ನಿರಂತರ ಮಳೆಗೆ ತುಂಬಿ ಹರಿಯುತ್ತಿರುವ ವರದೆ, ನೆರೆ ಭೀತಿಯಲ್ಲಿ ಗ್ರಾಮಸ್ಥರು

| Published : Jul 19 2024, 12:52 AM IST

ನಿರಂತರ ಮಳೆಗೆ ತುಂಬಿ ಹರಿಯುತ್ತಿರುವ ವರದೆ, ನೆರೆ ಭೀತಿಯಲ್ಲಿ ಗ್ರಾಮಸ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ತಾಲೂಕಿನಲ್ಲಿ ಬುಧವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ವರದಾ, ಧರ್ಮಾ ನದಿಗಳು ತುಂಬಿ ಹರಿಯುತ್ತಿವೆ. ಬ್ಯಾರೇಜ್‌ಗಳ ಮೇಲೆ ನೀರು ಹರಿಯುತ್ತಿವೆ. ಧರ್ಮಾ ಜಲಾಶಯ ಒಂದೆರಡು ದಿನಗಳಲ್ಲಿ ತುಂಬಿ ಕೋಡಿ ಬೀಳುವ ಸಾಧ್ಯತೆ ಇದೆ.

ಹಾನಗಲ್ಲ: ತಾಲೂಕಿನಲ್ಲಿ ಬುಧವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ವರದಾ, ಧರ್ಮಾ ನದಿಗಳು ತುಂಬಿ ಹರಿಯುತ್ತಿವೆ. ಬ್ಯಾರೇಜ್‌ಗಳ ಮೇಲೆ ನೀರು ಹರಿಯುತ್ತಿವೆ. ಧರ್ಮಾ ಜಲಾಶಯ ಒಂದೆರಡು ದಿನಗಳಲ್ಲಿ ತುಂಬಿ ಕೋಡಿ ಬೀಳುವ ಸಾಧ್ಯತೆ ಇದೆ. ತಾಲೂಕಿನಲ್ಲಿ ೧೫ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಬಾಳಂಬೀಡ, ಹಿರೇಕಾಂಸಿ ಏತ ನೀರಾವರಿಯಿಂದ ಕೆರೆಗೆ ನೀರು ತುಂಬುವ ಕಾರ್ಯವೂ ನಡೆಯುತ್ತಿದೆ. ಮಳೆ ಆತಂಕದ ಗ್ರಾಮಗಳಿಗೆ ತಹಸೀಲ್ದಾರ್‌ ಭೇಟಿ ನೀಡುತ್ತಿದ್ದಾರೆ. ಹಾನಗಲ್ಲ ತಾಲೂಕಿನಲ್ಲಿ ಒಂದು ವಾರದಿಂದ ಹೆಚ್ಚು ಮಳೆ ಬೀಳುತ್ತಿದ್ದು, ವರದಾ ನದಿಯ ಬಹುತೇಕ ಬ್ಯಾರೇಜ್‌ಗಳು ತುಂಬಿ ಹರಿಯುತ್ತಿವೆ. ಕೂಡಲ ನಾಗನೂರು, ಬಾಳಂಬೀಡ ಲಕಮಾಪುರ, ಆಡೂರು ತುಮರಿಕೊಪ್ಪದ ಬ್ಯಾರೇಜ್‌ಗಳ ಮೇಲೆ ಆಗಲೇ ನೀರು ರಭಸವಾಗಿ ಹರಿಯುತ್ತಿದೆ. ಈ ಬ್ಯಾರೇಜ್‌ಗಳ ಮೇಲಿನಿಂದ ಜನರ ಓಡಾಟವನ್ನು ತಾಲೂಕು ಆಡಳಿತ ನಿಯಂತ್ರಿಸಿದೆ.

ಅಂದಾಜು ೧೫ ಮನೆಗಳು ಭಾಗಶಃ ಕುಸಿದ ವರದಿಗಳು ತಾಲೂಕು ಆಡಳಿತಕ್ಕೆ ತಲುಪಿದ್ದು, ಇನ್ನು ಬಹಳಷ್ಟು ಮನೆಗಳು ಭಾಗಶಃ ಬಿದ್ದ ಮಾಹಿತಿ ಇದೆ. ತೋಟಗಾರಿಕೆಯ ಅಂದಾಜು ಆರೇಳು ಹೆಕ್ಟೇರ್ ಪೈರು ಗಾಳಿ ಮಳೆಗೆ ಹಾಳಾದ ವರದಿ ಇದೆ.

