ಈದ್‌ ನಿಮಿತ್ತ ನಾಳೆಯಿಂದ ವಿವಿಧ ಕಾರ್‍ಯಕ್ರಮ: ಝಕಿ ಅಹ್ಮದ್ ಹುಸೇನ್

| Published : Sep 02 2025, 01:00 AM IST

ಈದ್‌ ನಿಮಿತ್ತ ನಾಳೆಯಿಂದ ವಿವಿಧ ಕಾರ್‍ಯಕ್ರಮ: ಝಕಿ ಅಹ್ಮದ್ ಹುಸೇನ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರವಾದಿ ರವರ ನ್ಯಾಯ ಮತ್ತು ಮಾನವೀಯ ಸಂದೇಶದ ಜತೆಗೆ ಸೆ.3 ರಿಂದ 14 ರವರೆಗೆ ತಾಲೂಕಿನ ಶಿರಾಳಕೊಪ್ಪದಲ್ಲಿ ಜಮಾತೆ ಇಸ್ಲಾಂ ಹಿಂದ್ ವತಿಯಿಂದ ಪ್ರವಚನ, ರಕ್ತದಾನ ಶಿಬಿರ, ಪ್ರಬಂಧ ಸ್ಪರ್ಧೆ ಮತ್ತಿತರ ಸಮಾಜಮುಖಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಮುಸ್ಲಿಂ ಸಮುದಾಯದಲ್ಲಿ ಈದ್ ಮಿಲಾದ್ ಆಚರಣೆ ಅತ್ಯಂತ ಶ್ರೇಷ್ಟವಾಗಿದ್ದು,ಪ್ರವಾದಿ ಮುಹಮ್ಮದ್ ರವರ ಜನ್ಮ ದಿನದ ಅಂಗವಾಗಿ ನಡೆಯುವ ಈದ್ ಮಿಲಾದ್ ಹಬ್ಬದಲ್ಲಿ ಪ್ರವಾದಿ ರವರ ನ್ಯಾಯ ಮತ್ತು ಮಾನವೀಯ ಸಂದೇಶದ ಜತೆಗೆ ಸೆ.3 ರಿಂದ 14 ರವರೆಗೆ ತಾಲೂಕಿನ ಶಿರಾಳಕೊಪ್ಪದಲ್ಲಿ ಜಮಾತೆ ಇಸ್ಲಾಂ ಹಿಂದ್ ವತಿಯಿಂದ ಪ್ರವಚನ, ರಕ್ತದಾನ ಶಿಬಿರ, ಪ್ರಬಂಧ ಸ್ಪರ್ಧೆ ಮತ್ತಿತರ ಸಮಾಜಮುಖಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿರಾಳಕೊಪ್ಪ ಜಮಾತೆ ಇಸ್ಲಾಂ ಹಿಂದ್ ಕಾರ್ಯದರ್ಶಿ ಝಕಿ ಅಹ್ಮದ್ ಹುಸೇನ್ ತಿಳಿಸಿದರು.

ಪಟ್ಟಣದ ಸುದ್ದಿಮನೆಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅರೇಬಿಕ್ ಕ್ಯಾಲೆಂಡರ್ ಪ್ರಕಾರ ಅವ್ವಲ್ ತಿಂಗಳಿನಲ್ಲಿ ಪ್ರವಾದಿ ಮುಹಮ್ಮದ್ ಜನಿಸಿದ್ದು ಈ ದಿಸೆಯಲ್ಲಿ ಅವರ ಸಾರ್ವಕಾಲಿಕ ಭೋದನೆಗಳನ್ನು ಜನತೆಗೆ ತಿಳಿಯಪಡಿಸಲು ಜಮಾತೆ ಇಸ್ಲಾಂ ಹಿಂದ್ ವತಿಯಿಂದ ದೇಶಾದ್ಯಂತ ವಿವಿಧ ರೀತಿಯ ಸಾಮಾಜಿಕ ಸೇವಾ ಚಟುವಟಿಕೆ, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆ, ಪ್ರಭಂದ ಸ್ಪರ್ದೆ ಮತ್ತಿತರ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ತಾಲೂಕಿನ ಶಿರಾಳಕೊಪ್ಪದಲ್ಲಿ ಪ್ರವಾದಿಗಳ ಜನ್ಮದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು,ಇದೇ ಸೆ.3ರಿಂದ 14ರವರೆಗೆ ‘ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್’ ಶೀರ್ಷಿಕೆಯಡಿ ಅಭಿಯಾನ ಆಯೋಜಿಸಲಾಗಿದೆ. ಪ್ರವಾದಿಗಳು ನ್ಯಾಯಕ್ಕೆ ಅತಿ ಹೆಚ್ಚಿನ ಮಹತ್ವ ನೀಡಿದ್ದು ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ನೋಡುತ್ತಿದ್ದ ಸಂದರ್ಭದಲ್ಲಿ ಸಮಾಜದಲ್ಲಿ ಸಮಾನತೆ ರೂಪಿಸಲು ಮಹಿಳೆಯರು ಗುಲಾಮಗಿರಿಯಿಂದ ಹೊರಬಂದಲ್ಲಿ ಮಾತ್ರ ಶಾಂತಿ ವಾತಾವರಣ ಮೂಡಲು ಸಾದ್ಯ ಎಂದರಿತು ನ್ಯಾಯ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದರು ಎಂದು ತಿಳಿಸಿದರು.

