ವಾಲ್ಮೀಕಿ ಹಣ ಅಕ್ರಮ ವರ್ಗಾವಣೆ ಪ್ರಕರಣ: ನಾಗೇಂದ್ರ ಆಪ್ತ ವೀರಣ್ಣ ಹಾಗೂ ಅಲ್ಲಾಬಕ್ಷ್‌ ಮನೆಗೆ ಇಡಿ ದಾಳಿ

| Published : Aug 29 2024, 12:49 AM IST / Updated: Aug 29 2024, 09:57 AM IST

ವಾಲ್ಮೀಕಿ ಹಣ ಅಕ್ರಮ ವರ್ಗಾವಣೆ ಪ್ರಕರಣ: ನಾಗೇಂದ್ರ ಆಪ್ತ ವೀರಣ್ಣ ಹಾಗೂ ಅಲ್ಲಾಬಕ್ಷ್‌ ಮನೆಗೆ ಇಡಿ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ವೀರಣ್ಣ ಹಾಗೂ ಅಲ್ಲಾಬಕ್ಷ್‌ ಅವರ ಮನೆಗಳ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದರು.

ಬಳ್ಳಾರಿ:  ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ಬಿ. ನಾಗೇಂದ್ರ ಅವರ ಆಪ್ತರ ಮನೆಗಳ ಮೇಲೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.

ಮಂಗಳವಾರ ಸಂಜೆಯೇ ಬಳ್ಳಾರಿ ನಗರಕ್ಕೆ ಬಂದಿಳಿದ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆಯೇ ಕಾರ್ಯಾಚರಣೆ ಆರಂಭಿಸಿದರು. ಇಲ್ಲಿನ ಕೌಲ್‌ಬಜಾರ್ (ರೇಡಿಯೋ ಪಾರ್ಕ್‌) ಪ್ರದೇಶದಲ್ಲಿರುವ ಶಾಸಕ ಬಿ.ನಾಗೇಂದ್ರ ಅವರ ಹತ್ತಿರದ ಸಂಬಂಧಿ ಟಿ.ಜಿ. ಎರಿಸ್ವಾಮಿ, ಆಪ್ತ ಸಹಾಯಕ ವಿಜಯಕುಮಾರ್, ವೀರಣ್ಣ ಹಾಗೂ ಅಲ್ಲಾಬಕ್ಷ್‌ ಅವರ ಮನೆಗಳ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ, ಮನೆಯಲ್ಲಿದ್ದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಸಂಜೆವರೆಗೂ ಪರಿಶೀಲನಾ ಕಾರ್ಯ ಮುಂದುವರಿದಿತ್ತು.

ದಾಳಿ ವೇಳೆ 20ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ. ಗುರುವಾರ ಸಂಜೆವರೆಗೂ ಪರಿಶೀಲನಾ ಕಾರ್ಯ ಮುಂದುವರಿಯುವ ಸಾಧ್ಯತೆ ಇದೆ. ಪ್ರಕರಣದಲ್ಲಿ ಇನ್ನು ಸಾಕಷ್ಟು ಜನರು ಭಾಗಿಯಾಗಿರುವ ಶಂಕೆ ಇರುವುದರಿಂದ ಶಾಸಕ ನಾಗೇಂದ್ರ ಆಪ್ತರ ಮನೆಗಳಿಗೆ ದಾಳಿ ನಡೆಸಿ, ದಾಖಲೆಗಳ ಹುಡಕಾಟ ನಡೆಸಿದ್ದಾರೆ.ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಹಿನ್ನಲೆಯಲ್ಲಿ ಬಳ್ಳಾರಿ ಸೇರಿದಂತೆ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದ್ದು ಇಡಿ ಅಧಿಕಾರಿಗಳ ದಾಳಿ ಪ್ರಕ್ರಿಯೆ ಸಹ ಚುರುಕಾಗಿದೆ. ಇಡಿ ಅಧಿಕಾರಿಗಳ ದಾಳಿ ಶಾಸಕ ನಾಗೇಂದ್ರ ಆಪ್ತರಲ್ಲಿ ನಡುಕ ಹುಟ್ಟಿಸಿದೆ.

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಹಿನ್ನೆಲೆಯಲ್ಲಿ ಶಾಸಕ ಬಿ.ನಾಗೇಂದ್ರ ಅವರ ಸಂಬಂಧಿ ಎರಿಸ್ವಾಮಿ ಅವರ ಕೌಲ್‌ ಬಜಾರ್ ಪ್ರದೇಶದ ಮನೆಯ ಮೇಲೆ ಇಡಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದರು.