ಸದ್ಯಕ್ಕೆ ಎಸ್ ಐಆರ್‌ ಒಪ್ಪವುದಿಲ್ಲ ಎಂದು ಕರ್ನಾಟಕ ಸರ್ಕಾರ ಘೋಷಿಸಬೇಕು. ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅತ್ಯಗತ್ಯ ಐದು ಮೂಲ ಬದಲಾವಣೆಗಳನ್ನು ಮಾಡದಿದ್ದರೆ ಸಹಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಚುನಾವಣಾ ಆಯೋಗಕ್ಕೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಜಾತಂತ್ರದ ಅಡಿಪಾಯವನ್ನು ಬುಡಮೇಲು ಮಾಡುವ, ಸಂವಿಧಾನದ ನಿರ್ದೇಶನಕ್ಕೆ ವಿರುದ್ಧವಾಗಿರುವ ಕೇಂದ್ರ ಸರ್ಕಾರದ ಎಸ್‌ಐಆರ್ ಗೆ ಸಹಕರಿಸದಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಸೇರಿ ವಿವಿಧ ಸಂಘಟನೆಗಳ ಒಕ್ಕೂಟದ ಮುಖಂಡರು, ಕಾರ್‍ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಕಾರ್‍ಯಕರ್ತರು ಧರಣಿ ನಡೆಸಿ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಘೋಷಣೆ ಕೂಗಿದರು.

ಎಸ್‌ಐಆರ್‌ನ ಮೂರನೇ ಸುತ್ತಿನ ದಾಳಿ ಪ್ರಾರಂಭವಾಗುತ್ತಿದೆ. ಕರ್ನಾಟಕ ಈ ದುಷ್ಟ ಯೋಜನೆಯನ್ನು ತಿರಸ್ಕರಿಸಲು ತೀರ್ಮಾನಿಸಿದೆ. ತಾತ್ವಿಕವಾಗಿ ವಿರೋಧಿಸಿದರೆ ಸಾಲದು, ಅದಕ್ಕಾಗಿ ಅಗತ್ಯವಿರುವ ಪರಿಣಾಮಕಾರಿ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸದ್ಯಕ್ಕೆ ಎಸ್ ಐಆರ್‌ ಒಪ್ಪವುದಿಲ್ಲ ಎಂದು ಕರ್ನಾಟಕ ಸರ್ಕಾರ ಘೋಷಿಸಬೇಕು. ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅತ್ಯಗತ್ಯ ಐದು ಮೂಲ ಬದಲಾವಣೆಗಳನ್ನು ಮಾಡದಿದ್ದರೆ ಸಹಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಚುನಾವಣಾ ಆಯೋಗಕ್ಕೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಲಾಜಿಕಲ್ ಡಿಸ್ಕ್ರಿಪೆನ್ಸಿ ಎನ್ನುವ ಅತ್ಯಂತ ಅವೈಜ್ಞಾನಿಕ, ಅವಾಸ್ತವಿಕ, ಅಪಾರದರ್ಶಕ ಹಾಗೂ ದುರುದ್ದೇಶಪೂರಿತ ವಿಧಾನವನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅಳವಡಿಸಬಾರದು. ಸ್ಪೆಲ್ಲಿಂಗ್, ದಿನಾಂಕ ಇಂತಹ ಕ್ಷುಲ್ಲಕ ವಿಚಾರಗಳನ್ನು ಇಟ್ಟುಕೊಂಡು ಮತದಾನದ ಹಕ್ಕಿನಿಂದ ಹೊರಗಿಡುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತದಾರರ ಪಟ್ಟಿ ಎಂಬುದು ರಹಸ್ಯ ದಾಖಲೆಯಲ್ಲ. ಅದು ದೇಶದ ಮತದಾರರ ಮುಕ್ತ ಪಟ್ಟಿ, ಕರಡು ಪಟ್ಟಿ ತಯಾರಾದ ನಂತರ ಯಾರ ಮತವನ್ನಾದರೂ ಸುಲಭವಾಗಿ ಹುಡುಕಬಹುದಾದ ರೀತಿಯಲ್ಲಿ ಪಾರದರ್ಶಕತೆ ಇರುವ ರೀತಿಯಲ್ಲಿ ಕಂಪ್ಯೂಟರ್ ರೀಡೆಬಲ್ ಫಾರ್ಮ್ಯಾಟಿನಲ್ಲಿ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಪ್ರದೇಶಗಳಲ್ಲಿ ಒಳಪಡಿಸಿ, ಮುಕ್ತವಾಗಿ ಎಲ್ಲರ ಸಮ್ಮುಖದಲ್ಲಿ ತಿದ್ದುಪಡಿ ಮಾಡಬೇಕು. ಕನಿಷ್ಠ 1 ವರ್ಷಗಳ ಅವಧಿ ನಿಗದಿ ಮಾಡಬೇಕು. ಮತದಾರರ ಪಟ್ಟಿ ಪರಿಶೀಲನೆ ನಡೆಸಿ ಕರಡು ಪಟ್ಟಿ ತಯಾರಿಸಲು, ಕರಡನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಲು ಹಾಗೂ ಅಹವಾಲುಗಳನ್ನು ಸ್ವೀಕರಿಸಿ, ಅಂತಿಮ ಪಟ್ಟಿ ತಯಾರಿಸಲು 6 ತಿಂಗಳು ಸಮಯ ಇರಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಒಬ್ಬ ಅರ್ಹ ಮತದಾರರೂ ತಮ್ಮ ಜನ್ಮಸಿದ್ಧ ಹಕ್ಕನ್ನು ಕಳೆದುಕೊಳ್ಳಲು ರಾಜ್ಯ ಸರ್ಕಾರ ಅವಕಾಶ ನೀಡಬಾರದು. ಇದಕ್ಕಾಗಿ ಕೆಲವು ವಿಶೇಷ ಕ್ರಮಗಳಿಗೆ ಮುಂದಾಗಬೇಕು. ಚೆಕ್‌ಮೇಟ್ ಪಟ್ಟಿ ತಯಾರಿಸಿ, ವಿಶೇಷ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ನಡೆಸಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಪಟ್ಟಿ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದರು.

ಸ್ಮಾರ್ಟ್ ಕಾರ್ಡ್ ನೀಡಬೇಕು. ಮತದಾರರ ನೆರವು ಕೇಂದ್ರಗಳನ್ನು ತೆರೆಯಬೇಕು. ಅಗತ್ಯವಿರುವ ಮೂಲ ದಾಖಲೆಗಳಿಗೆ ಸತಾಯಿಸದೆ ತ್ವರಿತವಾಗಿ ಜನರಿಗೆ ನೀಡುವಂತೆ ಅಧಿಕಾರಿ ವರ್ಗಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಪೆಟ್ರೋಲ್ , ಡೀಸೆಲ್ ಸೇರಿದಂತೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಮಾಡಿ ಬಡವರು, ಮಧ್ಯಮ ವರ್ಗಕ್ಕೆ ಬರೆ ಎಳೆದಿದೆ. ಕೂಡಲೇ ದರ ಇಳಿಸಿ ಜನರ ನೆರವಿಗೆ ಧಾವಿಸಬೇಕು. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ನೀಟ್ ಪರೀಕ್ಷೆ ರದ್ದಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ವಿವಿಧ ಸಂಘಟನೆಗಳ ಮುಖಂಡರಾದ ಎಂ.ಸಿ.ಕೃಷ್ಣ, ನರಸಿಂಹಮೂರ್ತಿ, ಬಿ.ಟಿ.ವಿಶ್ವನಾಥ್, ಸಿದ್ದರಾಜು, ರಮಾನಂದ, ಅಂಜಲಿ, ಶಿಲ್ಪ, ಶುಭದಾಯಿನಿ, ತಗ್ಗಹಳ್ಳಿ ಯಶೋಧ ಸೇರಿ ಹಲವರು ಭಾಗವಹಿಸಿದ್ದರು.