ಕಲ್ಪತರು ಜಿಲ್ಲೆಯಲ್ಲಿ ಮುಂದುವರೆದ ವರುಣಾರ್ಭಟ

| Published : May 14 2024, 01:04 AM IST

ಸಾರಾಂಶ

ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಭಾನುವಾರ ಮಧ್ಯರಾತ್ರಿ ಬಿರುಗಾಳಿ ಗುಡುಗು-ಸಿಡಿಲು ಸಹಿತ ಸುರಿದ ಧಾರಾಕಾರ ಮಳೆಯಿಂದ ಹಲವೆಡೆ ಮರ, ವಿದ್ಯುತ್ ಕಂಬಗಳು, ಲೈನ್‌ಗಳು ಧರೆಗುರುಳಿದಿವೆ. ರಸ್ತೆಯಲ್ಲಿ ನಿಂತಿದ್ದ ಕಾರು ಬಿರುಗಾಳಿಗೆ ಪಲ್ಟಿಯಾಗಿದ್ದು, ಹಳ್ಳಿಗಳಲ್ಲಿ ತಗ್ಗು ಪ್ರದೇಶದಗಳು ಜಲಾವೃತಗೊಂಡಿವೆ.

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಭಾನುವಾರ ಮಧ್ಯರಾತ್ರಿ ಬಿರುಗಾಳಿ ಗುಡುಗು-ಸಿಡಿಲು ಸಹಿತ ಸುರಿದ ಧಾರಾಕಾರ ಮಳೆಯಿಂದ ಹಲವೆಡೆ ಮರ, ವಿದ್ಯುತ್ ಕಂಬಗಳು, ಲೈನ್‌ಗಳು ಧರೆಗುರುಳಿದಿವೆ. ರಸ್ತೆಯಲ್ಲಿ ನಿಂತಿದ್ದ ಕಾರು ಬಿರುಗಾಳಿಗೆ ಪಲ್ಟಿಯಾಗಿದ್ದು, ಹಳ್ಳಿಗಳಲ್ಲಿ ತಗ್ಗು ಪ್ರದೇಶದಗಳು ಜಲಾವೃತಗೊಂಡಿವೆ. ತುಮಕೂರು ತಾಲೂಕಿನ ಹಲವೆಡೆ ರಾತ್ರಿ ಸುಮಾರು 2 ಗಂಟೆಗೂ ಅಧಿಕ ಕಾಲ ಗುಡುಗು-ಸಿಡಿಲಬ್ಬರದ ನಡುವೆ ಧಾರಾಕಾರವಾಗಿ ಮಳೆ ಸುರಿದಿದ್ದು, ಹಳ್ಳಕೊಳ್ಳಗಳು ತುಂಬಿ ಹರಿದಿವೆ. ತಗ್ಗು ಪ್ರದೇಶಗಳಲ್ಲಿದ್ದ ತೋಟಗಳು ನೀರು ನಿಂತು ಜಲಾವೃತಗೊಂಡಿವೆ. ಡಿಸಿ ಕಚೇರಿ ಸಮೀಪ ರಸ್ತೆ ಬಿದ್ದ ಮರ: ರಾತ್ರಿ ಸುರಿದ ಬಿರುಗಾಳಿ ಮಳೆಗೆ ಸಿರಾ ಗೇಟ್ ಸಮೀಪದ ವಾಸವಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಂಗಲೆ ಸಮೀಪ ಮರಗಳು ರಸ್ತೆಗೆ ಅಡ್ಡಲಾಗಿ ಧರೆಗುರುಳಿದೆ. ರಸ್ತೆಗೆ ಮರಗಳು ಧರೆಗುರುಳಿರುವುದರಿಂದ ಬೆಳಿಗ್ಗೆ ಆ ಮಾರ್ಗದಲ್ಲಿ ಅಡಚಣೆ ಉಂಟಾಗಿತ್ತು.

ಕಾರು ಪಲ್ಟಿ: ಗುಬ್ಬಿ ತಾಲ್ಲೂಕಿನ ಜಿ. ಹೊಸಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಹೆಚ್ಚಾಗಿದ್ದರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.

ಹೊಸಹಳ್ಳಿ ಗ್ರಾಮದಲ್ಲಿ ಬಿರುಗಾಳಿಯಿಂದಾಗಿ ಕೆಲ ತೋಟಗಳಲ್ಲಿ ಅಡಿಕೆ, ತೆಂಗಿನ ಮರಗಳು ಸಹ ಧರೆಗುರುಳಿವೆ. ಜತೆಗೆ ರಸ್ತೆ ಬದಿಯಲ್ಲಿದ್ದ ಕೆಲ ಮರಗಳು ಬುಡಮೇಲಾಗಿವೆ.ಮಧುಗಿರಿ ತಾಲ್ಲೂಕಿನ ಲಕ್ಲಿಹಟ್ಟಿ ಗ್ರಾಮದಲ್ಲಿ ಹಾದು ಹೋಗಿರುವ ಬೃಹತ್ ವಿದ್ಯುತ್ ಲೈನ್ ಬಿರುಗಾಳಿ ಮಳೆಯ ಅಬ್ಬರದಿಂದಾಗಿ ಮನೆಗಳ ಮೇಲೆ ಬಿದ್ದಿದೆ. ಇದು ಹೈವೋಟೇಜ್‌ ವಿದ್ಯುತ್ ಲೈನ್ ಆಗಿದ್ದು, ಈ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಇಲ್ಲದಿದ್ದರೆ ಯಾವುದೇ ಅವಘಡ ಸಂಭವಿಸಿಲ್ಲ.ಗ್ರಾಮದ ಮಧ್ಯೆ ಭಾಗದಲ್ಲಿ ಹಾದು ಹೋಗಿರುವ ಹೈವೋಟೇಜ್‌ ವಿದ್ಯುತ್ ಲೈನ್‌ನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ವೇಳೆ ಹೈವೋಟೇಜ್‌ ವಿದ್ಯುತ್ ತಂತಿ ಮನೆಗಳ ಮೇಲೆ ಬಿದ್ದ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಾಗಿ ಏನಾದರೂ ಅನಾಹುತ, ಪ್ರಾಣಾಪಾಯ ಸಂಭವಿಸಿದರೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ತುರುವೇಕೆರೆ ತಾಲೂಕಿನ ತೊರೆಮಾವಿನಹಳ್ಳಿಯಲ್ಲಿ ಧಾರಾಕಾರ ಮಳೆಯಿಂದಾಗಿ ತೆಂಗಿನ ತೋಟಗಳು ನೀರು ತುಂಬಿಕೊಂಡಿವೆ. ಸಿಡಿಲು ಬಡಿದು 20 ಕುರಿ ಸಾವು: ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಹೋಬಳಿಯ ಹನುಮಂತನಹಳ್ಳಿ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು 20 ಕುರಿಗಳು ಸಾವನ್ನಪ್ಪಿವೆ. ಗ್ರಾಮದ ಜಯಣ್ಣ ಎಂಬುವರಿಗೆ ಸೇರಿದ ಕುರಿಗಳು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಮಳೆ ಆರಂಭವಾಗಿದೆ. ಕುರಿಗಳು ಹುಣಸೆ ಮರಗಳ ಕೆಳಗೆ ನಿಂತಿರುವಾಗ ಸಿಡಿಲು ಬಡಿದಿದೆ. ಜಯಣ್ಣ ಮತ್ತೊಂದು ಮರದ ಕೆಳಗೆ ನಿಂತಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.