ಬೆಂಗಳೂರು ದಕ್ಷಿಣ ಜಿಲ್ಲಾದ್ಯಂತ ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮೀ ಹಬ್ಬ

| Published : Aug 09 2025, 12:00 AM IST

ಬೆಂಗಳೂರು ದಕ್ಷಿಣ ಜಿಲ್ಲಾದ್ಯಂತ ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮೀ ಹಬ್ಬ
Share this Article
  • FB
  • TW
  • Linkdin
  • Email

ಸಾರಾಂಶ

ಜನರು ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಹಾಗೂ ಸಂಪತ್ತು ಕರುಣಿಸಲಿ ಎಂದು ಮನೆ, ಮನೆಗಳಲ್ಲಿ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರಜಿಲ್ಲೆಯಾದ್ಯಂತ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಶ್ರದ್ಧಾಭಕ್ತಿಯಿಂದ ಅದ್ಧೂರಿಯಾಗಿ ಆಚರಣೆ ಮಾಡಿದರು. ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಮಹಿಳೆಯರು ವರಮಹಾಲಕ್ಷ್ಮೀ ವ್ರತಾಚರಣೆಗೆ ಚಾಲನೆ ನೀಡಿದರು. ಕಳಸ ಪ್ರತಿಷ್ಠಾಪನೆ ಮಾಡಿ, ಸೀರೆ ತೊಡಿಸಿ, ಫಲನೈವೇದ್ಯಗಳನ್ನು ಸಮರ್ಪಣೆ ಮಾಡಿದ್ದರು. ಇದಾದ ಬಳಿಕ ಮಹಾಮಂಗಳಾರತಿ ಮಾಡಿ, ಲಕ್ಷ್ಮೀ ಅಷ್ಟೋತ್ತರ ಪಠಣೆ ಮಾಡುವ ಮೂಲಕ ಮಹಾಲಕ್ಷ್ಮೀ ಕೃಪೆಗೆ ಪಾತ್ರರಾದರು.ಹೂವು, ಹಣ್ಣು ಇನ್ನಿತರೆ ಪೂಜಾ ಪರಿಕರಗಳ ಬೆಲೆ ಗಗನಕ್ಕೆ ಏರಿದ್ದು, ಇದರ ನಡುವೆಯೂ ಸಹ ಜನರು ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಹಾಗೂ ಸಂಪತ್ತು ಕರುಣಿಸಲಿ ಎಂದು ಮನೆ, ಮನೆಗಳಲ್ಲಿ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದರು. ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಬೆಳಗ್ಗ ಬೇಗ ಎದ್ದು, ವರಮಹಾಲಕ್ಷ್ಮೀ ಪೂಜಾ ಕೈಂ ಕಾರ್ಯದಲ್ಲಿ ಮಿಂದೆದ್ದರು. ವಿವಿಧ ವಿಶೇಷ ಪೂಜೆಗಳನ್ನು ಕೈಗೊಂಡು ದೇವರಿಗೆ ನೈವೈದ್ಯ ಸಮರ್ಪಸಿ ಭಕ್ತಿ ಪರಾಕಷ್ಟೆ ಮೆರೆದರು.ಮನೆ ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ಮನೆಗಳಲ್ಲಿ ವಿವಿಧ ಪುಷ್ಪಗಳಿಂದ ಮಹಾಲಕ್ಷ್ಮೀಯ ಭಾವಚಿತ್ರಗಳನ್ನು ಅಲಂಕರಿಸಲಾಗಿತ್ತು. ಬಗೆ ಬಗೆಯ ವಡವೆಗಳಿಂದ ಸಿಂಗರಿಸಿ ಮಹಾಲಕ್ಷ್ಮೀಗೆ ಪ್ರಿಯವಾದ ಹಣ್ಣು, ಹೂಗಳನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೇ ದೀಪ ಹಚ್ಚಿ, ಭೋಜನ ತಯಾರಿಸಿ ನೈವೇದ್ಯೆ ಅರ್ಪಿಸಿ ದೇವಿಗೆ ಮಂಗಳಾರತಿ ನೆರವೇರಿಸಿದರು.ಮುತ್ತೈದೆಯರನ್ನು ಕರೆದು ಸಂಪ್ರದಾಯದಂತೆ ಮಹಿಳೆಯರಿಗೆ ಅರಿಶಿಣ ಕುಂಕುಮ, ಎಲೆ, ಅಡಕೆ, ಹಣ್ಣು ನೀಡಿ ಉಡಿ ತುಂಬಲಾಯಿತು. ಕೆಲವೆಡೆ ಮಹಿಳೆಯರೆಲ್ಲ ಸೇರಿ ಲಕ್ಷ್ಮೀಯ ಕುರಿತು ಗಾಯನ ಹಾಡಿದ್ದು ಪೂಜೆಗೆ ವಿಶೇಷ ಮೆರಗು ತಂದಿತ್ತು.