ಚಾಮುಂಡೇಶ್ವರಿ ಆಶೀರ್ವಾದ ಪಡೆದ ವರ್ತೂರು ಸಂತೋಷ್

| Published : Feb 07 2024, 01:50 AM IST

ಸಾರಾಂಶ

ಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜೀ ಬಳಿ ಚರ್ಚಿಸಿ ದಿನಾಂಕವನ್ನು ನಿಗದಿಪಡಿಸಿದರು. ಆದರೆ, ರೇಸ್ ದಿನಾಂಕವನ್ನು ಬಹಿರಂಗಗೊಳಿಸಲಿಲ್ಲ.

ಬಿಗ್ ಬಾಸ್ ಶೋ ಬಳಿಕ ಮೊದಲ ಬಾರಿಗೆ ಕ್ಷೇತ್ರ ಭೇಟಿ । ಧರ್ಮದರ್ಶಿಗಳಿಂದ ಸಂತೋಷ್ ಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ವರ್ತೂರು ಸಂತೋಷ್ (ಹಳ್ಳಿಕಾರ್ ಸಂತೋಷ್) ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಹಳ್ಳಿಕಾರ್ ಸಂತೋಷ್ ಶ್ರೀ ಕ್ಷೇತ್ರದ ಪರಮ ಭಕ್ತರಾಗಿದ್ದು, ಕ್ಷೇತ್ರದೊಂದಿಗೆ ಅಪಾರ ನಂಟು ಹೊಂದಿದ್ದಾರೆ. ಬಿಗ್ ಬಾಸ್ ಶೋ ನಂತರ ಮೊದಲ ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಅವರು, ಕ್ಷೇತ್ರದ ಪವಾಡ ಬಸವಪ್ಪನ ಆಶೀರ್ವಾದ ಪಡೆದರು. ಹಲವು ಗಂಟೆಗಳ ಕಾಲ ದೇವಾಲಯದಲ್ಲಿ ತಂಗಿದ್ದ ಅವರು, ಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜೀಯ ಆಶೀರ್ವಾದ ಪಡೆದರು. ಇದೇ ವೇಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರೇಸ್ ದಿನಾಂಕ ಅಖೈರು:

ಬೆಂಗಳೂರಿನಲ್ಲಿ ತಮ್ಮ ನೇತೃತ್ವದಲ್ಲಿ ಎರಡನೇ ಬಾರಿಗೆ ಆಯೋಜಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಮಟ್ಟದ ಹಳ್ಳಿಕಾರ್ ರೇಸ್‌ಗೆ ವರ್ತೂರ್ ಸಂತೋಷ್ ಕ್ಷೇತ್ರದಲ್ಲಿ ದಿನಾಂಕ ನಿಗದಿ ಮಾಡಿದ್ದು ವಿಶೇಷವಾಗಿತ್ತು. ಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜೀ ಬಳಿ ಚರ್ಚಿಸಿ ದಿನಾಂಕವನ್ನು ನಿಗದಿಪಡಿಸಿದರು. ಆದರೆ, ರೇಸ್ ದಿನಾಂಕವನ್ನು ಬಹಿರಂಗಗೊಳಿಸಲಿಲ್ಲ.

ವರ್ತೂರು ಸಂತೋಷ್ ಬಿಗ್ ಬಾಸ್ ಶೋ ಸ್ಪರ್ಧೆಯಲ್ಲಿ ವಿಜೇತರಾಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಕ್ಷೇತ್ರದ ಧರ್ಮದರ್ಶಿಗಳು, ಮುಂಬರುವ ದಿನಗಳಲ್ಲಿ ಮತ್ತಷ್ಟು ಕೀರ್ತಿಗೆ ಪಾತ್ರವಾಗುವಂತೆ ಶುಭ ಹಾರೈಸಿದರು.

ಕ್ಷೇತ್ರಕ್ಕೆ ಸಂತೋಷ್ ಭೇಟಿಯ ವಿಚಾರ ತಿಳಿದು ಸುತ್ತಮುತ್ತಲ ಗ್ರಾಮದ ಅಪಾರ ಅಭಿಮಾನಿಗಳು ಆಗಮಿಸಿ, ಸಂತೋಷ್ ಅವರೊಡನೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

------------

ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ವರ್ತೂರು ಸಂತೋಷ್ ದೇವಿಯ ಆರ್ಶಿವಾದ ಪಡೆದರು.