ಸಾರಾಂಶ
ಇಂದಿನ ರಾಜಕೀಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಲ್ಲಿ ಶಾಂತಿ, ನೆಮ್ಮದಿ ಇಲ್ಲ. ಮೌಲ್ಯಧಾರಿತ ರಾಜಕಾರಣ ತನ್ನ ಅರ್ಥ ಕಳೆದುಕೊಂಡಿದೆ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಧಾರವಾಡ
ತವಕ, ತಲ್ಲಣಗಳು ಹೆಚ್ಚಾಗಿ ಆಸ್ಥಿರತೆಯಲ್ಲಿರುವ ರಾಜಕೀಯದಿಂದ ಕೆಲಕಾಲ ದೂರವಿದ್ದು, ನೈತಿಕ ಕಾರ್ಯಕ್ರಮಗಳಿಂದ ಮನಃಶಾಂತಿ, ನೆಮ್ಮದಿ ಪಡೆಯುವ ಚಿಂತನೆ ಹೊಂದಿದ್ದೇನೆ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಧಾರವಾಡದ ಬಸವ ಶಾಂತಿ ಮಿಷನ್ ಟ್ರಸ್ಟ್ ಏರ್ಪಡಿಸಿದ್ದ ಸಮಾರಂಭದಲ್ಲಿ ಮೂಲತಃ ರಾಮದುರ್ಗದ ಡಾ. ಶಶಿಕಾಂತ ಪಟ್ಟಣ ಅವರಿಗೆ ಬಸವಶಾಂತಿ ಪ್ರಶಸ್ತಿ ಪ್ರದಾನ ಮಾಡಿದ ಅವರು, ಇಂದಿನ ರಾಜಕೀಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಲ್ಲಿ ಶಾಂತಿ, ನೆಮ್ಮದಿ ಇಲ್ಲ. ಮೌಲ್ಯಧಾರಿತ ರಾಜಕಾರಣ ತನ್ನ ಅರ್ಥ ಕಳೆದುಕೊಂಡಿದೆ ಎಂದರು.
ಬಸವ ಸಾಹಿತ್ಯ ಚಿಂತಕ ರಂಜಾನ್ ದರ್ಗಾ ಮಾತನಾಡಿ, ಶರಣ ಸಾಹಿತ್ಯ, ಬಸವತತ್ವ ಕುರಿತು ಇನ್ನೂ ಬರಹ ಕಟ್ಟಬೇಕಿದೆ. ಮತ್ತು ಅದರಲ್ಲಿ ಒಳಗೊಳ್ಳಬೇಕಿದೆ ಎಂದರು.ಡಾ. ಮೃತ್ಯುಂಜಯ ಶೆಟ್ಟರ, ಡಾ. ವೀಣಾ ಹೂಗಾರ ಮಾತನಾಡಿದರು. ಬಸವ ಶಾಂತಿ ಮಿಶನ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಮಹಾದೇವ ಹೊರಟ್ಟಿ, ಡಾ. ವೀಣಾ ಬಿರಾದಾರ, ಸುಧಾ ಕಬ್ಬುರ, ಡಾ. ಅನುಷಾ ಸರದೇಸಾಯಿ, ಪ್ರೇಮಕ್ಕ ಹೊರಟ್ಟಿ, ಮಂಜುನಾಥ ಮೊಹರೆ ಇದ್ದರು. ನಂತರ ವಚನ ಸಂಗೀತ, ದಾಸರ ಪದ, ಅಭಂಗವಾಣಿ , ದೇಶಭಕ್ತಿ ಗೀತೆಗಳ ಮಧುರ ಹೊಳೆ ಹರಿಸಿದ 13ಕ್ಕೂ ಹೆಚ್ಚು ಸಂಗೀತ ಪ್ರತಿಭೆಗಳು ನಾದಮಯ ತ್ರಿವೇಣಿ ಸಂಗಮಕ್ಕೆ ಸಾಕ್ಷಿಯಾದರು.