ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ರೈತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಕಂದಾಯ ಇಲಾಖೆ ಕಚೇರಿ ಎದುರಲ್ಲಿ ಸಾಂಕೇತಿಕ ಪ್ರತಿಭಟನೆ ಕೈಗೊಂಡು ಉಪ ವಿಭಾಗಾಧಿಕಾರಿ ಸಮೀರಪ್ರಕಾಶ ಕೋಡೆ ಅವರಿಗೆ ಮನವಿ ಸಲ್ಲಿಸಿದರು.
ಸವಣೂರು: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ರೈತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಕಂದಾಯ ಇಲಾಖೆ ಕಚೇರಿ ಎದುರಲ್ಲಿ ಸಾಂಕೇತಿಕ ಪ್ರತಿಭಟನೆ ಕೈಗೊಂಡು ಉಪ ವಿಭಾಗಾಧಿಕಾರಿ ಸಮೀರಪ್ರಕಾಶ ಕೋಡೆ ಅವರಿಗೆ ಮನವಿ ಸಲ್ಲಿಸಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಕಟಾವಿನ ಸಂದರ್ಭ ವಿಮಾ ಕಂಪನಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲಾಧಿಕಾರಿಗಳ ಹೆಸರಲ್ಲಿ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಕುರಿತು ಸ್ಪಷ್ಟನೆ ಪಡೆಯಬೇಕು.ಈ ವರ್ಷ ಸವಣೂರು ತಾಲೂಕಿನಲ್ಲಿ ತೀವ್ರ ಬರಗಾಲ ಇರುವ ಕಾರಣ ಇನ್ಸೂರೆನ್ಸ್ ಯಾವುದೇ ಮಾನದಂಡ ನೋಡದೆ ಬೆಳೆ ವಿಮೆ ತುಂಬಿದ ಎಲ್ಲಾ ರೈತರಿಗೂ ವಿಮಾ ಹಣ ಬಿಡುಗಡೆ ಮಾಡಬೇಕು.ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ ತಾಲೂಕಿನ ರೈತರಿಗೆ ಎನ್‌ಡಿಆರ್ ಮತ್ತು ಎಸ್‌ಡಿಆರ್‌ಫ್ (ಎಸ್‌ಡಿಆರ್‌ಫ್) ನಿಯಮಗಳನ್ನು ಸಡಿಲಗೊಳಿಸಿ ಪರಿಹಾರ ವಿತರಿಸಬೇಕು. ತಾಲೂಕಿನಲ್ಲಿ ತೀವ್ರ ಬರ ಹಾಗೂ ಬೆಳೆ ಹಾನಿಯಿಂದ ಸಂಕಷ್ಟಕ್ಕೀಡಾಗಿರುವ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.