ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣದಲ್ಲಿ ಪ್ರತಿ ಹಂತದಲ್ಲೂ ಮಾನವೀಯ ಮೌಲ್ಯಗಳು ಅಡಕವಾಗಿದ್ದು ಇಲ್ಲಿ ಪಾತ್ರಗಳ ಮೂಲಕ ಹೇಳಿರುವ ಸಂದೇಶಗಳು ನಮಗೆ ದಾರಿದೀಪವಾಗಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣದಲ್ಲಿ ಪ್ರತಿ ಹಂತದಲ್ಲೂ ಮಾನವೀಯ ಮೌಲ್ಯಗಳು ಅಡಕವಾಗಿದ್ದು ಇಲ್ಲಿ ಪಾತ್ರಗಳ ಮೂಲಕ ಹೇಳಿರುವ ಸಂದೇಶಗಳು ನಮಗೆ ದಾರಿದೀಪವಾಗಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ ನೀಡಿದರು.

ಪಟ್ಟಣದ ವಾಲ್ಮೀಕಿ ಭವನದ ಬಳಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲೂಕು ಆಡಳಿತ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಾಲ್ಮೀಕಿ ತತ್ವಾದರ್ಶಗಳು ನಿತ್ಯನೂತನವಾಗಬೇಕು. ನಾವೆಲ್ಲರೂ ಒಂದೇ ಎಂಬ ಭಾವ ಮೂಡಬೇಕು. ಅಂಬೇಡ್ಕರ್ ವಿರಚಿತ ಸಂವಿಧಾನದಲ್ಲಿ ನೀಡಲಾಗಿರುವ ಸೌಲಭ್ಯಗಳ ಪರಿಪಾಲನೆಯಾಗಬೇಕು. ನಮ್ಮ ದೇಶವನ್ನು ಅಭಿವೃದ್ಧಿ ರಾಷ್ಟç ಮಾಡುವ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳು ಎಲ್ಲರ ಜಯಂತಿಗಳಲ್ಲಿ ಭಾಗವಹಿಸುವ, ಆಚರಿಸುವ ಪರಿಪಾಠವನ್ನು ಅನುಸರಿಸಬೇಕು. ಆ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕು. ಎರಡು ದಿನಗಳ ಕಾಲ ಚಾಮರಾಜನಗರದಲ್ಲಿ ನಡೆದ ವಿಶ್ವ ಬೌದ್ಧ ಸಮ್ಮೇಳದಲ್ಲೂ ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆ ಸೇರಿದಂತೆ ಒಟ್ಟು 500 ಗ್ರಾಮಗಳಿಗೆ ಧಮ್ಮ ರಥ ಚಲಿಸಿದ್ದು, ಎಲ್ಲಾ ವರ್ಗಗಳ ಸಹಕಾರವನ್ನೂ ನಾನು ಕೋರಿದ್ದೆ ಈ ಕಾರ್ಯಕ್ರಮದ ಯಶಸ್ಸಿಗೆ ಸಹರಿಸಿದ ಎಲ್ಲರಿಗೂ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಇಂತಹ ವೇದಿಕೆಯಲ್ಲಿ ಪ್ರತಿಭಾನಿತ್ವ ಸಮುದಾಯದ 170 ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ ಎಂದರು.

ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಎಚ್.ಎಸ್. ಮಂಜುನಾಥ್ ಮಾತನಾಡಿ, ರಾಮಾಯಣದಿಂದ ನಾವು ಸೋದರತೆ, ಸ್ತ್ರೀ ಶಕ್ತಿ, ತಂದೆ ಮಕ್ಕಳ ಸಂಬಂಧ, ದುಷ್ಟ ಸಂಹಾರದಂತಹ ಜೀವನದ ಮೌಲ್ಯಗಳನ್ನು ಅರಿಯಬಹುದು. ಅಲ್ಲದೆ ಅಂದಿನ ಕಾಲದಲ್ಲೇ ಪ್ರಜಾಪ್ರಭುತ್ವದ ಕಲ್ಪನೆಯನ್ನು ವಾಲ್ಮೀಕಿಯವರು ಕೊಟ್ಟಿದ್ದಾರೆ. ಮಹಾಕಾವ್ಯಗಳು, ವೇದಗಳೂ, ಅಂದಿನ ಆಚರಣೆಗಳ ಪರಂಪರೆಯಿಂದಲೆ ಇಂದಿನ ಕಾನೂನುಗಳು ರೂಪಿತವಾಗಲು ನಮಗೆ ಸ್ಪೂರ್ತಿ ಸಿಕ್ಕಿದೆ. ಉತ್ತಮ ಸಂಸ್ಕಾರವನ್ನು ಎಲ್ಲರೂ ರೂಪಿಸಿಕೊಳ್ಳಬೇಕು ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ಶಾಸಕ ಎ.ಆರ್. ಕೃಷ್ಣಮೂರ್ತಿ ಪಟ್ಟಣದಲ್ಲಿರುವ ವಾಲ್ಮೀಕಿ ಭವನಕ್ಕೆ 1 ಕೋಟಿ ರು. ಅನುದಾನವನ್ನು ನೀಡಿದ್ದಾರೆ. ಅಲ್ಲದೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಜನಾಂಗಗಳ ಭವನ ನಿರ್ಮಾಣಕ್ಕೆ 4 ಕೋಟಿ ರು. ಅನುದಾನವನ್ನು ಈ ವರೆಗೆ ನೀಡಿದ್ದಾರೆ. ಇದಲ್ಲದೆ ಸಮುದಾಯದ ರಸ್ತೆ, ಚರಂಡಿ, ಬೀದಿ ದೀಪಗಳಿಗೂ ಅನುದಾನ ನೀಡಿದ್ದಾರೆ ಎಂದರು.

ಇದಕ್ಕೂ ಮುಂಚೆ ವಿವಿಧ ಕಲಾತಂಡಗಳೊಂದಿಗೆ ವಾಲ್ಮೀಕಿ ಭಾವಚಿತ್ರವನ್ನು ರಥದಲ್ಲಿ ಕುಳ್ಳಿರಿಸಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಮಿಮಿಕ್ರಿ ಗೋಪಿರವರು ನಡೆಸಿಕೊಟ್ಟ ಹಾಸ್ಯ ಕಾರ್ಯಕ್ರಮ ಗಮನ ಸೆಳೆಯಿತು. ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಎಸ್.ಪ್ರಭುಪ್ರಸಾದ್, ತಾಲೂಕು ನಾಯಕ ಮಂಡಳಿ ಅಧ್ಯಕ್ಷ ವೈ.ಎನ್. ಮುರುಳಿಕೃಷ್ಣ, ಬಿಳಿಗಿರಿರಂಗನಾಥಸ್ವಾಮಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಜಣ್ಣ, ತಹಶೀಲ್ದಾರ್ ಎಸ್.ಎಲ್. ನಯನ, ಇಒ ಎ.ಬಿ. ವೇಣು, ಬಿಇಒ ಎಂ. ಮಾರಯ್ಯ, ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಎ.ಎಂ. ಕೇಶವಮೂರ್ತಿ, ಎಂಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ವೈ.ಎನ್. ಜಯರಾಮು, ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಮುಖಂಡರು ಇದ್ದರು.