ತಹಸೀಲ್ದಾರ್ ಎಸ್. ರೇಣುಕಮ್ಮ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ ವರದಿಯನ್ನು ಪಡೆಯುತ್ತಿದ್ದಾರೆ. ಅಲ್ಲದೆ ವರದಾ ನದಿ ನೀರು ಹೆಚ್ಚಾಗಿ ಪಕ್ಕದ ಗ್ರಾಮಗಳಿಗೆ ನುಗ್ಗುವಂತಿದ್ದರೆ ಕೂಡಲೇ ಜನ, ಜಾನುವಾರುಗಳನ್ನು ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ತಹಸೀಲ್ದಾರರು ವರದಾ ನದಿ ದಡದ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಗುರುವಾರ ತಿಳವಳ್ಳಿ, ಮಕರವಳ್ಳಿ, ಹೊಂಕಣ ಗ್ರಾಮಗಳಿಗೆ ಭೇಟಿ ನೀಡಿ ಮಳೆ ಪರಿಣಾಮಗಳನ್ನು ಪರಿಶೀಲಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ್ ಎಸ್. ರೇಣುಕಮ್ಮ, ಹಾನಗಲ್ಲ ತಾಲೂಕಿನಲ್ಲಿ ಬಿದ್ದ ಮಳೆಗಿಂತ ಉತ್ತರ ಕನ್ನಡದಲ್ಲಿ ಬಿದ್ದ ಮಳೆಗೆ ವರದಾ ನದಿ ತುಂಬಿ ಹರಿಯುತ್ತಿದೆ. ಒಂದರಡು ದಿನಗಳಲ್ಲಿ ಧರ್ಮಾ ಜಲಾಶಯವೂ ತುಂಬಿ ನೀರು ಕೋಡಿ ಬೀಳುತ್ತದೆ ಎಂಬ ಮಾಹಿತಿ ಇದೆ. ತಾಲೂಕಿನ ಎಲ್ಲ ಕಂದಾಯ ಇಲಾಖೆಯ ಸಿಬ್ಬಂದಿ ಅಲರ್ಟ್‌ ಇದ್ದಾರೆ. ಯಾವುದೇ ಗ್ರಾಮದಲ್ಲಿ ಮಳೆಯಿಂದ ಏನೇ ತೊಂದರೆಯಾದರೂ ತಕ್ಷಣ ನನ್ನ ಗಮನಕ್ಕೆ ತರಲು ಸೂಚಿಸಲಾಗಿದೆ. ಹೀಗೆ ಮಳೆ ಮುಂದುವರಿದರೆ ವರದಾ ನದಿ ದಡದ ಗ್ರಾಮಗಳಿಗೆ ನೀರು ಬರುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲ ಸುರಕ್ಷತಾ ಕ್ರಮಗಳಿಗೆ ತಾಲೂಕು ಆಡಳಿತ ಸಿದ್ಧವಿದೆ ಎಂದು ತಿಳಿಸಿದರು.

ಹೊಸೂರು ಗ್ರಾಮದಲ್ಲಿ ರಸ್ತೆ ಹಾಳಾಗಿ ಜನರು ಪ್ರತಿಭಟನೆ ಮಾಡಿರುವ ಕುರಿತು ಕನ್ನಡಪ್ರಭದಲ್ಲಿ ಪ್ರಕಟವಾದ ವರದಿ ಬಗ್ಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಎಸ್. ರೇಣುಕಮ್ಮ, ರಸ್ತೆ ದುರಸ್ತಿ ಕುರಿತು ಲೋಕೋಪಯೋಗಿ ಇಲಾಖೆ ಹಾಗೂ ಬಸ್‌ ನಿಲ್ದಾಣದ ಸಮಸ್ಯೆ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮಾತನಾಡಿದ್ದು, ರಸ್ತೆ ಟೆಂಡರ್ ಪ್ರಕ್ರಿಯೆ ನಡೆದ ಬಗ್ಗೆ ಮಾಹಿತಿ ಇದೆ. ಉಳಿದ ಸಮಸ್ಯೆಗಳನ್ನು ಖುದ್ದಾಗಿ ಭೇಟಿ ನೀಡಿ ಶೀಘ್ರ ಪರಿಹರಿಸಲಾಗುವುದು ಎಂದು ತಿಳಿಸಿದರು.