ರಮೇಶ್ ಕತ್ತಿ ವಿರುದ್ಧ ಕಠಿಣ ಕ್ರಮಕ್ಕೆ ವಾಲ್ಮೀಕಿ ಮಹಾಸಭಾ ಆಗ್ರಹ

| Published : Oct 25 2025, 01:00 AM IST

ರಮೇಶ್ ಕತ್ತಿ ವಿರುದ್ಧ ಕಠಿಣ ಕ್ರಮಕ್ಕೆ ವಾಲ್ಮೀಕಿ ಮಹಾಸಭಾ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಈ ನಿಂದನೆ ಕೇವಲ ನಾಯಕ ಸಮುದಾಯದ ಗೌರವಕ್ಕೆ ಧಕ್ಕೆ ತಂದದ್ದಲ್ಲ,

ಕಂಪ್ಲಿ: ವಾಲ್ಮೀಕಿ ಸಮಾಜದ ವಿರುದ್ಧ ಜಾತಿ ನಿಂದನೆ ಮಾಡಿದ ಮಾಜಿ ಸಂಸದ ರಮೇಶ್ ವಿಶ್ವನಾಥ ಕತ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಂಪ್ಲಿಯ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಹಾಗೂ ನಗರ ಘಟಕದ ಪದಾಧಿಕಾರಿಗಳು ಗುರುವಾರ ಪಟ್ಟಣದ ಗ್ರೇಡ್–2 ತಹಸೀಲ್ದಾರ್ ಎಂ.ಆರ್. ಷಣ್ಮುಖಪ್ಪ ಅವರಿಗೆ ಮನವಿ ಸಲ್ಲಿಸಿದರು.

ಮಹಾಸಭಾದ ತಾಲೂಕು ಅಧ್ಯಕ್ಷ ನೀರಗಂಟಿ ವೀರೇಶ್ ಮಾತನಾಡಿ, ಮಾಜಿ ಸಂಸದ ರಮೇಶ್ ಕತ್ತಿಯವರು ನಾಯಕ ಸಮುದಾಯದ ವಿರುದ್ಧ ಅತ್ಯಂತ ಅವಮಾನಕಾರಿ, ಕೀಳುಮಟ್ಟದ ಭಾಷೆ ಬಳಸಿ ಮಾತನಾಡಿದ್ದಾರೆ. ಈ ನಿಂದನೆ ಕೇವಲ ನಾಯಕ ಸಮುದಾಯದ ಗೌರವಕ್ಕೆ ಧಕ್ಕೆ ತಂದದ್ದಲ್ಲ, ಅದು ಸಾಮಾಜಿಕ ವೈಷಮ್ಯವನ್ನು ಉಂಟುಮಾಡಿ ಶಾಂತಿ-ಸೌಹಾರ್ದ ಹಾಳು ಮಾಡುವಂತಹ ಕೆಲಸವಾಗಿದೆ. ಈ ರೀತಿಯ ನಿಂದನೆಗಳು ಸಂವಿಧಾನದ ಸಮಾನತೆ ತತ್ವದ ವಿರುದ್ಧವಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಸರ್ಕಾರ ಗಮನ ಹರಿಸಿ ಅನುಸೂಚಿತ ಜಾತಿ ಮತ್ತು ಬುಡಕಟ್ಟು (ಅಪರಾಧ ತಡೆ) ಕಾಯ್ದೆ 1989 ರ ಅನ್ವಯ ಸಂಬಂಧಿತ ಕಲಂಗಳು ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 153, 295 ಮತ್ತು 505(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಕತ್ತಿಯವರ ಬಂಧನ ತಕ್ಷಣವಾಗಬೇಕು ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಹಾಸಭಾದ ಉಪಾಧ್ಯಕ್ಷ ಡಿ. ವೀರಣ್ಣ, ಪದಾಧಿಕಾರಿಗಳಾದ ಎನ್. ರಾಮಾಂಜನೇಯಲು, ತಿಮ್ಮಲಾಪುರ ದೇವಣ್ಣ, ಲೋಕೇಶ್, ದೇವೇಶ್, ಮುದಿಯಪ್ಪ, ವಾಲ್ಮೀಕಿ ಈರಣ್ಣ, ಬಿ.ಶೇಖರ್, ಬೆಳಗೋಡ್ ನಾಗರಾಜ, ನೆಲ್ಲೂಡಿ ಮಹಾಂತೇಶ್, ರಂಗಯ್ಯ ಇದ್ದರು.