ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮಹಾನಗರ ಪಾಲಿಕೆಯ ಗದ್ದುಗೆಯನ್ನು ಕಾಂಗ್ರೆಸ್ ಪಕ್ಷ ಉಳಿಸಿಕೊಂಡಿದೆ. ಪಾಲಿಕೆಯ 23ನೇ ಮೇಯರ್ ಆಗಿ ವರ್ಷಾ ಜಾನೆ, ಉಪ ಮೇಯರ್ ಆಗಿ ತೃಪ್ತಿ ಲಾಖೆ ಆಯ್ಕೆಯಾಗಿದ್ದಾರೆ.ಮೇಯರ್ ಸ್ಥಾನ ಈ ಬಾರಿ ಸಾಮಾನ್ಯ (ಮಹಿಳೆ) ಗೆ ಹಾಗೂ ಉಪ ಮೇಯರ್ ಸ್ಥಾನ ಹಿಂದುಳಿದ ಬ ವರ್ಗಕ್ಕೆ ಮೀಸಲಾಗಿತ್ತು.
ಈ ಚುನಾವಣೆ ಕಣದಲ್ಲಿ ಜೆಡಿಎಸ್ ಪ್ರಬಲ ಪೈಪೋಟಿ ನೀಡಿತ್ತಾದರೂ ಕೊನೆ ಗಳಿಗೆಯಲ್ಲಿ ಆ ಪಕ್ಷದ ಸ್ಪರ್ಧೆ ಕ್ಷೀಣವಾಯಿತು. ಹೀಗಾಗಿ, ಕಾಂಗ್ರೆಸ್ ಪಕ್ಷ ಯಾವುದೇ ಅಡ್ಡಿ ಇಲ್ಲದಂತೆ ಉಭಯ ಹುದ್ದೆಗಳಲ್ಲಿ ತಮ್ಮವರನ್ನು ಆಯ್ಕೆ ಕುಳ್ಳಿರಿಸುವಲ್ಲಿ ಯಶ ಕಂಡಿದೆ.ಪಾಲಿಕೆಯ 23ನೆಯ ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ 43ನೇ ವಾರ್ಡ್ ಪಾಲಿಕೆ ಸದಸ್ಯೆ ಆಗಿರುವ ವರ್ಷಾ ರಾಜೀವ್ ಜಾನೆ, ಉಪಮೇಯರ್ ಆಗಿ 45ನೇ ವಾರ್ಡಿನ ತೃಪ್ತಿ ಶಿವಶರಣಪ್ಪ ಲಾಖೆ ಅವರು ಆಯ್ಕೆಯಾಗಿದ್ದಾರೆ.36 ಮತಗಳನ್ನು ಪಡೆದ ವರ್ಷಾ ಮೇಯರ್ ಆಗಿ, 33 ಮತ ಪಡೆದಿರುವ ತೃಪ್ತಿ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಗಂಗಮ್ಮ ಮುನ್ನೊಳ್ಳಿ 27 ಮತ ಪಡೆದಿದ್ದಾರೆ. ಜೆಡಿಎಸ್ ನಿಂದ ವಿಜಯಲಕ್ಷ್ಮಿ ರೆಡ್ಡಿ ಅವರು ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು.ರಾಜಕೀಯ ಒಳನೋಟ: ಬಹುಮತ ಹೊಂದಿರುವ ಕಾಂಗ್ರೆಸ್‌ನ್ನು ಅಧಿಕಾರದಿಂದ ಕೆಳಗಿಳಿಸುವ ಯತ್ನ ಬಿಜೆಪಿ ಮಾಡಿತ್ತಾದರೂ ಸ್ಥಳೀಯವಾಗಿ ಬೆಂಬಲ ದೊರಕಲಿಲ್ಲ. ಏನಕೇನ ಕಾರಣದಿಂದ ಜೆಡಿಎಸ್, ಬಿಜೆಪಿ ಕೈ ಜೋಡಿಸಿ ವ್ಯೂಹ ರಚಿಸುವಲ್ಲಿ ವಿಫಲವಾದವು ಎಂಬುದು ರಟ್ಟಾದ ಗುಟ್ಟು.
