ಸಾರಾಂಶ
ಎರಡು ನೂರು ಎಕರೆಗಿಂತೆ ಅಧಿಕ ಬೆಳೆ ಹಾಳು । ನೂರಾರು ಮನೆಗಳಲ್ಲಿ ನೀರು ಹೊಕ್ಕಿ ದವಸ ದಾನ್ಯ ಹಾನಿ
ಕನ್ನಡಪ್ರಭ ವಾರ್ತೆ ಕುಷ್ಟಗಿಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಹನುಮನಾಳ, ತಾವರಗೇರಾ ಸೇರಿದಂತೆ ವಿವಿಧ ಭಾಗಗಳಲ್ಲಿ ಶನಿವಾರ ನಸುಕಿನ ಜಾವದಲ್ಲಿ ಸುರಿದ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಮನೆ ಹಾಗೂ ಹೊಲಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ತಾಲೂಕಿನ ಟೆಂಗುಂಟಿ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ 50 ಮನೆಗಳಿಗೆ ನೀರು ಹೊಕ್ಕಿ ಮನೆಯಲ್ಲಿನ ಸಾಮಗ್ರಿಗಳು ಹಾಳಾಗಿವೆ. ಕೆಲವು ವಾಹನಗಳು ಜಲಾವೃತಗೊಂಡಿದ್ದವು. ಜ್ಞಾನಮೂರ್ತೆಶ್ವರ ಮಠವು ಜಲಾವೃತಗೊಂಡಿತ್ತು.ಗಂಜಿ ಕೇಂದ್ರ ಸ್ಥಾಪನೆ:ತಾಲೂಕಿನ ಟೆಂಗುಂಟಿ ಗ್ರಾಮದಲ್ಲಿ ಮಳೆಯ ಆರ್ಭಟದಿಂದಾಗಿ ಸುಮಾರು 50 ಮನೆಗಳಿಗೆ ನೀರು ಹೋಗಿರುವ ಪರಿಣಾಮವಾಗಿ ಆಹಾರ ಪದಾರ್ಥಗಳು ನೀರುಪಾಲಾಗಿದ್ದರ ಹಿನ್ನೆಲೆ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಬಿಜಕಲ್ ಗ್ರಾಪಂ ವತಿಯಿಂದ ಗಂಜಿ ಕೇಂದ್ರದ ಸ್ಥಾಪನೆ ಮಾಡಲಾಗಿದ್ದು, ಬೆಳಗ್ಗೆ ಉಪಾಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ:ಕುಷ್ಟಗಿ ತಾಲೂಕಿನ ಟೆಂಗುಂಟಿ ಗ್ರಾಮ ಹಾಗೂ ಕುಷ್ಟಗಿಯ ಷರೀಫ ನಗರದಲ್ಲಿ ಭಾರಿ ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ನಳಿನ್ ಅತುಲ್ ಭೇಟಿ ನೀಡಿ ಪರೀಶೀಲನೆ ನಡೆಸಿದರು. ನಂತರ ಅಧಿಕಾರಿಗಳಿಗೆ ಮಳೆಯಿಂದ ನಷ್ಟವಾಗಿರುವ ಮಾಹಿತಿಯನ್ನು ಸಮಗ್ರವಾಗಿ ತಯಾರಿಸಿಕೊಂಡು ಶೀಘ್ರದಲ್ಲಿ ಸರ್ವೇ ಮಾಡಿ ವರದಿ ನೀಡಬೇಕು ಎಂದು ತಿಳಿಸಿದರು.
ಸಂಸದರ ಭೇಟಿ:ಸಂಸದ ರಾಜಶೇಖರ ಹಿಟ್ನಾಳ, ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ ಕುಷ್ಟಗಿ ತಾಲೂಕಿನ ಟೆಂಗುಂಟಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ನಂತರ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಕೂಡಲೇ ತಾತ್ಕಾಲಿಕವಾಗಿ ಅವರಿಗೆ ಪರಿಹಾರ ನೀಡಬೇಕು ಹಾಗೂ ಹಳ್ಳದಲ್ಲಿ ಇರುವ ಜಾಲಿಯ ಗಿಡ ತೆರವುಗೊಳಿಸುವಂತೆ ಸೂಚನೆ ನೀಡಿದರು.
ಎಲ್ಲೆಲ್ಲಿ ಹಾನಿ:ಕುಷ್ಟಗಿ ಪಟ್ಟಣದ ಷರೀಫ ನಗರ, ಟೆಂಗುಂಟಿ, ಬಿಜಕಲ್, ನಿಡಶೇಶಿ, ಕಂದಕೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ದವಸ ಧಾನ್ಯಗಳು ಹಾಳಾಗಿವೆ. ನಂದಾಪೂರದಲ್ಲಿ ಮೂರು ಮನೆಗಳು, ಒಟ್ಟು ಕುಷ್ಟಗಿಯಲ್ಲಿ ಆರು ಮನೆಗಳಿಗೆ ಹಾನಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
200 ಎಕರೆ ಬೆಳೆ ಹಾಳು:ಟೆಂಗುಂಟಿ ಗ್ರಾಮವೊಂದರಲ್ಲಿಯೇ ಸುಮಾರು 200 ಎಕರೆಯಷ್ಟು ತೊಗರಿ, ಸಜ್ಜೆ, ಎಳ್ಳು ಸೇರಿದಂತೆ ಅನೇಕ ಬೆಳೆಗಳು ಹಾಳಾಗಿದ್ದು, ಸರ್ವೇ ನಡೆಸಿ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಜಮೀರ್ ಅಲಿ ತಿಳಿಸಿದರು.
ಮಳೆಯ ವರದಿ:ಕುಷ್ಟಗಿ 107 ಮಿಮೀ, ದೋಟಿಹಾಳ 61.3 ಮಿಮೀ, ಹನಮನಾಳ 70.2ಮಿಮೀ, ಹನುಮಸಾಗರ 6.1ಮಿಮೀ, ಕಿಲ್ಲಾರಟ್ಟಿ 19.6ಮಿಮೀ, ತಾವರಗೇರಾ 28.2ಮಿಮೀ ಮಳೆಯಾಗಿದೆ ಎಂದು ಕಂದಾಯ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.
ಕುಷ್ಟಗಿ ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಟೆಂಗುಂಟಿಯಲ್ಲಿ 50ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ, ದವಸ ಧಾನ್ಯ ಹಾಳಾಗಿವೆ. ಬಿದ್ದ ಮನೆಗಳ ಮಾಹಿತಿಯು ಬರಬೇಕಾಗಿದೆ. ಹಾನಿಗೊಳಗಾದವರಿಗೆ ಸೂಕ್ತ ಪರಿಹಾರಕ್ಕಾಗಿ ವರದಿ ತಯಾರಿಸಿ ಜಿಲ್ಲಾಧಿಕಾರಿಗೆ ಕಳಿಸಕೊಡಲಾಗುವುದು ಎಂದು ತಹಸೀಲ್ದಾರ ಅಶೋಕ ಶಿಗ್ಗಾವಿ ತಿಳಿಸಿದ್ದಾರೆ.