ಸಾರಾಂಶ
ಹೊಸಪೇಟೆ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಮಾಜಿ ಸಚಿವ ಬಿ. ಶ್ರೀರಾಮುಲು ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಕೂಡಲೇ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ನಗರದ ವಾಲ್ಮೀಕಿ ವೃತ್ತದಲ್ಲಿ ಮಂಗಳವಾರ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ವಾಲ್ಮೀಕಿ ಸಮಾಜಕ್ಕೆ ನೋವುಂಟು ಮಾಡಿದ್ದಾರೆ. ಈ ಮಾತುಗಳು ಸಮಾಜದ ಬಲಿಷ್ಠ ನಾಯಕನಿಗೆ ಮತ್ತು ರಾಜ್ಯದ ವಾಲ್ಮೀಕಿ ನಾಯಕ ಸಮಾಜಕ್ಕೆ ನೋವು ತಂದಿದೆ. ಶಾಸಕ ಜನಾರ್ದನ ರೆಡ್ಡಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಅದರಲ್ಲೂ ಜಾತಿ ನಿಂದನೆ ಮತ್ತು ಮಾನನಷ್ಟ ಮೊಕದ್ದಮೆ ದೂರನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಘೋಷಣೆಗಳನ್ನು ಕೂಗಿದ ಸಮಾಜದ ಮುಖಂಡರು, ಶ್ರೀರಾಮುಲು ಅವರಿಂದಲೇ ಬೆಳೆದು, ಈಗ ಅವರ ವಿರುದ್ಧವೇ ಜನಾರ್ದನ ರೆಡ್ಡಿ ಅವರು ಮಾತನಾಡುತ್ತಿದ್ದಾರೆ. ಅಲ್ಲದೇ ಸಮಾಜಕ್ಕೆ ಘಾಸಿಯಾಗುವಂತೆ ಮಾತನಾಡಿದ್ದಾರೆ. ಇವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ನಗರದ ವಾಲ್ಮೀಕಿ ವೃತ್ತದಿಂದ ಎಸ್ಪಿ ಕಚೇರಿ ವರೆಗೆ ಬೈಕ್ ರ್‍ಯಾಲಿ ನಡೆಸಿ ಎಎಸ್ಪಿ ಸಲೀಂ ಪಾಷಾ ಅವರಿಗೆ ಮನವಿಪತ್ರ ಸಲ್ಲಿಸಿ, ಪ್ರಕರಣ ದಾಖಲಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.ವಾಗ್ವಾದನಗರದ ವಾಲ್ಮೀಕಿ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿದಾಗ ಪೊಲೀಸರು ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಬೆಂಬಲಿಗರ ನಡುವೆ ವಾಗ್ವಾದ ಕೂಡ ನಡೆಯಿತು. ಪ್ರತಿಭಟನೆ ಮಾಡೋಕೆ ಮಾತ್ರ ಅವಕಾಶ ಇದೆ. ಟೈರ್ ಗೆ ಬೆಂಕಿ ಹಚ್ಚೋಕೆ ಅವಕಾಶವಿಲ್ಲ ಎಂದು ಪೊಲೀಸರು ಹೇಳಿದಾಗ ವಾಗ್ವಾದ ನಡೆಯಿತು. ಬಳಿಕ ಬೈಕ್ ರ್‍ಯಾಲಿ ನಡೆಸಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಗುಜ್ಜಲ ಶ್ರೀನಾಥ, ದೇವರಮನೆ ಶ್ರೀನಿವಾಸ್, ಬಿ.