ಮರುಪಾವತಿಸಲು ವಿಫಲರಾದ ರೈತರ ಮೇಲೆ ಬ್ಯಾಂಕ್ ಅಧಿಕಾರಿಗಳು ನಡೆಸುತ್ತಿರುವ ಒತ್ತಡ ಹಾಗೂ ಜಪ್ತಿ ಕಾರ್ಯವನ್ನು ಕೂಡಲೇ ಸ್ಥಗಿತಗೊಳಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಕನಿಷ್ಠ ೭ ಗಂಟೆಗಳ ಕಾಲ ಯಾವುದೇ ತೊಂದರೆಯಿಲ್ಲದೆ ನಿರಂತರ ಗುಣಮಟ್ಟದ ವಿದ್ಯುತ್ ಪೂರೈಸಬೇಕು. ರೈತರು ರಾತ್ರಿ ವೇಳೆ ಜಮೀನುಗಳಿಗೆ ಹೋಗಿ ಹಾವಿನ ಕಾಟ ಹಾಗೂ ವನ್ಯಜೀವಿಗಳ ದಾಳಿಯಿಂದ ತೊಂದರೆ ಅನುಭವಿಸುವುದನ್ನು ತಪ್ಪಿಸಲು ಹಗಲಲ್ಲೇ ವಿದ್ಯುತ್ ಒದಗಿಸಬೇಕು. ಮುಂದಿನ ಹಿಂಗಾರು ಬಿತ್ತನೆಗೆ ಅನುಕೂಲವಾಗುವಂತೆ ರೈತರಿಗೆ ಉಚಿತವಾಗಿ ಗುಣಮಟ್ಟದ ಬೀಜ ಮತ್ತು ರಸಗೊಬ್ಬರಗಳನ್ನು ಒದಗಿಸಬೇಕು. ಅಂತರ್ಜಲ ನಿರ್ಮಾಣಕ್ಕಾಗಿ ತಾಲೂಕಿನಾದ್ಯಂತ ಹೊಸ ಕೃಷಿ ಹೊಂಡಗಳ ನಿರ್ಮಾಣಕ್ಕೆ ಅನುದಾನ ನೀಡುವುದು ಹಾಗೂ ಹಳೆಯ ಚೆಕ್ ಡ್ಯಾಮ್‌ಗಳ ಹೂಳು ತೆಗೆಯಬೇಕು. ಅಂತರ್ಜಲ ಕುಸಿದಿರುವ ಪ್ರದೇಶಗಳಲ್ಲಿ ರೈತರಿಗೆ ಹೊಸ ಬೋರವೆಲ್ ಕೊರೆಯಿಸಲು ಮತ್ತು ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ಶೇ. ೧೦೦ರಷ್ಟು ಸಬ್ಸಿಡಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಡಾ. ವಿ.ಕೃ.ಗೋಕಾಕ ವೃತ್ತದಿಂದ ಆರಂಭಗೊಂಡ ರೈತರ ಪ್ರತಿಭಟನಾ ಮೆರವಣಿಗೆ ಡಾ. ಬಿ.ಆರ್.ಅಂಬೇಡ್ಕರ್ ವೃತ್ತ, ಸಾರ್ವಜನಿಕ ಆಸ್ಪತ್ರೆಯ ಮಾರ್ಗವಾಗಿ, ಸಿಂಪಿಗಲ್ಲಿ ಮೂಲಕ ಕಂದಾಯ ಇಲಾಖೆ ಕಚೇರಿ ತಲುಪಿತು. ನಂತರ, ರೈತರು ಸಾಂಕೇತಿಕ ಪ್ರತಿಭಟನೆ ಕೈಗೊಂಡು ಮನವಿ ಸಲ್ಲಿಸಿದರು.ರೈತ ಸಂಘದ ಜಿಲ್ಲಾ ಪದಾಧಿಕಾರಿ ಮಲ್ಲಿಕಾರ್ಜುನ ಬಳ್ಳಾರಿ, ತಾಲೂಕು ಅಧ್ಯಕ್ಷ ಚನ್ನಪ್ಪ ಮರಡೂರ, ಪದಾಧಿಕಾರಿಗಳಾದ ಶ್ರೀನಿವಾಸ ಚಿಕ್ಕನಗೌಡ್ರ, ಅಬ್ದುಲ್ ಬುಡಂದಿ, ರಮೇಶ ದೊಡ್ಡೂರ, ನಾಗಪ್ಪ ಹಡಪದ, ನೂರೇಶ ಲಮಾಣಿ, ಬೀರಪ್ಪ ಬಳ್ಳಾರಿ, ಸಿದ್ದಪ್ಪ ಕ್ಯಾಲಕೊಂಡ, ಹನುಮಂತಗೌಡ ಹುಡೇದ, ಬಸನಗೌಡ ಅರಳಿಹಳ್ಳಿ, ಯಲ್ಲಪ್ಪ ವಾಲಿಕಾರ, ಮಲ್ಲೇಶಪ್ಪ ದೇಸೂರ, ಮಲ್ಲಯ್ಯ ಹಿರೇಮಠ, ಸುರೇಶ ಹಟ್ಟಿ ಹಾಗೂ ಇತರರು ಇದ್ದರು.