ಸಾರಾಂಶ
ಮಾಗಡಿ: ಪಟ್ಟಣದ ಪ್ರಮುಖ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಹಾಗೂ ಪುತ್ಥಳಿ ನಿರ್ಮಿಸಲಾಗುವುದು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಭರವಸೆ ನೀಡಿದರು.
ಪಟ್ಟಣದ ಶಿವಕುಮಾರ ಸ್ವಾಮೀಜಿ ಭವನದಲ್ಲಿ ಮಂಗಳವಾರ ತಾಲೂಕು ಆಡಳಿತ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಹಿಂದೂ ಧರ್ಮಕ್ಕೆ ಮಹಾಗ್ರಂಥವನ್ನು ಕೊಡುಗೆಯಾಗಿ ನೀಡಿದ್ದು, ಅವರ ಪ್ರತಿಮೆ ನಿರ್ಮಾಣಕ್ಕೆ ವಾಲ್ಮೀಕಿ ಸಮುದಾಯದವರು ಮುಂದಾಗಬೇಕು. ಪ್ರಮುಖ ವೃತ್ತಕ್ಕೆ ಹೆಸರಿಡುತ್ತೇವೆ ಎಂದು ಹೇಳಿದರು. ಕಳ್ಳರಾಗಿದ್ದ ವಾಲ್ಮೀಕಿ, ಜ್ಞಾನೋದಯವಾದ ಬಳಿಕ ರಾಮಾಯಣದಂತಹ ಮಹಾಕಾವ್ಯವನ್ನೇ ಬರೆದಿದ್ದಾರೆ. ಸಮುದಾಯದ ಬೇಡಿಕೆಯಾಗಿರುವ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಲು ಕುದೂರಿನಲ್ಲಿ ಮಾಡಲಾಗುತ್ತಿದ್ದು, ನಾಯಕನಪಾಳ್ಯ ಗೇಟ್ ಬಳಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಸ್‌ಸಿ/ಎಸ್‌ಟಿ ಜನಾಂಗಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದು ಐದು ಗ್ಯಾರಂಟಿಗಳ ಮೂಲಕ ಬಡವರ ಪರವಾಗಿ ಸಿದ್ದರಾಮಯ್ಯನವರ ಸರ್ಕಾರ ನಡೆಯುತ್ತಿದೆ ಎಂದು ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತಿ.ನಾ.ಪದ್ಮನಾಭ ಮಾತನಾಡಿ, ಬೇಡರ ಜನಾಂಗದಲ್ಲಿ ಹುಟ್ಟಿದರೂ ರಾಮಾಯಣ ಮಹಾಗ್ರಂಥ ರಚಿಸಿದ ಮಹನೀಯರು. ರಾಮಾಯಣವನ್ನು ಪ್ರತಿಯೊಬ್ಬರು ಮನೆಯಲ್ಲಿಟ್ಟು ಪೂಜೆ ಮಾಡಬೇಕು. ವಾಲ್ಮೀಕಿ ಬರೆದ ರಾಮಾಯಣ ಗ್ರಂಥದಿಂದ ಪ್ರೇರಣೆಗೊಂಡು ಕುವೆಂಪು ಶ್ರೀ ರಾಮಾಯಣ ದರ್ಶನಂ ಎಂಬ ಬರೆದು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದರು. ಕಸಾಪ ಕಳೆದ ಬಾರಿ ಪ್ರೌಢಶಾಲಾ ಮಕ್ಕಳಿಗೆ ರಾಮಾಯಣ ಪರೀಕ್ಷೆ ಮಾಡಿದ್ದು, ಮುಂದೆಯೂ ಮಾಡಲಿದ್ದು ಶಾಸಕ ಬಾಲಕೃಷ್ಣ ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಯುವ ಬರಹಗಾರ ಹೊನ್ನಾಪುರ ಲಿಖಿತ್ ಮಾತನಾಡಿ, ಕಳ್ಳರಾಗಿದ್ದ ಮಹರ್ಷಿ ನಾರದ ಮುನಿಗಳ ಪ್ರೇರಣೆಯಿಂದ ರಾಮನ ಜಪ ಆರಂಭಿಸಿ ಅವರ ರಾಮಾಯಣ ಕಥೆ ಬರೆದು ಸ್ವತಃ ರಾಮನ ಮಕ್ಕಳಾದ ಲವಕುಶರಿಗೆ ಕಥೆ ಹೇಳಿಕೊಟ್ಟ ಮಹನೀಯರು. ಅಂತಹ ಮಹಾಕವಿಯ ಜಯಂತಿ ಮಾಡಿ ಯುವಕರಿಗೆ ಅವರ ಆದರ್ಶಗಳನ್ನು ತಿಳಿಸಬೇಕು ಎಂದರು.
ತಾಲೂಕು ಆಡಳಿತ ವತಿಯಿಂದ ಸಮುದಾಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಸಮುದಾಯದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶರತ್ ಕುಮಾರ್, ತಾಪಂ ಇಒ ಜೈಪಾಲ್, ಬಿಇಒ ಚಂದ್ರಶೇಖರ್, ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ ಬಣ್ಣದ ಹನುಮಂತಯ್ಯ, ದಲಿತ ಮುಖಂಡರಾದ ಕಲ್ಕೆರೆ ಶಿವಣ್ಣ, ಕುದೂರು ಮಂಜೇಶ್, ನರಸಿಂಹಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಕೆ.ಧನಂಜಯ್ಯ, ದೇವೇಂದ್ರಪ್ಪ ಮುನಿರಾಜು ನಂಜುಂಡಪ್ಪ, ಪುರಸಭೆ ಸದಸ್ಯ ಅನಿಲ್ ಕುಮಾರ್, ಶಿವಕುಮಾರ್ ಇತರರು ಭಾಗವಹಿಸಿದ್ದರು.
(ಫೋಟೋ ಕ್ಯಾಪ್ಞನ್)ಮಾಗಡಿಯ ಶಿವಕುಮಾರ ಸ್ವಾಮೀಜಿ ಭವನದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನುಶಾಸಕ ಬಾಲಕೃಷ್ಣ ಉದ್ಘಾಟಿಸಿದರು. ತಹಸೀಲ್ದಾರ್ ಶರತ್ ಕುಮಾರ್ ಹಾಗೂ ಗಣ್ಯರು ಹಾಜರಿದ್ದರು.