ಭಾವ ಪರವಶಗೊಳಿಸಿದ ವರದಪುರದ ವರದಯೋಗಿ

| Published : Mar 11 2024, 01:24 AM IST

ಸಾರಾಂಶ

ಭಗವಾನ್ ದತ್ತಾತ್ರೇಯರ ಅವತಾರವೆಂದೇ ನಂಬಲಾಗಿರುವ ಶ್ರೀಧರ ಸ್ವಾಮಿಗಳ ಸಂಪೂರ್ಣ ಜೀವನಗಾಥೆಯ ವಿವಿಧ ಮಜಲುಗಳನ್ನು ಕಲಾವಿದರು ಮನೋಜ್ಞವಾಗಿ ಪ್ರತಿಬಿಂಬಿಸಿದರು

ಕುಮಟಾ: ಇಲ್ಲಿನ ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಶ್ರೀಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಪಟ್ಟಣದ ಗಿಬ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸದ್ಗುರು ಶ್ರೀಧರ ಸ್ವಾಮಿ ಜೀವನ ಚರಿತ್ರೆ ಆಧಾರಿತ ವರದಪುರದ ವರದಯೋಗಿ ನಾಟಕ ಪ್ರೇಕ್ಷಕರನ್ನು ಭಕ್ತಿಭಾವ ಪರವಶ ಲೋಕದಲ್ಲಿ ವಿಹರಿಸುವಂತೆ ಮಾಡಿತು.

ಭಗವಾನ್ ದತ್ತಾತ್ರೇಯರ ಅವತಾರವೆಂದೇ ನಂಬಲಾಗಿರುವ ಶ್ರೀಧರ ಸ್ವಾಮಿಗಳ ಸಂಪೂರ್ಣ ಜೀವನಗಾಥೆಯ ವಿವಿಧ ಮಜಲುಗಳನ್ನು ಕಲಾವಿದರು ಮನೋಜ್ಞವಾಗಿ ಪ್ರತಿಬಿಂಬಿಸಿದರು. ರಾಷ್ಟ್ರ ಸಂತನಾಗಿ, ಶಿವಾಜಿ ಮಹಾರಾಜರ ಗುರು ಶ್ರೀಸಮರ್ಥ ರಾಮದಾಸರ ಶಿಷ್ಯರಾಗಿ, ಸನ್ಯಾಸ ದೀಕ್ಷಾ ಬದ್ಧರಾಗಿ, ಭಕ್ತರ ಉದ್ಧಾರಕ್ಕಾಗಿ ನಾಡಿನ ಉದ್ದಗಲದ ಸಂಚಾರವನ್ನು ನೈಜರೂಪಕವಾಗಿ ರಂಗದ ಮೇಲೆ ತಂದಿಟ್ಟರು. ಪರಿವ್ರಾಜಕರಾಗಿ ಕಾಶಿಯಲ್ಲಿ ತಪಸ್ಸನ್ನಾಚರಿಸಿದ ಶ್ರೀಧರರು ನಂತರ ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಾದ್ಯಂತ ಸಂಚರಿಸಿ ಕರ್ನಾಟಕದಲ್ಲಿ ಬಂದಾಗ ತಾಯಿ ದುರ್ಗಾಂಬೆಯ ಅಣತಿಯಂತೆ ಸಾಗರದ ವರದಹಳ್ಳಿಯಲ್ಲಿ ನೆಲೆ ನಿಂತು, ದುರ್ಗಾ ದೇವಾಲಯದ ಜೀರ್ಣೋದ್ಧಾರ ಮಾಡಿ, ಪೂಜಾದಿ ಕಾರ್ಯಗಳು ನಿರಂತರವಾಗಿ ನಡೆಯಲು ಕಾರಣರಾದ ಬಗೆಯನ್ನು ಪರಿಣಾಮಕಾರಿಯಾಗಿ ಅಭಿನಯಿಸಿದರು. ವರದಹಳ್ಳಿಯಲ್ಲಿ ಗುಡ್ಡದ ಮೇಲೆ ತಪಸ್ಸಿನ ಶಕ್ತಿಯಿಂದ ನೀರನ್ನು ಉದ್ಭವಿಸುವಂತೆ ಮಾಡಿದ ಸನ್ನಿವೇಶ ರೋಮಾಂಚನಕಾರಿ ಮೂಡಿಬಂತು.

ಹೊನ್ನಾವರ ಮಣ್ಣಿಗೆಯ ಎಂ.ಜಿ.ವಿಷ್ಣು ವಿರಚಿತ ಈ ನಾಟಕಕ್ಕೆ ರಂಗಕರ್ಮಿ ಜಿ.ಡಿ.ಭಟ್ಟ ಕೆಕ್ಕಾರು ರಂಗರೂಪ ಕೊಟ್ಟು ನಿರ್ದೇಶನವನ್ನೂ ಮಾಡಿದ್ದರು. ಸ್ವತಃ ಶ್ರೀಧರರ ಪಾತ್ರವನ್ನು ನೈಜವಾಗಿ ಅಭಿನಯಿಸಿ ನಿರೂಪಿಸಿದ ನಾಟಕ ಸಂಘಟಕ ಕೃಷ್ಣಾನಂದ ಭಟ್ಟ ಉಪ್ಲೆ ಪಾಲ್ಗೊಂಡ ಎಲ್ಲ ಕಲಾವಿದರ ಪರಿಚಯ ನೀಡಿದರು. ಸುಮಾರು ೪೫ಕ್ಕೂ ಹೆಚ್ಚು ಕಲಾವಿದರು ಪಾತ್ರ ನಿರ್ವಹಿಸಿದ ನಾಟಕದಲ್ಲಿ ಸಂಗೀತ, ವರ್ಣ ಹಾಗೂ ನೆರಳು ಬೆಳಕಿನ ಸಂಯೋಜನೆ, ವಸ್ತ್ರ ವಿನ್ಯಾಸ ಹಾಗೂ ಕಥೆಯ ಹಂದರ ಕಲಾವಿದರ ಉತ್ತಮ ಅಭಿನಯದಲ್ಲಿ ಮೂರ್ತಗೊಂಡ ರೀತಿ ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.