ದೇಶದ ಮೂಲ ನಿವಾಸಿಗಳಲ್ಲಿ ಒಂದಾದ ವಾಲ್ಮೀಕಿ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿ ದೊರಕಿಸಿಕೊಡಲು ಪ್ರಧಾನ ಮಂತ್ರಿಗಳ ಬಳಿ ರಾಜ್ಯದ ಸರ್ವ ಪಕ್ಷಗಳ ನಿಯೋಗವನ್ನು ಕೊಂಡೊಯ್ಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ದೇಶದ ಮೂಲ ನಿವಾಸಿಗಳಲ್ಲಿ ಒಂದಾದ ವಾಲ್ಮೀಕಿ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿ ದೊರಕಿಸಿಕೊಡಲು ಪ್ರಧಾನ ಮಂತ್ರಿಗಳ ಬಳಿ ರಾಜ್ಯದ ಸರ್ವ ಪಕ್ಷಗಳ ನಿಯೋಗವನ್ನು ಕೊಂಡೊಯ್ಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಕಲ್ಪಿಸುವಂತೆ ಕೇಂದ್ರಕ್ಕೆ ಒತ್ತಾಯಿಸಲು ಪ್ರಧಾನ ಮಂತ್ರಿಗಳ ಬಳಿ ರಾಜ್ಯದ ಎಲ್ಲಾ ಪಕ್ಷಗಳ ಜನ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗವನ್ನು ಕೊಂಡೊಯ್ಯುವ ಕೆಲಸ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಂದ ಆಗಬೇಕು ಎಂದರು.
ಬೆಳಗಾವಿ ಅಧಿವೇಶನದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶೇ.7 ಮೀಸಲಾತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ, ಅದು ಕೇವಲ ಸಭಾ ನಡಾವಳಿಗಳಲ್ಲಿ ಮಾಡಿದರಷ್ಟೇ ಸಾಲದು. ಶೇ.7 ಮೀಸಲಾತಿಯನ್ನು ಶಿಫಾರಸ್ಸು ಮಾಡಿ, ಕೇಂದ್ರಕ್ಕೆ ಕಳಿಸಬೇಕು. ಕೇಂದ್ರದ ಮೇಲೆ ಒತ್ತಡ ಹೇರಿ, ನಮ್ಮ ಸಮುದಾಯಕ್ಕೆ ಶೇ.7 ಮೀಸಲಾತಿ ಕಲ್ಪಿಸಿ ಕೊಡುವ ಕೆಲಸ ಸರ್ಕಾರ ಮಾಡಲಿ ಎಂದು ತಿಳಿಸಿದರು.ಆಯಾ ಸಮಾಜಗಳು ಬೇಡಿಕೆ ಇಡುವ ಮುಂಚೆಯೇ ಕೇಂದ್ರ, ರಾಜ್ಯ ಸರ್ಕಾರಗಳು ಅಂತಹ ಸಮುದಾಯಗಳ ಸ್ಥಿತಿಗತಿಯನ್ನು ಅರಿತು, ಮೀಸಲಾತಿ ಕಲ್ಪಿಸಬೇಕು. ಮೀಸಲಾತಿಯಡಿ ಯಾರೇ ಬರಿ, ಕೇಂದ್ರ-ರಾಜ್ಯ ಸರ್ಕಾರಗಳು ಯಾವುದೇ ಕಾರಣಕ್ಕೂ ಚೆಲ್ಲಾಟವಾಡಬಾರದು. ಸಂವಿಧಾನದ ಮೀಸಲಾತಿ ಎಲ್ಲರಿಗೂ ಹಕ್ಕು. ಅದು ಭಿಕ್ಷೆಯಲ್ಲ. ಹಾಗಾಗಿ ಸರ್ಕಾರಗಳು ಸಂವಿಧಾನದ ಮೀಸಲಾತಿಗೆ ತಕ್ಕಂತೆ ಸೌಲಭ್ಯ ಕಲ್ಪಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ನಮ್ಮ ಸೌಲಭ್ಯಗಳನ್ನು ಪಡೆಯುವುದಕ್ಕೆ ನಾವು ಹೋರಾಟ ಮಾಡಬೇಕಾದ ಸ್ಥಿತಿಗೆ ತಲುಪಿದ್ದೇವೆ. ಮೀಸಲಾತಿ ತಲುಪಬೇಕಾದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ನ್ಯಾಯಾಲಯದ ಮುಂದೆ ಪರಿಣಾಮಕಾರಿಯಾಗಿ ಮಾಹಿತಿ ನೀಡಿ, ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲೂ ವಿಫಲವಾಗುತ್ತಿವೆ ಎಂದು ದೂರಿದರು.ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಸಭೆ ಕರೆಯಲಾಗಿದೆ. ಸಭೆಯಲ್ಲಿ ನಾಯಕ ಸಮಾಜಕ್ಕೆ ಶೇ.7 ಮೀಸಲಾತಿ, ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಬೇರೆ ಕೆಲಸ, ಕಾರ್ಯಕ್ಕೆ ವರ್ಗಾವಣೆ ಮಾಡದಂತೆ, ಭ್ರಷ್ಟಾಚಾರ ಮಾಡಿದ ಯಾರೇ ಆಗಿದ್ದರೂ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ, ಕುಲಶಾಸ್ತ್ರೀಯ ಅಧ್ಯಯನದಂತೆ ಜಾತಿಗಳ ಸೇರ್ಪಡೆ ಸೇರಿದಂತೆ ಅನೇಕ ಮುಖ್ಯ ವಿಚಾರಗಳ ಬಗ್ಗೆ ಚರ್ಚಿಸಿ, ಸಮಾಜದ ನಿರ್ಧಾರ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಸಮಾಜದ ಮುಖಂಡರಾದ ನರಸಿಂಹಯ್ಯ, ಭೀಮಾಪುತ್ರಿ ರೇವತಿ ರಾಜ್, ಎಚ್.ಸಿ.ಹನುಮಂತಯ್ಯ, ವಕೀಲ ಗುಮ್ಮನೂರು ಮಲ್ಲಿಕಾರ್ಜುನ, ಬಿ.ವೀರಣ್ಣ, ಶ್ರೀನಿವಾಸ ಟಿ.ದಾಸಕರಿಯಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ, ಹಿರೇಕುಂದೂರು ರಾಜಣ್ಣ, ಶ್ಯಾಗಲೆ ಮಂಜುನಾಥ, ಗಣೇಶ ಹುಲ್ಮನಿ ಇತರರು ಇದ್ದರು.ಸುಳ್ಳು ಪ್ರಮಾಣಪತ್ರ, ಕಠಿಣ ಕ್ರಮಕ್ಕೆ ಒತ್ತಾಯ
ರಾಜ್ಯದಲ್ಲಿ ಸುಳ್ಳು ಪ್ರಮಾಣಪತ್ರ ಪಡೆದವರ ವಿರುದ್ದ ಸರ್ಕಾರ, ಅಧಿಕಾರಿಗಳು ಯಾವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ಕಾನೂನು ರೀತಿ ಶಿಕ್ಷೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಎಸ್‌ಟಿ ಸಮುದಾಯಗಳಿಗೆ ಕೈಗಾರಿಕೆ ಸ್ಥಾಪಿಸಲು ಕನಿಷ್ಟ 10 ಎಕರೆ ಭೂಮಿಯನ್ನು ಕೆಐಡಿಬಿ ಸ್ವಾಧೀನ ಪಡಿಸಿಕೊಂಡು, ಹಂಚಿಕೆ ಮಾಡಬೇಕು. ಕೈಗಾರಿಕೆಗಳನ್ನು ನಡೆಸಲು ಅಗತ್ಯ ಆರ್ಥಿಕ ನೆರವು, ಸಹಾಯವನ್ನು ಸರ್ಕಾರ ಒದಗಿಸಬೇಕು ಎಂದರು.
ಕರ್ನಾಟಕದಲ್ಲಿ 50 ಲಕ್ಷಕ್ಕೂ ಅದಿಕ ಜನ, ದೇಶದಲ್ಲಿ 12 ಕೋಟಿಗೂ ಹೆಚ್ಚು ವಾಲ್ಮೀಕಿ ಸಮುದಾಯದ ಜನರಿದ್ದಾರೆ. ವಾಲ್ಮೀಕಿ ಜನಾಂಗವನ್ನು ಎಸ್ಟಿಗೆ ಸೇರಿಸುವಂತೆ ರಾಜ್ಯದಿಂದ ಕೇಂದ್ರಕ್ಕೆ ಈಗಾಗಲೇ ಶಿಫಾರಸ್ಸು ಮಾಡಲಾಗಿದೆ. ಆದರೆ, ಈವರೆಗೆ ಅದು ಕಾನೂನಾಗಿ ತಿದ್ದುಪಡಿಯಾಗಿಲ್ಲ ಎಂದರು.