ನಾನಾ ಕಡೆಗಳಲ್ಲಿ ಮಹಿಳೆಯರು ಪರಸ್ಪರ ತಮ್ಮ ಮನೆ ಮುತ್ತೈದೆಯರನ್ನು ಹರಿಶಿಣ, ಕುಂಕುಮಕ್ಕೆ ಆಹ್ವಾನಿಸುತ್ತಿದ್ದರು. ಮನೆಗೆ ಬಂದವರಿಗೆ ಆದರದ ಆಥಿತ್ಯ ನೀಡಿ ತಾಂಬೂಲಗಳಿಂದ ಹುಡಿ ತುಂಬಿ, ಮುಡಿಗೆ ಹೂ ಮುಡಿಸಿ ಲಕ್ಷ್ಮೀ ಸ್ವರೂಪಿ ಮಹಿಳೆಯರಿಂದ ಆಶೀರ್ವಾದ ಕೋರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಲಕ್ಷ್ಮೀಯ ಮುಖವಾಡವಿಟ್ಟು ಪೂಜೆ:ಮಹಿಳೆಯರು ಶುಕ್ರವಾರದ ಉಪವಾಸ ಮಾಡುವ ಮೂಲಕ ವ್ರತ ಸಂಕಲ್ಪ ಮಾಡಿ ದೇವಿಯನ್ನು ಕಲಶ ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ವಿವಿಧ ರೀತಿಯಲ್ಲಿ ಪೂಜಿಸಿ ಆರಾಧಿಸಿದರು. ಲಕ್ಷ್ಮೀ ಕಲಶದಲ್ಲಿ ಅಕ್ಕಿ ತುಂಬಿಸಿ ಖರ್ಜೂರ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಇರಿಸಿದ್ದರು. ಅದರ ಮೇಲೆ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಲಕ್ಷ್ಮೀಯ ಮುಖವಾಡವನ್ನಿಟ್ಟು ಅಥವಾ ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು ಕಣ್ಣು ಕಿವಿ ಮಾಡಿ, ಒಡವೆ, ಸೀರೆ ಉಡಿಸಿ ಅಲಂಕಾರ ಮಾಡಲಾಗಿತ್ತು. 12 ದಾರಗಳಿಗೆ 12 ಗಂಟುಗಳನ್ನು ಹಾಕಿ ಅರಿಶಿನ ಹಚ್ಚಿ ದೇವಿಯ ಪಕ್ಕದಲ್ಲಿರಿಸಿ ಆರಾಧಿಸಿದರು. ದೇವಿಯ ಮೂರ್ತಿಗೂ ಅರಿಶಿನ, ಕುಂಕುಮ, ಹೂವು, ಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ, ಪೂಜಿಸಿದ ಹೆಣ್ಣು ಮಕ್ಕಳು ಆ ದಾರಗಳಿಗೆ ಹೂವನ್ನು ಕಟ್ಟಿ, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಂಡರು. ಹಾಗೆ ಕಟ್ಟಿಸಿಕೊಂಡ ನಂತರ ಆ ಹಿರಿಯರಿಗೆ ನಮಸ್ಕರಿಸಿ ದಕ್ಷಿಣೆಯೊಂದಿಗೆ ದಾನವನ್ನು ಕೊಡುವ ಮೂಲಕ ವರ ಮಹಾಲಕ್ಷ್ಮೀ ಹಬ್ಬವನ್ನು ಆಚರಣೆ ಮಾಡಿದರು.ಅದ್ಧೂರಿ ವರಮಹಾಲಕ್ಷ್ಮೀ ಹಬ್ಬ:ಮಾಗಡಿ ತಾಲೂಕಿನಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ತಮ್ಮ ಮನೆಗಳಲ್ಲಿ ಬೆಳಗ್ಗೆಯಿಂದಲೇ ಲಕ್ಷ್ಮೀ ಕೂರಿಸಿ ವಿಶೇಷ ಪೂಜೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ಲಕ್ಷ್ಮೀಯನ್ನು ವಿವಿಧ ಹಾರ, ಆಭರಣಗಳಿಂದ ಅಲಂಕರಿಸಿ ಶ್ರದ್ಧಾಭಕ್ತಿಯಿಂದ ಲಕ್ಷ್ಮೀ ಪೂಜೆ ಮಾಡಿದ್ದು ಎಡೆಯು ಕಂಡು ಬಂದಿತು.ಕಲ್ಯಾಗೇಟ್‌ನ ಗಣಪತಿ ದೇವಸ್ಥಾನ, ಕಾಳೀಕಂಭ ದೇವಸ್ಥಾನ, ನೇತೇನಹಳ್ಳಿ ಚಾಮುಂಡೇಶ್ವರಿ ದೇವಸ್ಥಾನ, ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಮಾರುಕಟ್ಟೆಯಲ್ಲಿ ಹೂವು ಹಣ್ಣು ಮಾರಾಟ ಜೋರಾಗಿ ಇತ್ತು, ಸಡಗರ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಯಿತು.

