ಭಟ್ಕಳದಲ್ಲಿ ವಿಜೃಂಭಣೆಯ ವರಮಹಾಲಕ್ಷ್ಮೀ ಹಬ್ಬ

| Published : Aug 09 2025, 12:02 AM IST

ಸಾರಾಂಶ

ಮಹಾಲಕ್ಷ್ಮೀ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತರಿಗೆ ಉಡಿ ತುಂಬಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ಭಟ್ಕಳ: ತಾಲೂಕಿನ ಶಕ್ತಿಕ್ಷೇತ್ರಗಳಲ್ಲಿ ಒಂದಾದ ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧ ದೇವಿ ದೇವಸ್ಥಾನಗಳಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ವ್ರತವನ್ನು ಶ್ರದ್ಧಾಭಕ್ತಿಪೂರ್ವಕವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.

ಶಿರಾಲಿ ಅಳ್ವೇಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ವ್ರತವನ್ನು ಅತ್ಯಂತ ಶ್ರದ್ಧೆಯಿಂದ ಸಾವಿರಾರು ಮಹಿಳೆಯರು ಉಡಿ ತುಂಬುವ ಮೂಲಕ ನೆರವೇರಿಸಿದರು. ದೇವಸ್ಥಾನದ ಎದುರು ಮಹಾಲಕ್ಷ್ಮೀ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತರಿಗೆ ಉಡಿ ತುಂಬಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಿಗ್ಗೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ಉಡಿ ತುಂಬುವ ಕಾರ್ಯ ಮಾಡಿದರು. ಮಧ್ಯಾಹ್ನ ಸಾವಿರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಅಳ್ವೇಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಪುರೋಹಿತರು, ಆಡಳಿತ ಕಮಿಟಿಯ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಧರ್ಮದರ್ಶಿಗಳಾದ ನಾರಾಯಣ ದೈಮನೆ, ಹನುಮಂತ ನಾಯ್ಕ, ಮಾರಿಜಾತ್ರಾ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಹಾಗೂ ಊರಿನ ಪ್ರಮುಖರು ದೇವಸ್ಥಾನಕ್ಕೆ ಬಂದಿದ್ದ ಸಾವಿರಾರು ಭಕ್ತರಿಗೆ ತ್ವರಿತ ದೇವರ ದರ್ಶನ ಮತ್ತು ಪೂಜೆ ಅನುಕೂಲ ಮಾಡಿಕೊಟ್ಟರು.

ತಾಲೂಕಿನ ಸೋಡಿಗದ್ದೆ ಮಹಾಸತಿ ದೇವಸ್ಥಾನ, ಕಡವಿನಕಟ್ಟಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ನಗರದ ವಿ.ವಿ.ರಸ್ತೆಯಲ್ಲಿರುವ ನಾಗಯಕ್ಷೆ ಧರ್ಮದೇವಿ ಸಂಸ್ಥಾನ, ಮಾರಿಕಾಂಬಾ ದೇವಸ್ಥಾನ ಹಾಗೂ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಿತ್ರೆಯ ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮೀ ಹಬ್ಬರ ಪ್ರಯುಕ್ತ ವಿಶೇಷ ಪೂಜೆ, ಉಡಿ ತುಂಬುವ ಕಾರ್ಯಕ್ರಮ, ವರಮಹಾಲಕ್ಷ್ಮೀ ಆರಾಧನೆ ಸಹಿತವಾಗಿ ಪೂಜೆ ಇತ್ಯಾದಿಗಳು ನಡೆದವು. ಉಡಿ ತುಂಬುವುದು, ಬಾಗಿನ ಅರ್ಪಿಸುವುದು ಸೇರಿದಂತೆ ವಿವಿಧ ಪೂಜೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮನೆಮನೆಗಳಲ್ಲಿ ಮಹಾಲಕ್ಷ್ಮೀ ವ್ರತಾಚರಣೆ ನಡೆದು, ಮಹಾಲಕ್ಷ್ಮೀಯ ಪೂಜೆ ನಡೆಯಿತು.