ಸಾರಾಂಶ
ಮಹರ್ಷಿ ವಾಲ್ಮೀಕಿ ಜಯಂತಿಯ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಹೆಬ್ಬಾರ
ಕನ್ನಡಪ್ರಭ ವಾರ್ತೆ ಯಲ್ಲಾಪುರಜಗತ್ತಿಗೇ ಅದರಲ್ಲೂ ಮನುಕುಲಕ್ಕೆ ದಾರ್ಶನಿಕ ಚಿಂತನೆಯನ್ನು ನೀಡಿದ ವಾಲ್ಮೀಕಿ ಮಹರ್ಷಿಗಳು ಜಾತಿಗೆ ಮೀರಿದ ವ್ಯಕ್ತಿತ್ವ ಹೊಂದಿದ ಮಹಾನ್ ಜಾತ್ಯತೀತವಾದಿ. ಇಡೀ ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಕೃತಿಯನ್ನು ನೀಡಿ ಸಮಾಜ ಸನ್ಮಾರ್ಗದಲ್ಲಿ ಸಾಗುವುದಕ್ಕೆ ಅನೇಕ ಋಷಿಮುನಿಗಳ ಸಾಲಿನಲ್ಲಿ ಸೇರಿದ ಶ್ರೇಷ್ಠ ವ್ಯಕ್ತಿ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಮಂಗಳವಾರ ಪಟ್ಟಣದ ಗಾಂಧಿ ಕುಟೀರದಲ್ಲಿ ತಾಲೂಕಾಡಳಿತ, ತಾಪಂ, ಪಪಂ, ಸಮಾಜಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜಯಂತಿಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.ಅವರ ಚಿಂತನೆಗಳು, ಆದರ್ಶಗಳು ನಮಗೆ ಸದಾ ಮಾರ್ಗದರ್ಶನವಾಗಿದೆ. ನಾವು ತಾರತಮ್ಯ ಸಮಾಜದ ವೈರುದ್ಯ ಮರೆತು ಒಂದಾಗಿ ಬದುಕುವುದಕ್ಕೆ ಶ್ರೇಷ್ಠವಾದ ಚಿಂತನೆ ನೀಡಿದವರು. ಅಂತಹ ಪುರುಷರ ಜಯಂತಿಯನ್ನು ನಾವಿಂದು ಆಚರಿಸುತ್ತಿದ್ದೇವೆ ಎಂದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಪ.ಜಾತಿ, ಪ.ಪಂಗಡದವರು, ಹಿಂದುಳಿದವರು ಅಂತ ಸಮಾಜ ಗುರುತಿಸುತ್ತದೆ. ಆದರೆ ಈ ಸಮಾಜದಲ್ಲಿ ಹುಟ್ಟಿ ಬಿರ್ಸಾ ಮುಂಡಾ ಅಂತಹವರು ಗಾಂಧೀಜಿಯವರಿಗಿಂತ ಮೊದಲೇ ಆದಿವಾಸಿ ಸಮುದಾಯವನ್ನು ಸಂಘಟಿಸಿ ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ೨೦ನೇ ವಯಸ್ಸಿನಲ್ಲಿಯೇ ಹುತಾತ್ಮನಾಗಿದ್ದಾರೆ. ಅದನ್ನು ನಾವು ಕೂಡ ನೆನಪಿಸಿಕೊಳ್ಳಬೇಕು. ಆ ದೃಷ್ಟಿಯಿಂದ ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.ವೈ.ಟಿ.ಎಸ್.ಎಸ್. ಪ್ರೌಢಶಾಲಾ ಶಿಕ್ಷಕ ವಿನೋದ ಭಟ್ಟ ಉಪನ್ಯಾಸ ನೀಡಿ, ರಾಮಾಯಣ ಮತ್ತು ಮಹಾಭಾರತ ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು. ದರೋಡೆ ಮಾಡುವುದನ್ನು ಬಿಟ್ಟು ರಾಮಾಯಣ ಕೃತಿಯನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳು ಪ್ರತಿಯೊಬ್ಬ ಮನುಷ್ಯರಿಗೂ ಆದರ್ಶಪ್ರಾಯರಾಗಿದ್ದಾರೆ. ಎಂತಹ ಕೆಟ್ಟ ವ್ಯಕ್ತಿಯಾಗಿದ್ದರೂ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿತ್ವ ರೂಪಿಸಿಕೊಂಡು ಉತ್ತಮ ಕಾರ್ಯ ಮಾಡಿ, ಶ್ರೇಷ್ಠ ವ್ಯಕ್ತಿಯಾದರೆ ಹೇಗೆ ಗೌರವ ದೊರೆಯುತ್ತದೆಂಬುದಕ್ಕೆ ಇಂತಹ ಅನೇಕ ಸಾಧಕರು ನಮಗೆ ದಾರಿದೀಪವಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ತಹಶೀಲ್ದಾರ ಚಂದ್ರಶೇಖರ ಹೊಸ್ಮನಿ, ಗ್ರೇಡ್ ೨ ತಹಶೀಲ್ದಾರ ಸಿ.ಜಿ. ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ, ಜಿಪಂ ಅಭಿಯಂತರ ಅಶೋಕ ಬಂಟ, ವಾಲ್ಮೀಕಿ ಸಮಾಜದ ಅಧ್ಯಕ್ಷ ಸುರೇಶ ಕಟ್ಟದಮನೆ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.ಈ ಸಂದರ್ಭ ಸೌಥ್ ಝೊನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತೆ ಮಂಚೀಕೇರಿಯ ಸಾನಿಯಾ ಮೊನಾಲಿಸಾಬ್ ಅವರನ್ನು ಪುರಸ್ಕರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜ್ಯೋತಿ ನರೋಟಿ ಸ್ವಾಗತಿಸಿದರು. ಶಿಕ್ಷಕರಾದ ಚಂದ್ರಹಾಸ ನಾಯ್ಕ ನಿರ್ವಹಿಸಿದರು. ದಿಲೀಪ ದೊಡ್ಮನಿ ವಂದಿಸಿದರು. ಪಟ್ಟಣದ ಪ್ರಮುಖ ಮಾರ್ಗದಲ್ಲಿ ವಾಲ್ಮೀಕಿಯವರ ಭಾವಚಿತ್ರ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.