ಪ್ರವಾದಿಗಳ ಸಂದೇಶದ ಮೇರೆಗೆ ಶಿರಾಳಕೊಪ್ಪದಲ್ಲಿ ಉರ್ದು ಬಾಷೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ, ಕನ್ನಡದಲ್ಲಿ ಸೀರತ್ ಪ್ರವಚನ ಹಮ್ಮಿಕೊಳ್ಳಲಾಗಿದ್ದು, ಆನಾಥಾಷ್ರಮ, ವೃದ್ದಾಶ್ರಮ, ಅನಾಥ ಬಡ ಮಕ್ಕಳಿಗೆ ಸಂಗ್ರಹಿಸಲಾದ ಬಟ್ಟೆ ವಿತರಣೆ, ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ವಿತರಣೆ, ಪ್ರೌಡ ಶಾಲೆ ಹಾಗೂ ಕಾಲೇಜುಗಳಲ್ಲಿ ಪ್ರವಾದಿಗಳ ಬಗ್ಗೆ ಪ್ರಬಂಧ ಸ್ಪರ್ದೆ ಆಯೋಜಿಸಲಾಗಿದೆ. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ 9481132154, 9916154450 ಸಂಪರ್ಕಿಸಲು ತಿಳಿಸಿದರು.

ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ಜಿಲ್ಲಾ ಕಾರ್ಯದರ್ಶಿ ನಿಜಾಮುದ್ದೀನ್ ಮಾತನಾಡಿ, ಪ್ರವಾದಿ ಅವರ ನ್ಯಾಯ ಮತ್ತು ಮಾನವೀಯ ಸಂದೇಶ ಪ್ರತಿಯೊಬ್ಬರಿಗೂ ತಲುಪಿಸುವ ಜತೆಗೆ ಪ್ರವಾದಿಗಳ ಬಗೆಗಿನ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ಸಮಸ್ತ ಧರ್ಮೀಯರ ಮದ್ಯೆ ಪರಸ್ಪರ ಸಂಬಂದ ವೃದ್ದಿಸುವ ಗುರಿಯನ್ನು ಅಭಿಯಾನ ಹೊಂದಿದೆ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಬಸವಾಶ್ರಮದ ಮಾತೆ ಶರಣಾಂಬಿಕೆ ಮಾತನಾಡಿ, ಮಾನವೀಯತೆಯ ಸಂದೇಶ ಎಲ್ಲ ಧರ್ಮದ ಪ್ರಮುಖ ಸಾರವಾಗಿದ್ದು,ಪ್ರತಿಯೊಂದು ಧರ್ಮ ಮನುಷ್ಯನ ಏಳ್ಗೆಗಾಗಿದ್ದು ಕೆಲ ಕುಬ್ಜ ಮನಸ್ಥಿತಿಯ ವ್ಯಕ್ತಿಗಳಿಂದಾಗಿ ಧರ್ಮ ಧರ್ಮದ ಮದ್ಯೆ ಕಂದಕ ಏರ್ಪಟ್ಟಿದೆ,ಪರಮಾತ್ಮನಲ್ಲಿ ಪ್ರತ್ಯೇಕತೆ ಇದ್ದಲ್ಲಿ ಗಾಳಿ ಮಳೆ ಆಹಾರ ಸಹಿತ ಪ್ರತಿಯೊಂದು ಪ್ರತ್ಯೇಕವಾಗಿರುತ್ತಿತ್ತು. ಮೂಲ ಸೃಷ್ಟಿಯಲ್ಲಿ ಭಿನ್ನತೆ ಎಂಬುದಿಲ್ಲ. ಮನುಷ್ಯನ ಸ್ವಭಾವದಲ್ಲಿನ ಭಿನ್ನತೆಯಿಂದಾಗಿ ಗೊಂದಲ ಉಂಟಾಗಿದ್ದು ದೇವರು ಒಬ್ಬ ನಾಮ ಹಲವು ಎಂಬುದರ ಅರಿವು ಇಲ್ಲದ ಅಜ್ಞಾನಿಗಳು ಸಮಾಜದಲ್ಲಿ ಪರಸ್ಪರ ಒಡಕು ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಂತಿ ಪ್ರಕಾಶನದ ಪುಸ್ತಕಗಳನ್ನು ಹಾಗೂ ಲೋಗೋ ಬಿಡುಗಡೆಗೊಳಿಸಲಾಯಿತು.

ಗೋಷ್ಠಿಯಲ್ಲಿ ಶಿಕಾರಿಪುರ ಜಮಾತೆ ಇಸ್ಲಾಂ ಹಿಂದ್ ಘಟಕದ ಅಧ್ಯಕ್ಷ ಅಬ್ದುಲ್ ಗಫೂರ್,ಶಿರಾಳಕೊಪ್ಪ ಅಧ್ಯಕ್ಷ ಮಹಮ್ಮದ್ ಹುಸೇನ್,ಕಾರ್ಯದರ್ಶಿ ಅನೀಸ್ ಅಹ್ಮದ್, ಅಮೀನುಲ್ ಹಸನ್ ಮತ್ತಿತರರು ಹಾಜರಿದ್ದರು.