ಭಾರತದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣದ ಮೂಲಕ ಮಾನವ ಸಂಬಂಧಗಳ ಜೀವನಾದರ್ಶಗಳನ್ನು ಇಡೀ ಜಗತ್ತಿಗೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರು ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಭಾರತದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣದ ಮೂಲಕ ಮಾನವ ಸಂಬಂಧಗಳ ಜೀವನಾದರ್ಶಗಳನ್ನು ಇಡೀ ಜಗತ್ತಿಗೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರು ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.ನಗರದ ಶ್ರೀ ಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಜಂಟಿಯಾಗಿ ಆಯೋಜಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಮಾಯಣವು ಭಾರತದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾಗಿದೆ. ವಾಲ್ಮೀಕಿಯವರು ಪಿತೃವಾಕ್ಯ ಪರಿಪಾಲನೆ, ಸಮಚಿತ್ತದಿಂದ ಕರ್ತವ್ಯ ನಿರ್ವಹಣೆ ಹಾಗೂ ರಾಜನಾದವನು ಯಾವುದೇ ಸಂದರ್ಭದಲ್ಲಿಯೂ ಪ್ರಜೆಗಳ ಸಂಕಷ್ಟಗಳಿಗೆ ಸ್ಪಂದಿಸಬೇಕೆಂಬ ಸಂದೇಶಗಳನ್ನು ರಾಮಾಯಣದ ಮೂಲಕ ನೀಡಿದ್ದಾರೆ. ಅಲ್ಲದೆ, ಮಹಾಕಾವ್ಯದ ಪ್ರತಿಯೊಂದು ಪಾತ್ರಕ್ಕೂ ಮಹತ್ವ ದೊರಕಿಸಿಕೊಟ್ಟಿದ್ದಾರೆ. ಮಾನವ ಸಂಬಂಧಗಳು ಹೇಗಿರಬೇಕು ಎಂಬುದನ್ನು ಇಂದಿನ ಯುವಜನರು ಅರಿತುಕೊಳ್ಳಬೇಕು. ರಾಮಾಯಣದಲ್ಲಿನ ಜೀವನಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಶಿಕ್ಷಣ, ಸಮಾನತೆ ಮತ್ತು ಸಾಮಾಜಿಕ ನ್ಯಾಯ ಎಲ್ಲರಿಗೂ ದೊರೆಯಬೇಕು. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಸಮುದಾಯದ ಯುವಜನರು ಉತ್ತಮ ಶಿಕ್ಷಣ ಪಡೆಯಬೇಕು. ಮಕ್ಕಳನ್ನು ಶಿಕ್ಷಣದತ್ತ ಪ್ರೇರೇಪಿಸಲು ಸರ್ಕಾರವು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾ ಗಾಂಧಿ ಹಾಗೂ ಆದರ್ಶ ವಸತಿ ಶಾಲೆಗಳನ್ನು ಆರಂಭಿಸಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.
