ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾವು ಜೀವನದಲ್ಲಿ ಏನೇ ಆಸ್ತಿ ಸಂಪತ್ತು ಗಳಿಸಿದ್ದರೂ ಅವು ಶಾಶ್ವತವಲ್ಲ. ಆದರೆ ಮಾಡಿದ ತಾನು ಒಳ್ಳೆಯ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ತಹಸೀಲ್ದಾರ್ ಮಮತಾ ಅವರ ಕಾರ್ಯವೈಕರಿ ಇದಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಎಚ್. ಕೆ.ಸುರೇಶ್ ಹೇಳಿದರು.ಸಾಲುಮರದ ತಿಮ್ಮಕ್ಕ ಪೌಂಡೇಷನ್ ಹಾಗು ವಿವಿಧ ಸಂಘಸಂಸ್ಥೆಗಳ ವತಿಯಿಂದ ಇಲ್ಲಿನ ಚನ್ನಕೇಶವ ದಾಸೋಹ ಭವನದಲ್ಲಿ ಆಯೋಜಿಸಿದ್ದ ತಹಸೀಲ್ದಾರ್ ಎಂ. ಮಮತಾ ಅವರ ಬೀಳ್ಕೊಡುಗೆ, ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಕೆಲಸ ಸಮಾಜದ ಸೇವೆ ಮಾಡಲು ಉತ್ತಮ ವೇದಿಕೆಯಾಗಿದೆ. ಅಧಿಕಾರಿಗಳು ಭ್ರಷ್ಟಾಚಾರ ಮುಕ್ತವಾಗಿ ಕೆಲಸ ಮಾಡಿದರೆ ದೇಶದ ಅಭಿವೃದ್ಧಿಗೆ ಪೂರಕವಾಗುವುದರ ಜೊತೆಗೆ ಜನಸಾಮಾನ್ಯರಿಗೆ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ದಕ್ಷ ಆಡಳಿತಾಧಿಕಾರಿ ಎಂ ಮಮತಾರವರು ಉತ್ತಮ ಕೆಲಸ ಮಾಡಿದ್ದಾರೆ. ಮುಂದೆ ಇವರು ಹಲವಾರು ಕ್ಷೇತ್ರಗಳಲ್ಲಿ ಮುಂದುವರಿದು ಪ್ರಾಮಾಣಿಕ ಸೇವೆ ಸಲ್ಲಿಸಲಿ ಹಾಗೂ ಉನ್ನತ ಹುದ್ದೆ ಸಿಗಲಿ ಎಂದು ಹಾರೈಸಿದರು.
ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಸಮಾಜಸೇವಕ ಬಿ ಎಂ ಸಂತೋಷ್ ಹುಟ್ಟುವಾಗ ನಾವು ಏನನ್ನು ತರುವುದಿಲ್ಲ. ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ. ಕೆಲಸಗಳನ್ನು ಮಾಡಲು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸಮಾಜಕ್ಕೆ ತನ್ನ ಕೈಲಾದ ಕೊಡುಗೆ ನೀಡಬೇಕು. ತಾಲೂಕು ಕಚೇರಿಯಲ್ಲಿ ಯಾರಾದರೂ ಸಮಸ್ಯೆ ಹೇಳಿಕೊಂಡು ಬಂದಾಗ ತಕ್ಷಣವೇ ಸ್ಪಂದಿಸುವ ತಹಸೀಲ್ದಾರ್ ಎಂ ಮಮತಾರವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ. ಇವರು ಬೇರೆಡೆಗೆ ವರ್ಗಾವಣೆ ಆಗಿರಬಹುದು. ಆದರೆ ಅವರ ಕರ್ತವ್ಯ ಕಾರ್ಯಗಳನ್ನು ಯಾವತ್ತೂ ಎಂದಿಗೂ ಮರೆಯಲು ಸಾಧ್ಯವಿಲ್ಲ. ಒಬ್ಬ ನಿಷ್ಠಾವಂತ ಅಧಿಕಾರಿ ವರ್ಗಾವಣೆ ನಮಗೆ ಬೇಸರ ತಂದಿದೆ ಎಂದರು.ಅಭಿನಂದನೆ ಸ್ವೀಕರಿಸಿ ತಹಸೀಲ್ದಾರ್ ಎಂ ಮಮತಾ ಮಾತನಾಡಿ, ತಮ್ಮ ಎರಡು ವರ್ಷಗಳ ಅವಧಿಯಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಪ್ರಾಮಾಣಿಕ ಸೇವೆ ಸಲ್ಲಿಸಿ ನ್ಯಾಯ ಒದಗಿಸಿದ್ದೇನೆ. ತಾಲೂಕಿನ ಎಲ್ಲಾ ಜನರ ಪ್ರೀತಿ ಹಾಗೂ ಗೌರವ ಪಡೆದುಕೊಂಡಿದ್ದೇನೆ. ಬಡವರ ಪರವಾಗಿ ನ್ಯಾಯ ಹಾಗೂ ಕಾನೂನಿನ ಅಡಿಯಲ್ಲಿ ಕೆಲಸ ಮಾಡಿದ ತೃಪ್ತಿ ನನಗೆ ಸಿಕ್ಕಿದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಅಭಾರಿ ಎಂದರು.
ಈ ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕ ಫೌಂಡೇಷನ್ ಅಧ್ಯಕ್ಷ ಬಳ್ಳೂರು ಉಮೇಶ್, ಕದಳಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ತೀರ್ಥಕುಮಾರಿ, ಬಿಎಸ್‌ಪಿ ರಾಜ್ಯ ಘಟಕದ ಉಪಾಧ್ಯಕ್ಷ ಗಂಗಾಧರ್ ಬಹುಜನ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಘಟಕದ ಉಪಾಧ್ಯಕ್ಷ ಸೀತಾರಾಮ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಕುಮಾರ್, ಹರೀಶ್, ದಲಿತ ಮುಖಂಡ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.