕವಿ ಮತ್ತು ದಾರ್ಶನಿಕರಲ್ಲಿ ಒಬ್ಬರು. ಮಾನವ ಜೀವನದ ಮೌಲ್ಯಗಳು, ಸತ್ಯ, ಧರ್ಮ, ಕರುಣೆ ಮತ್ತು ನ್ಯಾಯದ ಮಾರ್ಗವನ್ನು ಬೋಧಿಸಿದ ರಾಮಾಯಣ ಮಹಾಕಾವ್ಯದ ರಚಯಿತೃ ಎಂದೇ ಅವರು ವಿಶ್ವದಾದ್ಯಂತ ಗೌರವಿಸಲ್ಪಡುತ್ತಾರೆ ಎಂದು ಶಾಸಕ ಹಾಗೂ ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ನಗರದ ತಾಲೂಕು ಕಚೇರಿ ಕಂದಾಯ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ತಾಲೂಕು ವಾಲ್ಮೀಕಿ ಸಂಘ ಮತ್ತು ತಾಲೂಕು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾವ್ಯಮಯ ಶೈಲಿಯಲ್ಲಿ ಅವರು ಜನರಿಗೆ ನೈತಿಕತೆ ಮತ್ತು ಮಾನವೀಯತೆಯ ಸಂದೇಶವನ್ನು ನೀಡಿದರು. ದೈವಾಂಶ ಸಂಭೂತರಾದ ವಾಲ್ಮೀಕಿ ಮಹರ್ಷಿಯವರು ಸತ್ಪ್ರವೃತ್ತಿ, ತಪಸ್ಸು ಮತ್ತು ಆತ್ಮಶುದ್ಧಿಯ ಮೂಲಕ ಮಾನವ ಜೀವನವನ್ನು ಪುನೀತಗೊಳಿಸುವ ಮಾರ್ಗವನ್ನು ತೋರಿಸಿದರು. ಇಂದಿಗೂ ಅವರ ತತ್ವಗಳು ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಧರ್ಮದ ಬಲವನ್ನು ಬೋಧಿಸುತ್ತಿವೆ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ವಾಲ್ಮೀಕಿ ಮಹರ್ಷಿಯಷ್ಟೇ ಅಲ್ಲ, ಬಸವೇಶ್ವರ, ಡಾ. ಬಿ.ಆರ್. ಅಂಬೇಡ್ಕರ್, ಆದಿಶಂಕರಾಚಾರ್ಯರಂತಹ ಅನೇಕ ಮಹನೀಯರ ಜಯಂತಿಗಳನ್ನು ಗೌರವದಿಂದ ಆಚರಿಸುತ್ತಿದೆ. ಸಮುದಾಯಗಳು ಒಗ್ಗೂಡಿ ಸಂಘಟನೆಯಾದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಅವರು, ರಾಮಾಯಣದ ಮೂಲಕ ಮಹರ್ಷಿ ವಾಲ್ಮೀಕಿ ಜಾತ್ಯಾತೀತತೆಯ ಸಂದೇಶ ನೀಡಿದರು. ಶಾಸಕ ಕೆ.ಎಂ. ಶಿವಲಿಂಗೇಗೌಡರು ಅವರ ದಾರ್ಶನಿಕತೆಯನ್ನು ಗೌರವಿಸಿ ವಾಲ್ಮೀಕಿ ಮಹರ್ಷಿಯ ಪ್ರತಿಮೆ ಸ್ಥಾಪನೆಗೆ ಭರವಸೆ ನೀಡಿದ್ದಾರೆ. ರಾಜ್ಯದ ಶಾಸಕರಲ್ಲಿ ಸಾಮರಸ್ಯದ ರಾಜಕಾರಣವನ್ನು ಅಳವಡಿಸಿಕೊಂಡಿರುವವರು ಶಿವಲಿಂಗೇಗೌಡರು ಎಂದು ಹೇಳಿದರು.ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, “ಧರ್ಮವನ್ನು ಬಿಟ್ಟು ಅಧರ್ಮವನ್ನು ಅನುಸರಿಸಬಾರದೆಂದು ಕಾವ್ಯಗಳ ಮೂಲಕ ಬೋಧಿಸಿದವರು ವಾಲ್ಮೀಕಿ ಮಹರ್ಷಿ. ಅವರ ಜೀವನ ಚರಿತ್ರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಸರ್ಕಾರವು ಅವರ ಚಿಂತನೆಗಳಿಗೆ ಆದ್ಯತೆ ನೀಡುತ್ತಿದ್ದು, ಜಯಂತಿ ಆಚರಣೆ ಅದಕ್ಕೆ ಸಾಕ್ಷಿಯಾಗಿದೆ,” ಎಂದರು.ಕಾರ್ಯಕ್ರಮದಲ್ಲಿ ಶ್ರೀ ವಾಲ್ಮೀಕಿ ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಅಂತರ್ಜಾತಿ ವಿವಾಹಗೊಂಡ ದಂಪತಿಗಳಿಗೆ ಆರ್ಥಿಕ ಸಹಾಯ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಗೊಲ್ಲರಗಳ್ಳಿ ಹನುಮಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯಣ್ಣ, ಅಗ್ಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ್, ಬಾಣಾವರ ಕುಮಾರ್, ಕಲ್ಲೇಶಪ್ಪ, ತಿರುಪತಿ ಬಸವರಾಜು, ಕೆಲ್ಲೆಂಗೆರೆ ಕುಮಾರ್, ಗ್ಯಾರಂಟಿ ಸಮಿತಿ ಸದಸ್ಯೆ ಗಂಡಸಿ ಕಮಲಮ್ಮ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶಿವಮೂರ್ತಿ, ಬಿಇಒ ಮೋಹನ್ ಕುಮಾರ್, ಪ್ರಭಾರಿ ಸಿಡಿಪಿಓ ಯೋಗೀಶ್, ವಿಷ್ಣುವರ್ಧನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.