ಮಹನೀಯರ ಜಯಂತಿ ಕಾರ್ಯಕ್ರಮಗಳಲ್ಲಿ ಮೆರವಣಿಗೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಬದಲು, ವೇದಿಕೆಗಳಲ್ಲಿ ನಡೆಯುವ ಮುಖ್ಯ ಭಾಷಣಗಳನ್ನು ಆಲಿಸಬೇಕು. ಆದರ್ಶ ವ್ಯಕ್ತಿಗಳ ಇತಿಹಾಸ, ಪರಂಪರೆ ಮತ್ತು ಚಿಂತನೆಗಳನ್ನು ಅರಿತುಕೊಳ್ಳಬೇಕು. ಮುಂದಿನ ವರ್ಷದ ವಾಲ್ಮೀಕಿ ಜಯಂತಿಯ ವೇಳೆಗೆ ಜಿಲ್ಲಾ ಕೇಂದ್ರದಲ್ಲಿ ಮಹರ್ಷಿ ವಾಲ್ಮೀಕಿಯವರ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.ಸಂಸ್ಕೃತಿ ಚಿಂತಕ ಉದ್ದನೂರು ಮಹಾದೇವನಾಯಕ ಮಾತನಾಡಿ, ರಾಮಾಯಣದಲ್ಲಿ 24 ಸಾವಿರ ಸಂಸ್ಕೃತ ಶ್ಲೋಕಗಳನ್ನು ರಚಿಸುವ ಮೂಲಕ ಸುಸ್ಥಿರ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದವರು ಮಹರ್ಷಿ ವಾಲ್ಮೀಕಿ. ರಾಮ, ಲಕ್ಷ್ಮಣ, ಸೀತೆ ಮತ್ತು ರಾವಣರ ಪಾತ್ರಗಳ ಮೂಲಕ ಭೂಮಿಯ ಮೇಲಿನ ಜನರನ್ನೇ ದೈವತ್ವದ ನೆಲೆಯಲ್ಲಿ ಚಿತ್ರಿಸಿರುವುದು ವಾಲ್ಮೀಕಿಯವರ ಶ್ರೇಷ್ಠತೆಯನ್ನು ತೋರಿಸುತ್ತದೆ ಎಂದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ನಂತರ ಕಲಾವಿದ ನಟರಾಜು ಮತ್ತು ತಂಡದವರು ಹಂಪೆಯ ವೈಭವ, ಎಚ್ಚಮನಾಯಕನ ಶೌರ್ಯ ಹಾಗೂ ಸಾಹಸವನ್ನು ಬಿಂಬಿಸುವ ಕಿರುಪ್ರಹಸನ ಪ್ರದರ್ಶಿಸಿದರು. ಬಸವರಾಜು ಮತ್ತು ಲತಾ ಪುಟ್ಟಸ್ವಾಮಿ ತಂಡದವರು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಆಕರ್ಷಕ ಮೆರವಣಿಗೆ:ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ವಿವಿಧ ಆಕರ್ಷಕ ಕಲಾತಂಡಗಳೊಂದಿಗೆ ಬೆಳ್ಳಿರಥದಲ್ಲಿ ಅಲಂಕರಿಸಲಾಗಿದ್ದ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಪಶುಸಂಗೋಪನೆ ಮತ್ತು ಸಚಿವ ಸಿ.ಪುಟ್ಟರಂಗಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶ್ರೀ ಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ಮುಕ್ತಾಯಗೊಂಡಿತು.
ಮೆರವಣಿಗೆಯ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಹಾಗೂ ಡಿವೈಎಸ್ಪಿ ಸ್ನೇಹರಾಜ್ ಇದ್ದರು.ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ (ಮುನ್ನ), ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹರೀಶ್, ಮುಖಂಡರಾದ ಎಂ. ರಾಮಚಂದ್ರ, ಸುರೇಶ್ ನಾಯಕ, ರಾಮಸಮುದ್ರ ಸುರೇಶ್, ಅರಕಲವಾಡಿ ಸೋಮನಾಯಕ, ಕೆಲ್ಲಂಬಳ್ಳಿ ಸೋಮನಾಯಕ, ಚಾ.ಸಿ.ಸೋಮನಾಯಕ, ಶ್ರೀನಿವಾಸ ನಾಯಕ, ರಮೇಶ್, ಜಯಸಂದರ್, ಕಪನೀ ನಾಯಕ, ಚೆಂಗುಮಣಿ, ಶಿವರಾಜು, ನಾಗರಾಜು, ಚಿಕ್ಕ ಮಹದೇವು, ಎನ್.ರಾಚಪ್ಪ, ವಿರಾಟ್ ಶಿವು, ಪರಶಿವಮೂರ್ತಿ, ವರದನಾಯಕ, ಚಂದ್ರು, ನಾಗೇಂದ್ರ ನಾಯಕ, ಮನೋಜ್ ಕುಮಾರ್, ಮಾದಪ್ಪ, ಪ್ರಸಾದ್ ಹಲವರು ಹಾಜರಿದ್ದರು.