ಸಾರಾಂಶ
ರಾಮನಗರ: ಜಿಲ್ಲೆಯಲ್ಲಿ ಹಲವೆಡೆ ಶನಿವಾರ ಸಂಜೆ ಧಾರಾಕಾರ ಮಳೆಯಾಗಿದ್ದು, ಇದರಿಂದ ಜನ ಜೀವನ ಅಸ್ತವ್ಯಸ್ಥಗೊಂಡಿತ್ತು.
ರಾಮನಗರ, ಚನ್ನಪಟ್ಟಣ ಸೇರಿದಂತೆ ಹಲವೆಡೆ ವರುಣನ ಆರ್ಭಟ ಜೋರಾಗಿತ್ತು. ಸುಮಾರು ಒಂದು ತಾಸಿಗೂ ಅಧಿಕ ಕಾಲ ಸುರಿದ ಮಳೆಯಿಂದಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಹಾಗೂ ಹಳೆಯ ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತಗೊಂಡಿತ್ತು. ಇದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಯಿತು.ಶನಿವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆ ವೇಳೆಗೆ ಜೋರು ಮಳೆಯಾಗಿರುವ ಕಾರಣ ಹೊಲ, ರಸ್ತೆ ಗುಂಡಿಗಳಲ್ಲಿ ನೀರು ತುಂಬಿತ್ತು. ರಸ್ತೆ ದಾಟಲು ಜನರು ಹರಸಾಹಸ ಪಡುತ್ತಿದ್ದರು.
ಗ್ರಾಮೀಣ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು, ಮರಗಳು ರಸ್ತೆಗೆ ಉರುಳಿದ್ದು, ಅವುಗಳನ್ನು ತೆರವುಗೊಳಿಸಲು ಮಳೆ ಅಡ್ಡಿಯಾಗಿತ್ತು. ವಿದ್ಯುತ್ ಪೂರೈಕೆಯಲ್ಲಿಯೂ ಅಡಚಣೆ ಉಂಟಾಗಿತ್ತು.ಮನೆಗಳಿಗೆ ನುಗ್ಗಿದ ಕಲುಷಿತ ನೀರು:
ಭಾರಿ ಮಳೆ ಚನ್ನಪಟ್ಟಣ ತಾಲೂಕಿನಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿತು. ನಗರದ ಶೆಟ್ಟಿಹಳ್ಳಿ ಕೆರೆಯ ಕಲುಷಿತ ನೀರು, ರಾಜಾಕೆಂಪೇಗೌಡ ರಸ್ತೆ ಹಾಗೂ ಮನೆಗಳಿಗೆ ನುಗ್ಗಿ ಜನ ಪರದಾಡುವಂತಾಯಿತು.ಚನ್ನಪಟ್ಟಣದ ಶೆಟ್ಟೆಹಳ್ಳಿ ಕೆರೆ ಪುನಶ್ಚೇತನ ಕಾರ್ಯ ಸಾಗಿದ್ದು, ಕೆರೆಯಲ್ಲಿನ ಕಲುಷಿತ ನೀರನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಆದರೆ, ಶನಿವಾರ ಸಂಜೆ ಸುರಿದ ಭಾರೀ ಮಳೆಗೆ ಕೆರೆಯ ಕೋಡಿಹಳ್ಳ ಕಟ್ಟಿಕೊಂಡ ಪರಿಣಾಮ ಕೆರೆಯ ಕಲುಷಿತ ನೀರು ರಾಜಾಕೆಂಪೇಗೌಡ ಬಡಾವಣೆಯ ರಸ್ತೆಗೆ ಹರಿದು, ಆಸುಪಾಸಿನ ಮನೆಗಳಿಗೆ ನುಗ್ಗಿ, ಪೀಠೋಪಕರಣಗಳಿಗೆ ಹಾನಿಮಾಡಿತು. ಆನಂತರ ಕೆರೆಯ ಕೋಡಿ ಹಳ್ಳವನ್ಬು ಸ್ವಚ್ಛಗೊಳಿಸಿ ನೀರು ತೆರವುಗೊಳಿಸಲಾಯಿತು. ನಗರಸಭೆ ನಿರ್ಲಕ್ಷ್ಯದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟೇ ಅಲ್ಲದೆ ಚನ್ನಪಟ್ಟಣದ ಅಂಚೆ ಕಚೇರಿ ರಸ್ತೆ, ಬೆಂ-ಮೈ ಹೆದ್ದಾರಿ ಪಕ್ಕದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಜಲಾವೃತಗೊಂಡಿತ್ತು. ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದ ಕಾರಣ ರಸ್ತೆಯಲ್ಲಿ ನಿಂತಿತ್ತು. ಬೆಂ-ಮೈ ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು. ಸಾರ್ವಜನಿಕ ಆಸ್ಪತ್ರೆಗೂ ನೀರು ನುಗ್ಗಿದ್ದರಿಂದ ರೋಗಿಗಳು ಪರದಾಡುವಂತಾಯಿತು.ಕನಕಪುರ ಮತ್ತು ಮಾಗಡಿ ಪಟ್ಟಣ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಮಳೆಯಾಗಿದ್ದು, ಎಲ್ಲಿಯೂ ಯಾವುದೇ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
9ಕೆಆರ್ ಎಂಎನ್ 8,9,10.ಜೆಪಿಜಿ8.ಚನ್ನಪಟ್ಟಣದ ಇಂಜಿಯನ್ ಆಯಿಲ್ ಪೆಟ್ರೋಲ್ ಬಂಕ್ ಆವರಣದಲ್ಲಿ ಕಾರು ಮುಳುಗಿರುವುದು.
9.ಚನ್ನಪಟ್ಟಣದ ಇಂಜಿಯನ್ ಆಯಿಲ್ ಪೆಟ್ರೋಲ್ ಬಂಕ್ ಜಲಾವೃತಗೊಂಡಿರುವುದು.10.ಬೆಂಗಳೂರು - ಮೈಸೂರು ಹಳೆ ಹೆದ್ದಾರಿಯಲ್ಲಿ ಮಳೆ ನೀರು ಸಂಗ್ರಹವಾಗಿರುವುದು.