...ಬಾಕ್ಸ್ ...

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶಕ್ತಿ ದೇವತೆ ಸೇರಿದಂತೆ ಇತರೆ ದೇವಾಲಯಲ್ಲಿ ವಿಶೇಷಾ ಪೂಜಾ ಕೈಂಕರ್ಯಗಳನ್ನು ನಡೆಸಲಾಗಿದೆ. ಬೆಳಗ್ಗಿನ ಜಾವವೇ ದೇವರಿಗೆ ಅಭಿಷೇಕ ಮಾಡಲಾಯಿತು. ವಿವಿಧ ಹೂವಿಗಳಿಂದ ಅಲಂಕಾರ ಮಾಡಲಾಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.ಸಂಜೆಯ ವೇಳೆಗೆ ಮುತ್ತೈದೆಯರನ್ನುಕರೆದು ಅರಿಶಿನ ಕುಂಕುಮವನ್ನು ನೀಡಿದ್ದಾರೆ. ಹಾಗಾಗಿ ಪ್ರತಿ ಮನೆ ಮನೆಗೆ ತೆರಳಿ ಅರಿಶಿನ ಕುಂಕುಮ ಹಾಗೂ ಬಾಗೀನ ತೆಗೆದುಕೊಂಡು ದೃಶ್ಯ ಕಂಡು ಬಂದಿತು.-----8ಕೆಆರ್ ಎಂಎನ್ 2,3,4,5,6.ಜೆಪಿಜಿ2.ರಾಮನಗರದ ಪುಷ್ಪ ನಾರಾಯಣ್ ರವರ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಿ ಹಬ್ಬ ಆಚರಿಸಿದರು.3.ರಾಮನಗರ ವಿಜಯನಗರದ ಸುಧಾರಾಣಿರವರ ಮನೆಯಲ್ಲಿ ವರಮಹಾಲಕ್ಷ್ಮೀ ದೇವಿಗೆ ಅಲಂಕಾರ ಮಾಡಿರುವುದು.4.ರಾಮನಗರದ ಅಶ್ವಿನಿ ಶ್ರೀಧರ್ ಮನೆಯಲ್ಲಿ ವರಮಹಾಲಕ್ಷ್ಮೀ ದೇವಿಗೆ ಅಲಂಕಾರ ಮಾಡಿರುವುದು.5.ರಾಮನಗರದ ಸಂತೋಷ ಲಕ್ಷ್ಮಿರವರ ಮನೆಯಲ್ಲಿ ವರಮಹಾಲಕ್ಷ್ಮೀ ದೇವಿಗೆ ಅಲಂಕಾರ ಮಾಡಿರುವುದು.6.ರಾಮನಗರದ ನಾಗರತ್ನ ರವರ ನಿವಾಸದಲ್ಲಿ ವರಮಹಾಲಕ್ಷ್ಮೀ ದೇವಿಗೆ ಅಲಂಕಾರ ಮಾಡಿರುವುದು.