ಪಾಲಿಕೆಯ 55 ಸದಸ್ಯ ಬಲದಲ್ಲಿ 28 ಕಾಂಗ್ರೆಸ್, 23 ಬಿಜೆಪಿ, ಜೆಡಿಎಸ್ 4 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರ ಬಿಜೆಪಿ ಸೇರಿದ್ದರಿಂದ ಬಿಜೆಪಿಗೆ ಲಾಭವಾಗಿದೆ.ಟೌನ್ ಹಾಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೇಲ್ಮನೆ ಸದಸ್ಯರಾದ ತಿಪ್ಪಣ್ಣ ಕಮಕನೂರ್, ಜಗದೇವ ಗುತ್ತೇದಾರ್, ಶಾಸಕರಾದ ಅಲ್ಲಂಪ್ರಭು ಪಾಟೀಲ್ ಹಾಜರಿದ್ದು, ಸುಸೂತ್ರವಾಗಿ ಅಧಿಕಾರ ಕೈವಶವಾಗುವಂತೆ ಉಸ್ತುವಾರಿ ವಹಿಸಿದ್ದರು. ಜಗದೇವ ಗುತ್ತೇದಾರ್ ಅವರೇ ಪಕ್ಷದ ಅಧ್ಯಕ್ಷರಾಗಿದ್ದರಿಂದ ಮೇಯರ್, ಉಪ ಮೇಯರ್ ಆಯ್ಕೆಯಲ್ಲಿ ಮುತುವರ್ಜಿ ತೋರಿದ್ದರು ಎನ್ನಲಾಗಿದೆ.
ರಾಜು ಜಾನೆ ಇವರು ಸಚಿವ ಪ್ರಿಯಾಂಕ್ ಖರ್ಗೆ ಆಪ್ತರು. ಈ ಬಾರಿ ಕಲಬುರಗಿ ದಕ್ಷಿಣದಿಂದಲೇ ಮೇಯರ್, ಉಪ ಮೇಯರ್ ಆಯ್ಕೆಯಾಗಿರೋದು ಗಮನ ಸೆಳೆದಿದೆ. ಯಾವಾಗಲೂ ಉತ್ತರ, ದಕ್ಷಿಣ ಎಂದು ಇವೆರಡೂ ಸ್ಥಾನ ಹಂಚಿಕೆಯಾಗುತ್ತಿದ್ದವು. ಈ ಬಾರಿ ಹಾಗಾಗದೆ ಕಲಬುರಗಿ ದಕ್ಷಿಣದಲ್ಲೇ ಬರುವ 2 ವಾರ್ಡ್‌ಗಳ ಸದ್ಯರಿಗೆ ಮೇಯರ್, ಉಪ ಮೇಯರ್ ಹುದ್ದೆ ಒಲಿದಿರೋದು ಈ ಚುನಾವಣೆಯ ಹಿಂದಿನ ಸೂತ್ರಧಾರಿಯಾಗಿ ಕೆಲಸ ಮಾಡಿದ್ದು ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ. ಶರಣಪ್ರಕಾಶ ಪಾಟೀಲ್ ಎಂಬುದು ಸ್ಪಷ್ಟವಾಗಿದೆ.ಲಂಬಾಣಿ ಸಮುದಾಯಕ್ಕೆ ಮೇಯರ್ ಸ್ಥಾನ ಕೊಡಬೇಕೆಂಬ ಬಲವಾದ ಬೇಡಿಕೆ ಇತ್ತು. ಜೊತೆಗೇ ಕಲಬುರಗಿ ಉತ್ತರದಿಂದ ಅಲ್ಪಸಂಖ್ಯಾತ ಸಮುದಾಯದ ಅನೇಕರು ಈ ಹುದ್ದೆ ಆಕಾಂಕ್ಷಿಯಾಗಿದ್ದರು. ಇವನ್ನೆಲ್ಲ ಮೀರಿ ಮೇಯರ್ ಹುದ್ದೆಗೆ ವರ್ಷಾ ಜಾನೆ ಆಯ್ಕೆಯಾಗಿರೋದು ರಾಜಕೀಯವಾಗಿ ಗಮನ ಸೆಳೆದಿದೆ.