ವಿಶ್ವ ಜಲ ದಿನದಂದು ಗ್ರಾಮಾಂತರ ಜಿಲ್ಲೆಯಲ್ಲಿ ವರುಣಾರ್ಭಟ

| Published : Mar 23 2025, 01:32 AM IST

ಸಾರಾಂಶ

ಶನಿವಾರ ಸಂಜೆ ಬಳಿಕ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬಿರುಸಿನ ಮಳೆಯಾಗಿದೆ. ಕಾಕತಾಳೀಯ ಎಂಬಂತೆ ವಿಶ್ವ ಜಲ ದಿನದಂದೇ ವರ್ಷದ ಮೊದಲ ಮಳೆ ಆರಂಭಗೊಂಡಿರುವುದು ಜನತೆಯಲ್ಲಿ ಸಂತಸ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಶನಿವಾರ ಸಂಜೆ ಬಳಿಕ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬಿರುಸಿನ ಮಳೆಯಾಗಿದೆ. ಕಾಕತಾಳೀಯ ಎಂಬಂತೆ ವಿಶ್ವ ಜಲ ದಿನದಂದೇ ವರ್ಷದ ಮೊದಲ ಮಳೆ ಆರಂಭಗೊಂಡಿರುವುದು ಜನತೆಯಲ್ಲಿ ಸಂತಸ ಮೂಡಿಸಿದೆ.

ಸಂಜೆ 4 ಗಂಟೆ ಬಳಿಕ ಆರಂಭಗೊಂಡ ಮಳೆ ಆರಂಭದಲ್ಲಿ ಸೋನೆ ಮಳೆಯಾಗಿ ಸುರಿಯಿತು. ಬಳಿಕ, ಗಾಳಿ-ಗುಡುಗಿನೊಂದಿಗೆ ಆರ್ಭಟಿಸಿದ ವರುಣ, ಬಿರು ಬಿಸಿಲ ಬೇಗೆಯಿಂದ ಬೆಂದಿದ್ದ ನೆಲಕ್ಕೆ ತಂಪೆರೆದಿದ್ದಾನೆ. ಕಳೆದ ಒಂದು ತಿಂಗಳಿಂದ ಅತಿಯಾದ ಬಿಸಿಲಿನಿಂದ ಕಂಗೆಟ್ಟಿದ್ದ ಜನರ ಮುಖದಲ್ಲಿ ಮಳೆ ಮಂದಹಾಸ ಮೂಡಿಸಿದೆ.

ಸಂಜೆಯಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಪರಿಣಾಮ ರಾಗಿ ಖರೀದಿ ಕೇಂದ್ರಕ್ಕೆ ನೀಡಲು ರಾಗಿ ತಂದಿದ್ದ ರೈತರು ಪರಿತಪಿಸುವಂತಾಯಿತು. ಕನಿಷ್ಠ ಬೆಂಬಲ ಬೆಲೆಯಲ್ಲಿ ನೋಂದಣಿಯಾದ ರೈತರು ನಗರದ ರಾಗಿ ಖರೀದಿ ಕೇಂದ್ರಕ್ಕೆ ಟ್ರ್ಯಾಕ್ಟರ್‌ಗಳಲ್ಲಿ ತಂದಿದ್ದರು. ಏಕಾಏಕಿ ಸುರಿದ ಮಳೆ ಪರಿಣಾಮ ರಾಗಿ ಮೂಟೆಗಳು ಮಳೆಯಲ್ಲಿ ನೆನೆಯದಂತೆ ಟಾರ್ಪಲ್‌ ಶೀಟ್‌ ಹೊದಿಸುವುದು ಅನಿವಾರ್ಯವಾಯಿತು. ಟಾರ್ಪಲ್‌ ಶೀಟ್‌ ಇಲ್ಲದ ರೈತರು ಸಂಕಷ್ಟಕ್ಕೊಳಗಾದರು.

ಕೆಲ ರಸ್ತೆಗಳಲ್ಲಿ ಚರಂಡಿಗಳು ತುಂಬಿ ರಸ್ತೆಯಲ್ಲಿ ನೀರು ಹರಿಯುವ ದೃಶ್ಯ ಕಂಡು ಬಂತು. ಕೆಲ ರಸ್ತೆಗಳು ಗುಂಡಿಮಯವಾಗಿದ್ದು, ರಸ್ತೆ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವಂತಾಯಿತು.

ನಾಲ್ಕು ದಿನ ಮಳೆ ಸಾಧ್ಯತೆ:

ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ 4 ದಿನ ದಕ್ಷಿಣ ಒಳನಾಡಿನ ಜಿಲ್ಲೆಯಗಳೂ ಸೇರಿದಂತೆ ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗುವ ನಿರೀಕ್ಷೆ ಇದ್ದು, ಮಾರ್ಚ್‌ ಕೊನೆಯ ವಾರದಲ್ಲೂ ವ್ಯಾಪಕ ಮಳೆ ನಿರೀಕ್ಷಿಸಲಾಗಿದೆ. ಅಪರೂಪಕ್ಕೆ ಯುಗಾದಿಗೂ ಮುನ್ನವೇ ವರುಣ ಅಬ್ಬರಿಸಿರುವುದು ದೊಡ್ಡಬಳ್ಳಾಪುರದ ಜನರಲ್ಲಿ ಸಂತಸ ಮೂಡಿಸಿದೆ.

.