ಪಟ್ಟಣ ಸೇರಿ ತಾಲೂಕಿನಾದ್ಯಂತ ಗುರುವಾರ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಏಸುಕ್ರಿಸ್ತನ ಜನ್ಮದಿನ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತರು ಸಡಗರ-ಸಂಭ್ರಮದಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಪಟ್ಟಣ ಸೇರಿ ತಾಲೂಕಿನಾದ್ಯಂತ ಗುರುವಾರ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಏಸುಕ್ರಿಸ್ತನ ಜನ್ಮದಿನ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತರು ಸಡಗರ-ಸಂಭ್ರಮದಿಂದ ಆಚರಿಸಿದರು.

ಬೆಳಿಗ್ಗೆಯಿಂದಲೇ ಮಕ್ಕಳು ಹೊಸ ಉಡುಪುಗಳು ತೊಟ್ಟು ಸಂಭ್ರಮಿಸಿದರೆ, ಮನೆಗಳಲ್ಲಿ ಕ್ರಿಸ್‌ಮಸ್ ಟ್ರೀ ರಚಿಸಿ ವಿದ್ಯುತ್ ದೀಪ ಮತ್ತು ವಿವಿಧ ಬಣ್ಣಗಳ ಹಾಳೆಗಳಿಂದ ಶೃಂಗರಿಸಿದ ದೃಶ್ಯ ಕಂಡು ಬಂದಿತು.

ಪಟ್ಟಣದ ಹೊಸಪೇಟೆ ಬಡಾವಣೆಯ ಸಂತ ಸೆಬಾಸ್ಟಿಯನ್ ಚರ್ಚ್‌ ವಿದ್ಯುತ್ ದೀಪಗಳಿಂದ ಶೃಂಗರಿಸಿ, ಚರ್ಚ್‌ನ ಮುಂಭಾಗ ನಿರ್ಮಿಸಿದ ಏಸುವಿನ ಜನ್ಮವೃತ್ತಾಂತ ಸಾರುವ ಗೋದಲಿ ಎಲ್ಲರ ಗಮನ ಸೆಳೆಯಿತು. ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಕೇಕ್ ಮತ್ತು ಸಿಸಿ ಹಂಚುವ ಮೂಲಕ ಸಂತಸ ಹಂಚಿಕೊಂಡರು.

ಸಂತ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರು ಫಾದರ್ ರಾಬರ್ಟ್ ಡಿಮೆಲ್ಲೊ ಧರ್ಮ ಸಂದೇಶ ನೀಡಿ, ಕ್ರಿಸ್‌ಮಸ್ ಹಬ್ಬ ಪ್ರೀತಿಯ ಸಂಕೇತವಾಗಿದೆ. ಜಾತಿ-ಮತ ತಾರತಮ್ಯವಿಲ್ಲದೇ ಸುಖ ಶಾಂತಿಯಿಂದ ದೇಶೀಯ ಸಂಸ್ಕೃತಿಯಲ್ಲಿ ಬೆರೆತು ರಾಷ್ಟ್ರೀಯ ಏಕತೆಯನ್ನು ಉಂಟು ಮಾಡುತ್ತದೆ. ಕ್ರಿಸ್ತಜಯಂತಿಯ ಮಹೋತ್ಸವವನ್ನು ಸಂತ ಸೆಬಾಸ್ಟಿಯಾನರ ದೇವಾಲಯದಲ್ಲಿ ನಡುರಾತ್ರಿಯಲ್ಲಿ ಸಾಂಭ್ರಮಿಕ ದಿವ್ಯ ಬಲಿಪೂಜೆಯಲ್ಲಿ ಆಚರಿಸಲಾಗಿದೆ ಎಂದರು.

ಪಟ್ಟಣದ ಸಮಸ್ತ ಕ್ರೈಸ್ತ ಭಕ್ತಾದಿಗಳು, ಧಾರ್ಮಿಕ ಸಹೋದರಿಯರು ಬಲಿಪೂಜೆಯಲ್ಲಿ ಭಾಗಿಯಾಗಿ ಕ್ರಿಸ್ತ ಜಯಂತಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಬಲಿಪೂಜೆಯ ಬಳಿಕ ಶುಭಾಶಯ ವಿನಿಮಯ ಮತ್ತು ಕೇಕ್ ನೀಡಲಾಯಿತು.

ತಾಲೂಕಿನ ಆನವಟ್ಟಿಯ ಕ್ರಿಸ್ತುರಾಜ ಆಶ್ರಮ, ಇಂಡುವಳ್ಳಿಯ ಚರ್ಚ್ ಸೇರಿದಂತೆ ತಾಲೂಕಿನ ಎಲ್ಲಾ ಚರ್ಚ್‌ಗಳಲ್ಲೂ ವಿಶೇಷ ಪ್ರಾರ್ಥನೆಗಳು ಜರುಗಿದವು. ಕ್ರೈಸ್ತರ ಮನೆ ಮುಂಭಾಗದಲ್ಲಿ ಏಸುವಿನ ಜನ್ಮ ವೃತ್ತಾಂತ ಸಾರುವ ಗೋದಲಿಗಳನ್ನು ನಿರ್ಮಿಸಲಾಗಿತ್ತು. ಕ್ರೈಸ್ತರು ಮಾತ್ರವಲ್ಲದೇ ಸರ್ವ ಧರ್ಮಿಯರು ಕ್ರಿಸ್‌ಮಸ್ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.