ಬ್ರಿಟಿಷರ ಸಂಕೋಲೆಯಲ್ಲಿ ದೇಶವಿದ್ದಾಗ ಸಾಹಿತಿ ಬಂಕಿಮ ಚಂದ್ರ ಚಟರ್ಜಿ ಅವರು 1875ರಲ್ಲಿ ಏಕತೆ ಮತ್ತು ಶೌರ್ಯ ಪ್ರತಿಬಿಂಬಿಸುವ ಹೋರಾಟದ ಗೀತೆಯಾಗಿ ಒಂದೇ ಮಾತರಂ ರಚನೆಗೊಳ್ಳುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ವಿದ್ಯಾಸಂಸ್ಥೆ ವತಿಯಿಂದ ಜಾಗೃತಿ ಜಾಥಾ ನಡೆಸಿತು.

ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯ ಸಂಕೇತವಾಗಿ ಬಂಕಿಮ ಚಂದ್ರ ಚಟರ್ಜಿ ಅವರಿಂದ ರಚಿತವಾದ ವಂದೇ ಮಾತರಂ ಗೀತೆ ರಚನೆಯಾಗಿ 150 ವರ್ಷ ಸಂದಿರುವ ಸಂದರ್ಭದಲ್ಲಿ ನಗರದ ಕಾವೇರಿ ಉದ್ಯಾನವನದಿಂದ ಮೈಸೂರು- ಬೆಂಗಳೂರು ಹೆದ್ದಾರಿ, ಜಯಚಾಮರಾಜ ವೃತ್ತ, ಮಹಾವೀರ ವೃತ್ತದ ಮೂಲಕ ಸರ್.ಎಂ.ವಿಶ್ವೇಶ್ವರಯ್ಯ ರಸ್ತೆ ಮಾರ್ಗವಾಗಿ ಆಡಳಿತ ಮಂಡಳಿ, ಶಾಲಾ ಮಕ್ಕಳು ಜಿಲ್ಲಾ ಕ್ರೀಡಾಂಗಣದವರೆಗೂ ಜಾಗೃತಿ ಜಾಥಾ ನಡೆಸಿದರು.

ಇದಕ್ಕೂ ಮುನ್ನ ಪೊಲೀಸ್ ವೃತ್ತ ನಿರೀಕ್ಷಕ ಸಿದ್ದರಾಜು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಟಿ.ಎಂ.ಜಗದೀಶ್ ಮಾತನಾಡಿ, ರಾಷ್ಟ್ರಗೀತೆ ಜನಗಣಮನ ಹಾಡಿನಂತೆಯೇ ವಂದೇ ಮಾತರಂ ಗೀತೆಯನ್ನು ಪ್ರತಿದಿನ ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಡಲಿ ಎಂದು ಸರ್ಕಾರಗಳಿಗೆ ಆಗ್ರಹಿಸಿದರು.

ದೇಶದ ಜನರೆಲ್ಲ ಒಂದೇ ತಾಯಿ ಭಾರತ ಮಾತೆಯ ಮಕ್ಕಳಾಗಿದ್ದಾರೆ. ಈ ಹಾಡಿನ ಮೂಲಕ ದೇಶಪ್ರೇಮ ರಾಷ್ಟ್ರಭಕ್ತಿ, ರಾಷ್ಟ್ರೀಯ ಏಕತೆ ಮತ್ತು ಶೌರ್ಯ ಮೂಡಿಸುವ ಚೈತನ್ಯದಾಯಕ ಸಾಲುಗಳಿವೆ. ವಿದ್ಯಾರ್ಥಿಗಳೇ ನಿಮ್ಮನ್ನು ಯಾರಾದರೂ ಕೇಳಿದರೆ ಹಿಂದೂ ಧರ್ಮ, ದೇವರು ಮೊದಲ ಎಂದು ಕೇಳಿದರೆ ನೀವು ದೇಶ ಮೊದಲು ಎಂದು ಹೆಮ್ಮೆಯಿಂದ ಹೇಳಬೇಕು ಎಂದು ಮನವಿ ಮಾಡಿದರು.

ಎನ್‌ಸಿಸಿ ಗೈಡ್ ಮಾಸ್ಟರ್ ರಾಜು ಮಾತನಾಡಿ, ಬ್ರಿಟಿಷರ ಸಂಕೋಲೆಯಲ್ಲಿ ದೇಶವಿದ್ದಾಗ ಸಾಹಿತಿ ಬಂಕಿಮ ಚಂದ್ರ ಚಟರ್ಜಿ ಅವರು 1875ರಲ್ಲಿ ಏಕತೆ ಮತ್ತು ಶೌರ್ಯ ಪ್ರತಿಬಿಂಬಿಸುವ ಹೋರಾಟದ ಗೀತೆಯಾಗಿ ಒಂದೇ ಮಾತರಂ ರಚನೆಗೊಳ್ಳುತ್ತದೆ.

ಸ್ವಾತಂತ್ರ್ಯ ಸಂಗ್ರಾಮದ ಪೂರ್ತಿದಾಯಕ ಗೀತೆಯಾಗಿ ವಂದೇ ಮಾತರಂ ಗೀತೆಯು ಭಾರತ ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ಹೋರಾಟ ಗೀತೆಯಾಗಿ ಮೈ ರೋಮಾಂಚನಗೊಳಿಸುವಂತೆ ಸದ್ದು ಮಾಡಿತು ಎಂದರು.

ಜಾಥಾದಲ್ಲಿ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಡಾ.ಟಿ.ಎಂ.ಪ್ರಕಾಶ್, ಪ್ರಾಂಶುಪಾಲ ಡಾ.ರಾಮಲಿಂಗಯ್ಯ, ಟ್ರಸ್ಟಿಗಳಾದ ಕೆ.ಎಸ್.ಬಸವರಾಜು, ಡಿ.ಎಸ್.ದೇವರಾಜು, ಉಪ ಪ್ರಾಂಶುಪಾಲೆ ಮಂಗಳಮ್ಮ, ಮುಖ್ಯೋಪಾಧ್ಯಾಯನಿ ತೇಜೇಶ್ವರಿ, ಕಾರ್ಯದರ್ಶಿ ಎಚ್.ಎಸ್.ಚುಂಚೆಗೌಡ, ಅಧ್ಯಾಪಕ ವರ್ಗದವರು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.