ಚಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಹಾಗೂ ಸಭಾಭವನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಫೆ.3ರಿಂದ 8 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡೆಯಲಿವೆ ಎಂದು ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ತಾಲೂಕಿನ ಚಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಹಾಗೂ ಸಭಾಭವನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಫೆ.3ರಿಂದ 8 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡೆಯಲಿವೆ ಎಂದು ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಹೇಳಿದರು.ಶ್ರೀಮಠದಲ್ಲಿ ಕಾರ್ಯಕ್ರಮಗಳ ಮಾಹಿತಿಯ ಬಿತ್ತಿ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಫೆ.೩ರಂದು ನಡೆಯಲಿರುವ ಬೃಹತ್ ರೈತ ಜನೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸಚಿವ ಎಂ.ಬಿ.ಪಾಟೀಲ ಭಾಗವಹಿಸಲಿದ್ದಾರೆ. ಫೆ.೪ರಂದು ಯೋಧರಿಗೆ ಮತ್ತು ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಬೆಂಗಳೂರ ಸಿಪಿಐ ಜ್ಯೋತಿರ್ಲಿಂಗ್ ಹೊನ್ನಾಕಟ್ಟಿ, ಪೊಲೀಸ್ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಫೆ.೫ರಂದು ಮಾತೃ ನಮನ ಕಾರ್ಯಕ್ರಮ ಅಂಗವಾಗಿ ೫ ಸಾವಿರ ಮುತ್ತೈದೆಯರಿಗೆ ಉಡಿ ತುಂಬುವ ಬೃಹತ್ ಕಾರ್ಯ ನಡೆಯಲಿದೆ. ಕಲ್ಬುರ್ಗಿಯ ಶರಣ ಬಸವೇಶ್ವರ ಮಹಾಸಂಸ್ಥಾನ ಪೀಠದ ದೊಡ್ಡಬಸಪ್ಪ ಅಪ್ಪನವರು ಹಾಗೂ ಮಾತೋಶ್ರೀ ದ್ರಾಕ್ಷಾಯಿಣಿ ಅಮ್ಮನವರ ಸಾನ್ನಿದ್ಯದಲ್ಲಿ ವಿವಿಧ ಸಾಧಕ ಮಹಿಳೆಯರು ಪಾಲ್ಗೊಳ್ಳಲಿದ್ದಾರೆಂದರು.
ಫೆ.೬ರಂದು ನಡೆಯುವ ಯುವಜನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು, ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ (ಪಡೇಕನೂರ) ಆಗಮಿಸಲಿದ್ದಾರೆ. ಫೆ.೭ರಂದು ಮಧ್ಯಾಹ್ನ ೧-೩೦ಕ್ಕೆ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಸಂಜೆ ೫-೩೦ಕ್ಕೆ ಸದ್ಧರ್ಮ ಸಮಾರಂಭಕ್ಕೆ ಸಚಿವ ಶಿವಾನಂದ ಪಾಟೀಲ ಆಗಮಿಸಲಿದ್ದಾರೆ. ರಾತ್ರಿ ೯ಕ್ಕೆ ನಡೆಯಲಿರುವ ತತ್ವಪದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಹಣಮಂತ ಲಮಾಣಿ ಆಗಮಿಸಿಸಲಿದ್ದಾರೆ. ಫೆ.೮ರಂದು ಸಿದ್ದಿಪುರುಷ ಶ್ರೀ ರಾಮಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ, ಜಂಗಮ ವಟುಗಳಿಗೆ ಅಯ್ಯಾಚಾರ, ಶ್ರೀ ರಾಮಲಿಂಗಯ್ಯ ಸ್ವಾಮಿಗಳಿಗೆ ಮಂಗಳ ಸ್ನಾನ ಹಾಗೂ ಜಗದ್ಗುರುಗಳಿಂದ ಆಶಿರ್ವಾದ ಅನುಗ್ರಹ, ನವಗ್ರಹ ಮೂರ್ತಿ ಉದ್ಘಾಟನೆ, ಮಹಾದ್ವಾರ, ನೂತನ ಶ್ರೀಮಠ ಹಾಗೂ ದಾಸೋಹ ನಿಲಯ ಉದ್ಘಾಟನೆ ಸೇರಿ ಅನೇಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.ದೇವರ ಹಿಪ್ಪರಗಿ ಜಡಿಮಠದ ಜಡಿಸಿದ್ದೇಶ್ವರ ಶ್ರೀ, ನಾವದಗಿ ಮಠದ ರಾಜೇಂದ್ರಒಡೆಯರ ಶ್ರೀ, ಪರದೇಶಿಮಠದ ಶಿವಯೋಗಿ ಶ್ರೀ, ರಾಮಲಿಂಗಯ್ಯ ಶ್ರೀ, ಗ್ರಾಮದ ಮುಖಂಡರಾದ ಬಸನಗೌಡ ಪಾಟೀಲ, ಡಾ.ಮಾಲಿನಿ ಪ್ರಭುಗೌಡ, ಸೋಮನಗೌಡ ಪಾಟೀಲ, ಶರಣಗೌಡ ಪಾಟೀಲ, ಬಸಯ್ಯ ಹಿರೇಮಠ, ಸವರಾಜ ಗೊರ್ಜಿ, ಮಂಜುನಾಥ ಕವಡಿಮಟ್ಟಿ ಇತರರಿದ್ದರು.