ಸಾರಾಂಶ
ಬಳ್ಳಾರಿ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿವೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳೆಲ್ಲ ಸಂಪೂರ್ಣ ಜಲಾವೃತಗೊಂಡಿವೆ. ಜಿಲ್ಲಾಧಿಕಾರಿ ಕಚೇರಿ, ಹಳೇ ತಾಲೂಕು ಕಚೇರಿ ಆವರಣ, ಜಿಲ್ಲಾ ಕ್ರೀಡಾಂಗಣ, ಮುನ್ಸಿಪಲ್ ಕಾಲೇಜು ಮೈದಾನ, ಎಸ್‌ಎನ್‌ಪೇಟೆ ಅಂಡರ್ ಬ್ರಿಡ್ಜ್, ಬಂಡಿಮೋಟ್ ಸೇರಿದಂತೆ ಶಾಲಾ-ಕಾಲೇಜು ಆವರಣಗಳಲ್ಲಿ ಮಳೆ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನಗರದ ವಿವಿಧ ಕಾಲೋನಿಗಳಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ಚರಂಡಿ ನೀರು ನುಗ್ಗಿ ಕುಟುಂಬಗಳು ಪರದಾಡಿದವು. ಗ್ರಾಮೀಣ ಭಾಗಗಳಲ್ಲಿ ಕಾಲುವೆಗಳು, ಹಳ್ಳ-ಕೊಳ್ಳಗಳು ತುಂಬಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ, ಹಲವೆಡೆ ಹೊಲಗಳಿಗೆ ನೀರು ನುಗ್ಗಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವಂತಾಗಿದೆ.184.6 ಮಿ.ಮೀ. ಮಳೆ:
ಜಿಲ್ಲೆಯ ಐದು ತಾಲೂಕುಗಳಲ್ಲಿ 184.6 ಮಿ.ಮೀ. ಮಳೆ ಸುರಿದಿದೆ. ಇತ್ತೀಚೆಗೆ ಸುರಿದ ಮಳೆಯಲ್ಲಿ ಅತೀಹೆಚ್ಚು ಮಳೆ ಇದಾಗಿದೆ. ಬಳ್ಳಾರಿಯಲ್ಲಿ 31.4 ಮಿ.ಮೀ., ಸಂಡೂರು 57.8 ಮಿ.ಮೀ., ಸಿರುಗುಪ್ಪ 16.9ಮಿ.ಮೀ., ಕುರುಗೋಡು 27 ಮಿ.ಮೀ. ಹಾಗೂ ಕಂಪ್ಲಿ 51.5 ಮಿ.ಮೀ. ಸೇರಿದಂತೆ ಒಟ್ಟಾರೆಯಾಗಿ ಜಿಲ್ಲೆಯಲ್ಲಿ 184.6 ಮಿ.ಮೀ. ಮಳೆ ಸುರಿದಿದೆ. ಸಂಡೂರು, ಕಂಪ್ಲಿ ಭಾಗಗಳಲ್ಲಿಯೇ ಅತೀಹೆಚ್ಚು ಮಳೆ ಸುರಿದಿದೆ.ಮಳೆಯಿಂದ 9 ಮನೆಗಳು ಹಾನಿ:
ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 9 ಮನೆಗಳು ಕುಸಿದಿವೆ. ಸಂಡೂರ ತಾಲೂಕಿನಲ್ಲಿ 7 ಮನೆ, ಬಳ್ಳಾರಿ ತಾಲೂಕಿನಲ್ಲಿ 2 ಮನೆಗಳು ಕುಸಿದಿವೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಇದರ ಹೊರತಾಗಿ ಮಳೆ- ಗಾಳಿಯಿಂದಾಗಿ ಅಲ್ಲಲ್ಲಿ ಮರಗಳು ಧರೆಗುರುಳಿವೆ. ಕೆಲವೆಡೆ ವಿದ್ಯುತ್ ಕಂಬಗಳು ಬಿದ್ದಿವೆ. ಈಗಾಗಲೇ ಜೆಸ್ಕಾಂ ಇಲಾಖೆಯಿಂದ ದುರಸ್ತಿ ಕಾರ್ಯ ಸಹ ಕೈಗೊಳ್ಳಲಾಗಿದೆ.ಜಿಲ್ಲೆಯಲ್ಲಿ ಸುರಿದ ಹೆಚ್ಚಿನ ಮಳೆಯಿಂದಾಗಿ ರೈತರ ಬೆಳೆಗಳಿಗೆ ನೀರು ನುಗ್ಗಿ ಬೆಳೆಗಳು ಸಂಪೂರ್ಣ ಜಲಾವೃತಾಗೊಂಡಿವೆ. ಮೆಕ್ಕೆಜೋಳ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿರುವ ಜಮೀನುಗಳಲ್ಲಿಮಳೆ ನೀರು ನಿಂತಿದ್ದು, ರೈತರನ್ನು ಚಿಂತೆಗೆ ಸಿಲುಕಿಸಿದೆ. ಬೆಳೆಗಳ ನಡುವೆ ನೀರು ನಿಂತ ಪರಿಣಾಮ ರೋಗಗಳು ಎದುರಾಗುವ, ಬೆಳೆ ಕೊಳೆಯುವ ಆತಂಕ ರೈತರಿಗೆ ಕಾಡುತ್ತಿದೆ.
ಮಾರ್ಗ ಮಧ್ಯೆ ಸಿಲುಕಿದ್ದ ಕಾರು:ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮದ ಬಳಿ ಮಳೆಯಿಂದಾಗಿ ಹಳ್ಳವೊಂದು ತುಂಬಿ ಹರಿದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರ ನಡುವೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಳ್ಳಾರಿ ತಾಲೂಕಿನ ವೀರೇಶ್ ಕ್ಯಾಂಪ್‌ನ ನಿವಾಸಿ ಶಿವು ಎಂಬಾತ ಹರಿಯುವ ನೀರಿನಲ್ಲಿಯೇ ಕಾರು ಚಲಾಯಿಸಿಕೊಂಡು ಹೋಗಿದ್ದು, ನೀರಿನ ರಭಸಕ್ಕೆ ಸಿಲುಕಿ ಮಾರ್ಗದ ನಡುವೆಯೇ ಕಾರು ಬಿಟ್ಟು ಹೊರ ಬಂದಿದ್ದಾರೆ. ನೀರಿನ ರಭಸಕ್ಕೆ ಹಳ್ಳದಲ್ಲಿ ಕಾರು ಕೊಚ್ಚಿಕೊಂಡು ಹೋಗಿದ್ದು, ಬಳಿಕ ಸ್ಥಳೀಯರ ಸಹಕಾರದಿಂದ ಹಗ್ಗದ ಮೂಲಕ ಕಾರ್‌ನ್ನು ದಡಕ್ಕೆ ಸೇರಿಸಲಾಗಿದೆ.