ಶೃಂಗೇರಿ ವಂದೇ ಮಾತರಂ ಕೇವಲ ಗೀತೆ, ಘೋಷ ವಾಕ್ಯವಲ್ಲ. ಅದು ನಮ್ಮ ದೇಶದ ಶಕ್ತಿ, ಭಕ್ತಿ, ಗೌರವದ ಸಂಕೇತ. ದೇಶಭಕ್ತಿಯ ಪ್ರತೀಕ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

- ಶೃಂಗೇರಿಯಲ್ಲಿ ವಂದೇ ಮಾತರಂ ಅಭಿಯಾನ । ಕಾಲ್ನಡಿಗೆ ಜಾಥ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ವಂದೇ ಮಾತರಂ ಕೇವಲ ಗೀತೆ, ಘೋಷ ವಾಕ್ಯವಲ್ಲ. ಅದು ನಮ್ಮ ದೇಶದ ಶಕ್ತಿ, ಭಕ್ತಿ, ಗೌರವದ ಸಂಕೇತ. ದೇಶಭಕ್ತಿಯ ಪ್ರತೀಕ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ತಾಲೂಕು ಬಿಜೆಪಿ ಆಯೋಜಿಸಿದ್ದ ವಂದೇ ಮಾತರಂ ಅಭಿಯಾನ ಹಾಗೂ ಕಾಲ್ನಡಿಗೆ ಜಾಥ, ಸಭಾ ಕಾರ್ಯಕ್ರಮದಲ್ಲಿ ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಸ್ವಾತಂತ್ರ್ಯ ಚಳುವಳಿ ಸಂದರ್ಭದಲ್ಲಿ ಇಡೀ ದೇಶವನ್ನು ಒಗ್ಗೂಡಿಸಿ ವಂದೇ ಮಾತರಂ ಘೋಷಣೆ ಸಹಸ್ರಾರು ಹೋರಾಟಗಾರರಿಗೆ ಸ್ಪೂರ್ತಿ ನೀಡಿತು. ವಂದೇ ಮಾತರಂ ಗೀತೆ ಹಾಡಿದ್ದಕ್ಕೆ ಅನೇಕರು ಜೈಲಿಗೆ ಹೋದರು. ಬಲಿದಾನ ಮಾಡಿದರು. ವಂದೇ ಮಾತರಂ ಗೀತೆ ರಚನೆಯಾಗಿ ಸುಮಾರು 150 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಬಂಕಿಮಚಂದ್ರ ಚಟರ್ಜಿಯವರ ವಂದೇ ಮಾತರಂ ಗೀತೆಯ ಅಭಿಯಾನ ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ರಾಜ್ಯಸರ್ಕಾರ ರಾಜಕೀಯ ದುರುದ್ದೇಶದಿಂದ ವಂದೇ ಮಾತರಂ ಗೀತೆಗೆ ಅಪಮಾನ ಗೊಳಿಸುವ ಕೆಲಸ ಮಾಡುತ್ತಿದೆ. ಸಂಪೂರ್ಣವಾಗಿ ಗೀತೆ ಹಾಡುವುದನ್ನು ಬಿಟ್ಟು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿದೆ. ಇದು ರಾಷ್ಟ್ರಕ್ಕೆ ಮಾಡುವ ದ್ರೋಹ. ವಂದೇ ಮಾತರಂ ಹೆಸರಲ್ಲಿ ರಾಜಕಾರಣ ಮಾಡಬಾರದು ಎಂದರು.

ದಿಕ್ಸೂಚಿ ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ. ಹಿಂದೆ ದೇಶ ಒಡೆಯುವ ಕೆಲಸ ಮಾಡಿತು. ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಲೇ ಬಂದಿದೆ. ಒಲೈಕೆ ರಾಜಕಾರಣ ಕಾಂಗ್ರೆಸ್ ನ ಜಾಯಮಾನ. ಖಿಲಾಪತ್ ಚಳುವಳಿ ಪ್ರೋತ್ಸಾಹಿಸಿ ದೇಶ ಒಡೆಯಲು ಸ್ಫೂರ್ತಿ ನೀಡಿತು ಎಂದು ಆರೋಪಿಸಿದರು.

ವಂದೇ ಮಾತರಂ ಕಡ್ಡಾಯಗೊಳಿಸಲು ಬಿಡುವುದಿಲ್ಲ. ಜೈಲಿಗೆ ಹೋಗಲು ಬೇಕಾದರೆ ಸಿದ್ಧ ಎನ್ನುತ್ತಾರೆ. 1905 ರ ಬಂಗಾಳ ವಿಭಜನೆ ವೇಳೆಯಲ್ಲಿ ವಂದೇ ಮಾತರಂ ಹೋರಾಟಗಾರರಿಗೆ ಸ್ಫೂರ್ತಿ ನೀಡಿತು. ವಂದೇ ಮಾತರಂಗಾಗಿ ಸಾವಿರಾರು ಯುವಕರು ಪ್ರಾಣ ತ್ಯಾಗ ಮಾಡಿದರು. ನಮ್ಮ ರಾಷ್ಟ್ರಭಕ್ತಿ ಸಂಕೇತ ವಂದೇ ಮಾತರಂ ರಾಷ್ಟ್ರ ಭಕ್ತರ ಗೌರವದ ಸಂಕೇತವೂ ಆಗಿದೆ ಎಂದರು,

ಮಾಜಿ ಸಚಿವ ಡಿ.ಎನ್.ಜೀವರಾಜ್, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಶೃತಿ, ಸುರೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಬೆಳಿಗ್ಗೆ ಮೆಣಸೆ ಸರ್ಕಲ್ ನಿಂದ ವಂದೇ ಮಾತರಂ ಅಭಿಯಾನದ ಕಾಲ್ನಡಿಗೆ ಜಾಥಾ ಹೊರಟು ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಬಂದಿತು. ವಂದೇ ಮಾತರಂ ಘೋಷ ವಾಕ್ಯಗಳೊಂದಿಗೆ ಭಾರತೀ ಬೀದಿ ಪ್ರಮುಖ ಬೀದಿಗಳಲ್ಲಿ ಸಾಗಿ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡಿತು.ಬಿ.ಶಿವಶಂಕರ್ ಸ್ವಾಗತಿಸಿದರು. ಎಚ್ ಎಸ್ ವೇಣುಗೋಪಾಲ್ ನಿರೂಪಿಸಿ ವಂದಿಸಿದರು.

26 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದ ವಂದೇ ಮಾತರಂ ಅಭಿಯಾನ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.

26 ಶ್ರೀ 2-ಶೃಂಗೇರಿ ಪಟ್ಟಣದಲ್ಲಿ ತಾಲೂಕು ಬಿಜೆಪಿಯಿಂದ ವಂದೇ ಮಾತರಂ ಅಭಿಯಾನದ ಅಂಗವಾಗಿ ಕಾಲ್ನಡಿಗೆ ಜಾಥಾ ನಡೆಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ,ಮಾಜಿ ಸಚಿವ ಡಿ.ಎನ್ ಜೀವರಾಜ್ ಮತ್ತಿತರರು ಇದ್ದರು.