ತೆಂಕನಿಡಿಯೂರು ಕಾಲೇಜಿನಲ್ಲಿ ವರಕವಿ ಬೇಂದ್ರೆ ಜನ್ಮದಿನಾಚರಣೆ

| Published : Feb 04 2025, 12:31 AM IST

ಸಾರಾಂಶ

ಉಡುಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಕನ್ನಡ ವಿಭಾಗವು, ಐಕ್ಯೂಎಸಿಯೊಂದಿಗೆ ವರಕವಿ ಬೇಂದ್ರೆ ಜನ್ಮದಿನಾಚರಣೆಯ ಕಾರ್ಯಕ್ರಮ ಆಯೋಜಿಸಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಬದುಕಿನ ಆದರ್ಶಗಳನ್ನು ಕಾಣುವ ದೃಷ್ಟಿಯಲ್ಲಿ ಸಾಧನವಾಗಿ ಮಾಡಿಕೊಂಡ ಸಂತರಿಗೆ ಕಾವ್ಯ ಒಲಿಯುವಂತಹದು. ಸಾಧನಾ ಕೇರಿಯ ಸಂತನಿಗೆ ಈ ರೀತಿಯ ಕಾವ್ಯ ಸಿದ್ಧಿ ಒಲಿದಿದೆ ಎಂದು ಉಪನ್ಯಾಸಕ ಡಾ. ವಿಷ್ಣುಮೂರ್ತಿ ಪ್ರಭು ಹೇಳಿದ್ದಾರೆ.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಕನ್ನಡ ವಿಭಾಗವು, ಐಕ್ಯೂಎಸಿಯೊಂದಿಗೆ ಆಯೋಜಿಸಿದ ವರಕವಿ ಬೇಂದ್ರೆ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ವರ ಕವಿ ಬೆಂದು ಬೇಂದ್ರೆಯಾದವರು. ಅವರು ಕವಿತೆಗಳಲ್ಲಿ ದಾಂಪತ್ಯದ ಪರಿಕಲ್ಪನೆ, ಮಾನವೀಯತೆ, ಸಾಮಾಜಿಕ ಆಶಯಗಳೊಂದಿಗೆ ಇಂದಿಗೂ ಜ್ವಲಂತ ಸಮಸ್ಯೆಯಾಗಿ ಮಾವನ ಕುಲವನ್ನು ಹಿಂಡುತ್ತಿರುವ ಬಡತನ ತೀವ್ರವಾಗಿ ಕಾಣಿಸಿಕೊಂಡಿದೆ. ಆದರೆ ಬಡತನದ ಬಗ್ಗೆ ಬೇಂದ್ರೆಯವರಿಗೆ ನಿಜವಾಗಿಯೂ ಗರ್ವವಿತ್ತು. ಶ್ರೀಮಂತಿಕೆಯನ್ನು ಕಿತ್ತುಕೊಳ್ಳಬಹುದು, ಆದರೆ ಬಡತನವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಸ್ವತಃ ಬೇಂದ್ರೆಯವರೇ ಹೇಳಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿತ್ಯಾನಂದ ವಿ. ಗಾಂವಕರ್, ಬೇಂದ್ರೆಯವರ ಜೀವನಾನುಭವಗಳೇ ಕಾವ್ಯವಾಗಿ ಅರಳಿದೆ. ಅವರು ಸರಳತೆ, ಪದಗಳನ್ನು ಕಟ್ಟುವ ಕ್ರಿಯೆಯಿಂದ ಅವರು ಸಾಹಿತ್ಯ ಲೋಕದಲ್ಲಿ ಶಬ್ದಗಾರುಡಿಗರು ಎನಿಸಿಕೊಂಡಿದ್ದಾರೆ ಎಂದರು.

ವಿದ್ಯಾರ್ಥಿಗಳಾದ ರಶ್ಮಿತಾ, ಕೃಷ್ಣ ಜಿ.ಜಿ. ಮತ್ತು ಜ್ಯೋತಿ ಅವರು ಬೇಂದ್ರೆಯವರ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಗೋಪಿ ಎಚ್. ಹಾಗೂ ಕನ್ನಡ ವಿಭಾಗ ಉಪನ್ಯಾಸಕರಾದ ಅರ್ಚನಾ, ಭಾರತಿ ಹಾಗೂ ಶಾಲಿನಿ ಯು.ಬಿ. ಉಪಸ್ಥಿತರಿದ್ದರು. ಎಂ.ಎ. ಕನ್ನಡ ವಿದ್ಯಾರ್ಥಿನಿ ಕೀರ್ತನಾ ಶೆಟ್ಟಿ ಅವರು ಬೇಂದ್ರೆ ಗಾಯನ ಮಾಡಿದರು. ಶಿವಾನಿ ಶೆಟ್ಟಿ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ರತ್ನಮಾಲಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಶ್ಮಿತಾ ಶೆಟ್ಟಿ ವಂದಿಸಿದರು. ನೈನಾ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.