ಎಸ್. ಜಂಬಯ್ಯ ನಾಯಕ, ಗೋಸಲ ಭರಮಪ್ಪ, ಜಂಬಾನಹಳ್ಳಿ ವಸಂತ್, ಕಣ್ಣಿ ಶ್ರೀಕಂಠ, ತಾರಿಹಳ್ಳಿ ಜಂಬುನಾಥ, ಕಿಚಿಡಿ ಶ್ರೀನಿವಾಸ್, ಗುಡಿಗಂಟಿ ಮಲ್ಲಿಕಾರ್ಜುನ, ಕಟಿಗಿ ವಿಜಯಕುಮಾರ, ಸುನೀಲ್, ಓಬಯ್ಯ, ಮಂಜುನಾಥ ಮತ್ತಿತರರಿದ್ದರು.ಶ್ರೀರಾಮುಲು ಕ್ಷಮೆಯಾಚಿಸಲು ರೆಡ್ಡಿಗೆ ಒತ್ತಾಯ
ಹೂವಿನಹಡಗಲಿ: ವಾಲ್ಮೀಕಿ ಸಮುದಾಯ ನಾಯಕ ಬಿ.ಶ್ರೀರಾಮುಲು ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ, ಶಾಸಕ ಗಾಲಿ ಜನಾರ್ದನ ರೆಡ್ಡಿ ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಶ್ರೀರಾಮುಲು ಅಭಿಮಾನಿ ಬಳಗ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಟಿ. ಪರಮೇಶ್ವರಪ್ಪ, ಶ್ರೀರಾಮುಲು ಅವರನ್ನು ಅಗತ್ಯವಿದ್ದಾಗ ಬಳಸಿಕೊಂಡು ನಂತರದಲ್ಲಿ, ಹೀಗೆ ಅವಮಾನಕರ ರೀತಿಯಲ್ಲಿ ಹೀಯಾಳಿಸುವುದು ಜನಾರ್ದನರೆಡ್ಡಿ ಗೌರವಕ್ಕೆ ಸೂಕ್ತವಲ್ಲ. ವಾಲ್ಮೀಕಿ ಸಮುದಾಯ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ, ನಮ್ಮ ಸಮುದಾಯದ ಪ್ರಬಲ ನಾಯಕ, ಮುಗ್ದ ಮನಸ್ಸಿನ ರಾಜಕಾರಣಿಯಾಗಿರುವ ಶ್ರೀರಾಮುಲು ಉತ್ತರ ಕರ್ನಾಟಕ ಪ್ರದೇಶದಲ್ಲಿ ಪಕ್ಷ ಸಂಘಟನೆ ಮಾಡಿ ದೊಡ್ಡ ಶಕ್ತಿ ಹೊಂದಿದ್ದಾರೆ. ಇಂತಹವರ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ ಎಂದರು.
ಅನಿಲ್‌ಕುಮಾರ್ ಮಾತನಾಡಿ, ಇವರ ಸ್ನೇಹ ಸಂಬಂಧ ಇನ್ನೊಬ್ಬರಿಗೆ ಮಾದರಿಯಾಗಲಿ, ಆದರೆ ಮಾರಕವಾಗುವುದು ಬೇಡ. ಮಾಧ್ಯಮದ ಮುಂದೆ ಶ್ರೀರಾಮುಲು ಬಗ್ಗೆ ಇಲ್ಲ-ಸಲ್ಲದ ಹೇಳಿಕೆಯನ್ನು ನೀಡಿರುವುದು ಖಂಡನೀಯ. ಈ ಕೂಡಲೇ ಶಾಸಕ ಜನಾರ್ದನರೆಡ್ಡಿ ವಾಲ್ಮೀಕ ಸಮುದಾಯ ಮತ್ತು ಶ್ರೀರಾಮುಲು ಅವರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಶ್ರೀರಾಮುಲು ಅಭಿಮಾನಿ ಬಳಗದ ತಾಲೂಕಾಧ್ಯಕ್ಷ ಲಕ್ಷ್ಮಣ ಬಾರ್ಕಿ, ಕಿರಣಕುಮಾರ, ಹನುಮಂತಪ್ಪ, ಬಂಗಾರಿ ಶಿವಾನಂದಪ್ಪ, ಎಂ. ಕುಮಾರ, ಮಂಜುನಾಥ, ವೀರೇಶ, ಮಲ್ಲಿಕಾರ್ಜುನಪ್ಪ, ಫಕ್ಕೀರೇಶ ಸೇರಿದಂತೆ ಇತರರಿದ್ದರು.