ಸಾರಾಂಶ
ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಕಾವ್ಯದಲ್ಲಿ ಶ್ರೀರಾಮನ ಪೂರ್ಣ ಜೀವನ ಚಿತ್ರವನ್ನು ನಮಗೆಲ್ಲ ಅರಿಯುವಂತೆ ಕಟ್ಟಿಕೊಟ್ಟಿದ್ದಾರೆ.
ಗದಗ: ಶ್ರೀರಾಮನ ಚರಿತ್ರೆಯನ್ನು ಜಗತ್ತಿಗೆ ತೋರಿಸುವ ಪಣ ತೊಟ್ಟು ಕಾವ್ಯರೂಪದಲ್ಲಿ ರಾಮಾಯಣವನ್ನು ಪರಿಚಯಿಸಿದವರು ಮಹರ್ಷಿ ವಾಲ್ಮೀಕಿ ಅವರು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಗದಗ- ಬೆಟಗೇರಿ ಇವರ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಕಾವ್ಯದಲ್ಲಿ ಶ್ರೀರಾಮನ ಪೂರ್ಣ ಜೀವನ ಚಿತ್ರವನ್ನು ನಮಗೆಲ್ಲ ಅರಿಯುವಂತೆ ಕಟ್ಟಿಕೊಟ್ಟಿದ್ದಾರೆ. ಅಲ್ಲದೆ ಶ್ರೀರಾಮನ ಆದರ್ಶ ಜೀವನ ಹಾಗೂ ಯಶಸ್ವಿ ಕುರಿತು ತಿಳಿಸಿದ್ದಾರೆ. ಶ್ರೀರಾಮನ ಜೀವನದ ತತ್ವಾದರ್ಶನಗಳನ್ನು ಸುಂದರವಾಗಿ ರಚನೆ ಮಾಡುವುದು ಸುಲಭದ ಮಾತಲ್ಲ. ನಾವೆಲ್ಲ ಆದರ್ಶದ ಬೆನ್ನತ್ತಬೇಕು. ಅವುಗಳ ಪಾಲನೆಯಿಂದ ನಮ್ಮ ಜೀವನ ಸುಂದರವಾಗುತ್ತದೆ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಶುಭಾಶಯಗಳನ್ನು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಅನುಮಸ್ಥಿತಿಯಲ್ಲಿ ಸಚಿವರ ವಾಲ್ಮೀಕಿ ಜಯಂತಿಯ ಸಂದೇಶವನ್ನು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರುಡಿ ವಾಚಿಸಿದರು.ಶಿಕ್ಷಕ ವೀರೇಶ ವಾಲ್ಮೀಕಿ ಉಪನ್ಯಾಸ ನೀಡಿ, ಸರ್ಕಾರ ಕಳೆದ 16 ವರ್ಷಗಳಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುತ್ತಿದೆ. ಮನುಕುಲದ ಒಳಿತಿಗಾಗಿ ಹಲವು ಗ್ರಂಥ ಕಾವ್ಯಗಳು ಹೊರಬಂದಿವೆ. ಅವುಗಳಲ್ಲಿ ವಿಶೇಷ ಸ್ಥಾನ ಪಡೆಯಲು ಮನುಷ್ಯನ ಜೀವನ ಉತ್ಸಾಹ ಅಧಿಕಗೊಳಿಸಲು ಸಹಕಾರಿಯಾಗಿದೆ ಎಂದರು.ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದ ಹಣಮರಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಧ್ಯಾಪಕಿ ಶಕುಂತಲಾ ಸಿಂದೂರ ಅವರು ವಾಲ್ಮೀಕಿ ಅವರ ಕುರಿತು ಸಂಗ್ರಹಿಸಿ ರಚಿಸಿದ ಗ್ರಂಥವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.ಸಮಾರಂಭದಲ್ಲಿ ಎಸ್ಪಿ ರೋಹನ್ ಜಗದೀಶ್, ಎಡಿಸಿ ಡಾ. ದುರ್ಗೇಶ್ ಕೆ.ಆರ್., ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ, ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಇತರರು ಇದ್ದರು.