ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಮಹರ್ಷಿ ವಾಲ್ಮೀಕಿ ಸೃಷ್ಟಿಸಿದ ರಾಮನ ಪಾತ್ರ ಶಾಶ್ವತವೂ ಸಾರ್ವಕಾಲಿಕವೂ ಆಗಿದೆ. ಜಗತ್ತಿಗೆ ಇಂತಹ ಆದರ್ಶ ಪಾತ್ರವನ್ನು ಕೊಟ್ಟ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಹಿರಿಯ ಹರಿಕಥಾ ವಿದ್ವಾಂಸ ಡಾ. ಲಕ್ಷ್ಮಣದಾಸ ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಮನ ಪಾತ್ರದ ಮೂಲಕ ವ್ಯಕ್ತಿ ಹೇಗೆ ಮಾನವತ್ವದಿಂದ ದೈವತ್ವಕ್ಕೆ ಏರಬಹುದೆಂದು ವಾಲ್ಮೀಕಿ ತೋರಿಸಿದ್ದಾರೆ. ರತ್ನಾಕರನೆಂಬ ವ್ಯಕ್ತಿ ವಾಲ್ಮೀಕಿ ಮಹರ್ಷಿಯೆಂಬ ಔನ್ನತ್ಯಕ್ಕೆ ಏರಿದ್ದೂ ಇಂತಹದೇ ಪ್ರಕ್ರಿಯೆಯಾಗಿದೆ ಎಂದು ಅವರು ವಿಶ್ಲೇಷಿಸಿದರು.ಮನುಷ್ಯ ಹೇಗಿರಬೇಕು ಎಂಬುದನ್ನು ರಾಮಾಯಣದ ಮೂಲಕ ವಾಲ್ಮೀಕಿ ತೋರಿಸಿದರು.ಮನುಷ್ಯ ಹೇಗಿರಬಾರದು ಎಂಬುದನ್ನು ಮಹಾಭಾರತದ ಪಾತ್ರಗಳ ಮೂಲಕ ವ್ಯಾಸ ಮಹರ್ಷಿಗಳು ತಿಳಿಸಿದರು. ಮಹಾಕಾವ್ಯಗಳ ಮೂಲಕ ಜನರು ಬದುಕುವ ವಿಧಾನವನ್ನು ತಿಳಿದುಕೊಳ್ಳಬೇಕು ಎಂದರು.ಈ ಸಂದರ್ಭ ಮಾತನಾಡಿದ ಕುಲಸಚಿವ ಪ್ರೊ.ಎಂ.ಕೊಟ್ರೇಶ್, ರಾಮಾಯಣದಂತಹ ಮಹಾಕಾವ್ಯಗಳನ್ನು ಭಾವನಾತ್ಮಕವಾಗಿಯೂ ವೈಚಾರಿಕವಾಗಿಯೂ ನೋಡಬಹುದು. ರಾಮಾಯಣದ ಅನೇಕ ಪ್ರಭೇದಗಳನ್ನು ಜಗತ್ತುಕಂಡಿದೆ. ಆದರೆ ಎಲ್ಲ ಆವೃತ್ತಿಗಳು ಭಾರತದ ಅಸ್ಮಿತೆಯನ್ನು ತೋರಿಸಿಕೊಟ್ಟಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಜಯಂತಿಗಳು ನಮ್ಮ ಬದುಕಿನ ಪರಿವರ್ತನೆಗೆ ಕಾರಣವಾಗಬೇಕು. ನುಡಿದಂತೆ ನಡೆಯುವ ಆದರ್ಶವನ್ನು ಕಲಿಸಬೇಕು. ಆತ್ಮವಂಚನೆ ಬಿಟ್ಟು ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರಣೆಯಾಗಬೇಕು ಎಂದರು.ಸಾಮಾಜಿಕ ಮಾಧ್ಯಮಗಳ ಬಳಕೆ ಹೆಚ್ಚಾದ ಮೇಲೆ ನಾವು ವಾಸ್ತವದಿಂದ ಆಚೆ ಇದ್ದು ಬದುಕಲಾರಂಭಿಸಿದ್ದೇವೆ. ವಾಲ್ಮೀಕಿಯಂತಹ ವ್ಯಕ್ತಿತ್ವಗಳಿಂದ ನಾವು ಆದರ್ಶಗಳನ್ನು ಆರಿಸಿಕೊಳ್ಳಬೇಕು ಎಂದರು. ಗಿರಿಜನ ಉಪಯೋಜನೆ ಸಂಚಾಲಕ ಡಾ.ಮಹಾಲಿಂಗ ಕೆ.ಉಪಸ್ಥಿತರಿದ್ದರು.