ಸಾರಾಂಶ
ಸಂವಿಧಾನಕ್ಕಿರುವ ಶಕ್ತಿ ರಾಮಾಯಣಕ್ಕೂ ಇದೆ. ಇಲ್ಲಿ ಯಾವುದು ಮೇಲಲ್ಲ, ಕೀಳಲ್ಲ. ವಾಲ್ಮೀಕಿ ಸರ್ವ ಜನಾಂಗಕ್ಕೆ ಬೆಳಕಾಗಿದ್ದಾರೆ.
ಕನಕಗಿರಿ: ಶ್ರೀರಾಮ ವಿಶ್ವವ್ಯಾಪಿಯಾಗಲು ವಾಲ್ಮೀಕಿ ರಚಿಸಿದ ರಾಮಾಯಣವೇ ಭದ್ರ ಬುನಾದಿಯಾಗಿದೆ ಎಂದು ಸಂಶೋಧಕ ಡಾ. ಡಿ.ಕೆ. ಮಾಳೆ ಹೇಳಿದರು.
ಅವರು ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ವಾಲ್ಮೀಕಿ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸೋಮವಾರ ಮಾತನಾಡಿ, ಸರ್ವ ಸಮಾಜ, ಧರ್ಮಗಳಿಗೆ ಸಮನ್ವಯತೆ ನೀಡಿರುವ ವಾಲ್ಮೀಕಿ ಆದರ್ಶ ಪುರುಷ ಎನಿಸಿಕೊಂಡಿದ್ದಾನೆ. ಮಹಾತ್ಮನ ವಂಶದಲ್ಲಿ ಜನಿಸಿರುವ ನಾವೆಲ್ಲ ಪರಿವರ್ತನೆಗೊಂಡು ಶಿಕ್ಷಣವೇ ಅಸ್ತ್ರವಾಗಿಸಿಕೊಂಡಲ್ಲಿ ಮಾತ್ರ ವಾಲ್ಮೀಕಿ ರಾಮಾಯಣಕ್ಕೆ ನಿಜವಾದ ಅರ್ಥ ಬರಲಿದೆ ಎಂದರು.ಇನ್ನೂ ಸನಾತನ ಉಳಿವಿಗೆ ವಾಲ್ಮೀಕಿ ಕೊಡುಗೆ ಅಪಾರವಾಗಿದ್ದು, ಸಂವಿಧಾನಕ್ಕಿರುವ ಶಕ್ತಿ ರಾಮಾಯಣಕ್ಕೂ ಇದೆ. ಇಲ್ಲಿ ಯಾವುದು ಮೇಲಲ್ಲ, ಕೀಳಲ್ಲ. ವಾಲ್ಮೀಕಿ ಸರ್ವ ಜನಾಂಗಕ್ಕೆ ಬೆಳಕಾಗಿದ್ದಾರೆ. ಇಂತಹ ದಾರ್ಶನಿಕನ ವಿಚಾರಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಸನ್ಮಾರ್ಗದೆಡೆ ಸಾಗೋಣ ಎಂದು ಹೇಳಿದರು.
ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಚಿವರು, ಆದಿಕವಿ ವಾಲ್ಮೀಕಿ ರಾಮಾಯಣದ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಜ್ಞಾನಾಮೃತದಿಂದ ರಚಿತಗೊಂಡ ರಾಮಾಯಣವೂ ಮನಕುಲಕ್ಕೆ ದಾರಿದೀಪವಾಗಿದೆ. ಭೂಮಿ ಇರುವವರೆಗೂ ವಾಲ್ಮೀಕಿ ಅಜರಾಮರ. ಈ ಪುಣ್ಯಭೂಮಿಯ ಪರಂಪರೆ ಹಾಗೂ ಸಂಸ್ಕೃತಿಗೆ ವಾಲ್ಮೀಕಿ ಕೊಡುಗೆ ಅಪಾರ ಎಂದು ಸ್ಮರಿಸಿದರು.ಮೊಳಗಿದ ಮೆರಗು:
ವಾಲ್ಮೀಕಿ ಜಯಂತಿಯ ಮೆರವಣಿಗೆಯಲ್ಲಿ ಹಲಗಲಿ ಬೇಡರು, ಕನಕಗಿರಿಯ ನಾಯಕರು, ಗಂಡುಗಲಿ ಕುಮಾರರಾಮ, ಏಕಲವ್ಯ, ವೀರ ಮದಕರಿ, ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ರಾಜ್ಯದಲ್ಲೆಡೆ ಹೋರಾಡಿ ಮಡಿದ ನಾಯಕರ ಭಾವಚಿತ್ರಗಳು ಗಮನ ಸೆಳೆದವು. ಇನ್ನೂ ಸಿದ್ದಾಪುರದ ಹಗಲುವೇಷಗಾರರು, ರಾಮಸಾಗರದ ಕಹಳೆ ವಾದನ, ಅಬ್ಬಿಗೇರಿಯ ಮೋಜಿನಗೊಂಬೆ, ಕೊನ್ನಾಪುರದ ಡೊಳ್ಳು ಕುಣಿತ, ಮಂಡಲಗೇರಿಯ ಕರಡಿ ಮಜಲು ಆಕರ್ಷಿಸಿದವು. ಮಹಿಳೆಯರು ಕುಂಭ, ಕಳಸ ಹಿಡಿದು ಮೆರವಣಿಗೆಗೆ ಶೋಭೆ ತಂದರು. ರಾಜವಂಶಸ್ಥ ನೇಮಿಚಂದ್ರ ಅವರನ್ನು ಸಾರೋಟದಲ್ಲಿ ವೇದಿಕೆಯವರೆಗೆ ಮೆರವಣಿಗೆ ಮಾಡಲಾಯಿತು.ಮಾಜಿ ಶಾಸಕ ಬಸವರಾಜ ದಢೇಸೂಗುರು, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಪ್ರಮುಖರಾದ ಹನುಮೇಶ ನಾಯಕ, ಮುದಿಯಪ್ಪ ಮಲ್ಲಿಗೆವಾಡ, ರಮೇಶ ನಾಯಕ ಹುಲಿಹೈದರ, ರಂಗಪ್ಪ ಕೊರಗಟಗಿ, ಸಣ್ಣ ಕನಕಪ್ಪ, ರಾಮನಗೌಡ ಬುನ್ನಟ್ಟಿ, ನಿಂಗಪ್ಪ ನವಲಿ, ರಾಮು ಆಗೋಲಿ, ಮಂಜು ನಾಯಕ, ಪಂಪಾಪತಿ ತರ್ಲಕಟ್ಟಿ, ಶರಣಪ್ಪ ಸೋಮಸಾಗರ, ನಾಗರಾಜ ಇದ್ಲಾಪುರ, ಬಾರೇಶ ನಡಲಮನಿ, ಮಂಜು ಮೋದಿ, ಶರಣೇಗೌಡ ಹುಲಸನಹಟ್ಟಿ, ಕರಿಯಪ್ಪ ನಾಯಕ ಇತರರಿದ್ದರು.