ತೀರ್ಥಹಳ್ಳಿಯಲ್ಲಿ ಅದ್ಧೂರಿ ದಸರಾದಲ್ಲಿ ವಿವಿಧ ಕಾರ್ಯಕ್ರಮ
KannadaprabhaNewsNetwork | Published : Oct 19 2023, 12:45 AM IST
ತೀರ್ಥಹಳ್ಳಿಯಲ್ಲಿ ಅದ್ಧೂರಿ ದಸರಾದಲ್ಲಿ ವಿವಿಧ ಕಾರ್ಯಕ್ರಮ
ಸಾರಾಂಶ
22, 23ರಂದು ಸಾಂಸ್ಕೃತಿಕ ಕಲವರ
- 21ರಂದು ಜಿಲ್ಲಾಮಟ್ಟದ ಕವಿಗೋಷ್ಠಿ । 22, 23ರಂದು ಸಾಂಸ್ಕೃತಿಕ ಕಲವರ - - - ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ನಾಡಹಬ್ಬ ದಸರಾವನ್ನು ಶ್ರೀ ರಾಮೇಶ್ವರ ದೇವರ ದಸರಾ ಉತ್ಸವ ಸಮಿತಿ ವತಿಯಿಂದ ಪಟ್ಟಣದಲ್ಲಿ ಈ ವರ್ಷ ಅ.21ರ ಶನಿವಾರದಿಂದ ನಾಲ್ಕು ದಿನಗಳ ಪರ್ಯಂತ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ದಸರಾ ಸಮಿತಿ ಸಂಚಾಲಕ ಸಂದೇಶ್ ಜವಳಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅ.21ರಂದು ಬೆಳಗ್ಗೆ 10 ಗಂಟೆಯಿಂದ ಗೋಪಾಲಗೌಡ ರಂಗಮಂದಿರದಲ್ಲಿ ಶಿವಮೊಗ್ಗ ಜಿಲ್ಲಾಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ. ಅ.22 ಮತ್ತು 23ರಂದು ಕುಶಾವತಿ ನೆಹರೂ ಪಾರ್ಕಿನಲ್ಲಿರುವ ಬನ್ನಿ ಮಂಟಪದಲ್ಲಿ ನಡೆಯುವ ಸಾಂಸ್ಕೃತಿಕ ಕಲರವವನ್ನು ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಕಾಲ ಸಂಜೆ 6ರಿಂದ ಆರಂಭಗೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯರು ಮತ್ತು ನಾಡಿನ ಖ್ಯಾತ ಕಲಾವಿದರಿಂದ ಭರತನಾಟ್ಯ, ಸಂಗೀತ, ವಾದ್ಯ ವೈವಿಧ್ಯ ಕಾರ್ಯಕ್ರಮಗಳು ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು. ಅ.24ರಂದು ಮಧ್ಯಾಹ್ನ 2 ಗಂಟೆಗೆ ಶ್ರೀ ರಾಮೇಶ್ವರ ದೇವರ ರಾಜಬೀದಿ ಉತ್ಸವ ಹಾಗೂ ಭುವನೇಶ್ವರಿ ದೇವಿ ಮೆರವಣಿಗೆ ರಾಮೇಶ್ವರ ದೇವಸ್ಥಾನ ಆವರಣದಿಂದ ಹೊರಡಲಿದೆ. ಮೆರವಣಿಗೆಯಲ್ಲಿ ನಾಡಿನ ಖ್ಯಾತ ಪಾರಂಪರಿಕ ಕಲಾತಂಡಗಳು, ಆಕರ್ಷಕ ಸ್ಥಬ್ಧಚಿತ್ರಗಳು, ಚೆಂಡೆ, ಹುಲಿವೇಷ ಕುಣಿತದೊಂದಿಗೆ ಮೆರವಣಿಗೆಗೆ ಮೆರಗನ್ನು ನೀಡಲಿದೆ. ಸಂಜೆ 6 ಗಂಟೆಯಿಂದ ಬನ್ನಿ ಮಂಟಪದಲ್ಲಿ ನಡೆಯುವ ಸಮಾರಂಭವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋದ ವಿಜ್ಞಾನಿ, ತಾಲೂಕಿನ ಸುಬ್ರಮಣ್ಯ ಉಡುಪ ಹಾಗೂ ಕೆ.ಎಲ್. ಶಿವಾನಿ ಅವರನ್ನು ಗೌರವಿಸಲಾಗುವುದು ಎಂದರು. ಹುಲಿವೇಷ ಸ್ಪರ್ಧೆ: ಆರ್.ಮದನ್ ನೇತೃತ್ವದಲ್ಲಿ ಕಳೆದ ಹಲವಾರು ವರ್ಷಗಳಿಂದ ದಸರಾ ಹಬ್ಬ ಸಲುವಾಗಿ ನಡೆಸುತ್ತಿದ್ದ ಮಲೆನಾಡಿನ ಪಾರಂಪರಿಕ ಜಾನಪದ ಕಲೆ ಹುಲಿವೇಷ ಸ್ಪರ್ಧೆಯನ್ನು ಈ ವರ್ಷ ಅ.24ರಂದು ರಾತ್ರಿ 8 ಗಂಟೆಯಿಂದ ಬನ್ನಿ ಮಂಟಪದಲ್ಲಿ ಆಯೋಜಿಸಲಾಗಿದೆ. ಪ್ರಥಮ ಬಹುಮಾನ ₹20,000. ದ್ವಿತೀಯ ₹12500, ತೃತೀಯ ₹7500 ನೀಡಲಾಗುವುದು. ಹುಲಿವೇಷ ಹಾಕುವ ಎಲ್ಲರಿಗೂ ತಲಾ ₹5000 ಮತ್ತು ಹುಲಿವೇಷದ ಬಣ್ಣಕ್ಕಾಗಿ ₹2500 ನೀಡಲಾಗುವುದು. ಕಾರ್ಯಕ್ರಮದ ಆಯೋಜಕ ಆರ್.ಮದನ್ ತಿಳಿಸಿದರು.