ಯುವಕರ ಅಚ್ಚುಮೆಚ್ಚಿನ ವಂದೇ ಭಾರತ

| Published : Oct 26 2023, 01:00 AM IST

ಸಾರಾಂಶ

ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲಿನಲ್ಲಿ ಸೇ.62 ರಷ್ಟು ನೌಕರರು, ಉದ್ಯೋಗಿಗಳು ಅಂದರೆ 25 ರಿಂದ 59 ವಯೋಮಿತಿಯ ಜನರು ಸಂಚರಿಸುತ್ತಿದ್ದಾರೆ ಎಂಬುದು ಇತ್ತೀಚಿಗೆ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ. ಶೇ. 20ರಷ್ಟು 18-24 ಯುವಕರು, ಶೇ. 20ರಷ್ಟು 25-34 ವರ್ಷ ವಯಸ್ಸಿನ ಯುವಕರು ಹಾಗೂ ಶೇ. 30 ರಷ್ಟು 35-49 ವರ್ಷ ವಯಸ್ಸಿನ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಯುವಕರು ಆಧ್ಯತೆಯ ಮೇರೆಗೆ ಇದೇ ರೈಲಿನಲ್ಲಿ ಸಂಚರಿಸುತ್ತಿರುವುದು ಸಹ ಕಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರೈಲ್ವೆ ಇಲಾಖೆ ಇತ್ತೀಚಿಗೆ ಪರಿಚಯಿಸಿದ ಧಾರವಾಡ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಡುವಿನ "ವಂದೇ ಭಾರತ ಎಕ್ಸಪ್ರೆಸ್ ರೈಲು " ಯುವಕರು ಹಾಗೂ ಉದ್ಯೋಗಿಗಳ ಅಚ್ಚುಮೆಚ್ಚಿನ ಆಯ್ಕೆಯಾಗಿ ಹೊರ ಹೊಮ್ಮಿದ್ದು, ಅದರಲ್ಲೂ ನೌಕರಸ್ಥ ಯುವಕರಿಗೆ ಬಹುಬೇಡಿಕೆಯ ರೈಲಾಗಿದೆ ಎಂಬುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲಿನಲ್ಲಿ ಸೇ.62 ರಷ್ಟು ನೌಕರರು, ಉದ್ಯೋಗಿಗಳು ಅಂದರೆ 25 ರಿಂದ 59 ವಯೋಮಿತಿಯ ಜನರು ಸಂಚರಿಸುತ್ತಿದ್ದಾರೆ ಎಂಬುದು ಇತ್ತೀಚಿಗೆ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ. ಶೇ. 20ರಷ್ಟು 18-24 ಯುವಕರು, ಶೇ. 20ರಷ್ಟು 25-34 ವರ್ಷ ವಯಸ್ಸಿನ ಯುವಕರು ಹಾಗೂ ಶೇ. 30 ರಷ್ಟು 35-49 ವರ್ಷ ವಯಸ್ಸಿನ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಯುವಕರು ಆಧ್ಯತೆಯ ಮೇರೆಗೆ ಇದೇ ರೈಲಿನಲ್ಲಿ ಸಂಚರಿಸುತ್ತಿರುವುದು ಸಹ ಕಂಡು ಬಂದಿದೆ.

ಅತ್ಯಂತ ಆರಾಮದಾಯಕವಾಗಿರುವ ವಂದೇ ಭಾರತ ರೈಲಿನಲ್ಲಿ 360- ಡಿಗ್ರಿ ತಿರುಗುವ (ರಿವಾಲ್ವಿಂಗ್) ಸೀಟ್‌ಗಳು, ಪ್ರತಿ ಸೀಟಿಗೆ ಟಚ್ ಆಧಾರಿತ ರೀಡಿಂಗ್ ಲೈಟ್‌ಗಳು, ಸ್ವಯಂಚಾಲಿತ ಪ್ಲಗ್ ಬಾಗಿಲುಗಳು, ಪ್ರತಿ ಸೀಟಿಗೆ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳು, ಜಿಪಿಎಸ್ ಆಧಾರಿತ ಆಡಿಯೋ ವಿಷುವಲ್‌ ವ್ಯವಸ್ಥೆ, ಮನರಂಜನೆಗಾಗಿ ಆನ್‌ಬೋರ್ಡ್‌ ವೈಫೈ, ಆರಾಮದಾಯಕ ಸೀಟ್‌ಗಳನ್ನು ಅಳವಡಿಸಲಾಗಿದೆ. ಈ ಎಲ್ಲ ಉತ್ಕೃಷ್ಟ ಸಾರಿಗೆ ಗುಣಮಟ್ಟ ಮತ್ತು ಇತರ ಸೌಕರ್ಯಗಳಿಂದಾಗಿ ಜನಪ್ರಿಯವಾಗಿದೆ. ಇದಲ್ಲದೇ ತ್ವರಿತ ಪ್ರಯಾಣ ಹಾಗೂ ಸಮಯ ಉಳಿತಾಯ ಕೂಡ ಅನುಕೂಲಕರವಾಗಿದೆ ಎಂದು ವಂದೇ ಭಾರತ್ ರೈಲು ಪ್ರಯಾಣಿಕ ರಘುರಾಮ ಹೇಳುತ್ತಾರೆ.

ಐಟಿ ರಾಜಧಾನಿ ಬೆಂಗಳೂರಿಗೆ ತ್ವರಿತವಾಗಿ ಸಂಪರ್ಕಿಸಲು ಈ ರೈಲು ಅವಕಾಶವಾಗಿ ಮಾರ್ಪಟ್ಟಿದೆ. ಇತರ ರೈಲುಗಳಿಗೆ ಹೋಲಿಸಿದರೆ ವಂದೇ ಭಾರತ್ ರೈಲು ವೇಗವಾಗಿ ಸಂಚರಿಸುತ್ತಿದ್ದು, 1 ಗಂಟೆ ಬೇಗ ತಲುಪಲಿದ್ದು, ದೈನಂದಿನ ಪ್ರಯಾಣಕ್ಕೆ ಸೂಕ್ತವಾಗಿದೆ ಎಂದು ನೈರುತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಆನೀಶ ಹೆಗಡೆ ಹೇಳುತ್ತಾರೆ.

ಪ್ರಯಾಣಿಕರಿಗೆ ದಕ್ಷ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಗಳನ್ನು ಒದಗಿಸಲು ನೈರುತ್ಯ ರೈಲ್ವೆ ಬದ್ಧವಾಗಿದೆ ಎಂದೂ ತಿಳಿಸಿದ್ದಾರೆ.

ಈ ರೈಲು ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೊರಟು, ಹುಬ್ಬಳ್ಳಿ, ದಾವಣಗೆರೆ, ಯಶವಂತಪುರ ನಿಲುಗಡೆಯಾಗಿ ಕೆಎಸ್‌ಆರ್‌ ಬೆಂಗಳೂರು ನಿಲ್ದಾಣವನ್ನು 7.45ಗಂಟೆಗೆ ತಲುಪುತ್ತದೆ.