ವಾಸನ ಗ್ರಾಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದೆ: ಶಾಸಕ ಸಿ.ಸಿ. ಪಾಟೀಲ

| Published : Feb 11 2024, 01:45 AM IST

ವಾಸನ ಗ್ರಾಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದೆ: ಶಾಸಕ ಸಿ.ಸಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಭಾಗಿಯಾದ ವಾಸನ ಗ್ರಾಮದ ಶತಮಾನೋತ್ಸವ ಶಾಲೆಯ ವಿದ್ಯಾರ್ಥಿ, ಮಾಜಿ ಸಚಿವ ಆರ್.ಎಂ. ಪಾಟೀಲರು ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದರು. ಶತಮಾನಗಳನ್ನು ಕಂಡ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹಲವಾರು ಉನ್ನತ ವ್ಯಕ್ತಿಗಳನ್ನು ದೇಶಕ್ಕೆ ನೀಡಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ನರಗುಂದ: ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಭಾಗಿಯಾದ ವಾಸನ ಗ್ರಾಮದ ಶತಮಾನೋತ್ಸವ ಶಾಲೆಯ ವಿದ್ಯಾರ್ಥಿ, ಮಾಜಿ ಸಚಿವ ಆರ್.ಎಂ. ಪಾಟೀಲರು ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದರು. ಶತಮಾನಗಳನ್ನು ಕಂಡ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹಲವಾರು ಉನ್ನತ ವ್ಯಕ್ತಿಗಳನ್ನು ದೇಶಕ್ಕೆ ನೀಡಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಅವರು ಶನಿವಾರ ತಾಲೂಕಿನ ವಾಸನ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿದ ನಂತರ ಶಾಲಾ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಆಧುನಿಕ ದಿನಮಾನಗಳಲ್ಲಿ ಮಕ್ಕಳನ್ನು ಅಂಕಗಳಿಗೆ ಸೀಮಿತಗೊಳಿಸದೇ, ಅವರನ್ನು ವಿಕಸಿತಗೊಳಿಸಬೇಕು. ಮೌಲ್ಯಾಧಾರಿತ ಶಿಕ್ಷಣ ಪಡೆದ ವ್ಯಕ್ತಿಗಳು ದೇಶಕ್ಕೆ ಬೇಕಾಗಿದೆ. ವಾಸನ ಗ್ರಾಮದ ಅಭಿವೃದ್ಧಿಗೆ ಕಳೆದ ವರ್ಷ ೧೬.೮೧ ಕೋಟಿ ಅನುದಾನ ನೀಡಿದ್ದೇನೆ. ಕಳೆದ ವರ್ಷದ ಮಲಪ್ರಭಾ ಪ್ರವಾಹದ ಸಂದರ್ಭದಲ್ಲಿ ಅಭಿವೃದ್ಧಿ ಮತ್ತು ಬಿದ್ದಿರುವ ಮತ್ತು ಭಾಗಶಃ ಬಿದ್ದಿರುವ ಮನೆಗಳಿಗೆ ಸೇರಿದಂತೆ ೧೨.೮ ಕೋಟಿ ಅನುದಾನ ನೀಡಿದ್ದೇನೆ ಮತ್ತು ಈ ಗ್ರಾಮಕ್ಕೆ ಪ್ರೌಢ ಶಾಲೆ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವ ಪ್ರಯತ್ನ ಮಾಡುತ್ತೇನೆಂದು ತಿಳಿಸಿದರು.

ಪಾರಂಪರಿಕ ವೈದ್ಯ ಡಾ. ಹನುಮಂತ ಮಳಲಿ ಮಾತನಾಡಿ, ಭಾರತ ದೇಶದ ಬೆನ್ನೆಲಬುಗಳೆಂದರೆ ದೇಶದ ಆರೂವರೆ ಲಕ್ಷ ಗ್ರಾಮಗಳೇ ಆಗಿವೆ. ಹಳ್ಳಿಗಳಿಂದ ಬಂದವರೇ ಈ ದೇಶವನ್ನು ಆಳುತ್ತಿದ್ದಾರೆ. ಶತಮಾನಗಳನ್ನು ಕಂಡಿರುವ ಶಾಲೆಯು ಇನ್ನೂ ಗಟ್ಟಿಯಾಗಿದೆ. ಆದರೆ ಇತ್ತೀಚೆಗೆ ನಿರ್ಮಾಣಗೊಂಡ ಶಾಲೆಗಳು ಯಾವಾಗ ಬೀಳುತ್ತವೆಯೋ ಗೊತ್ತಿಲ್ಲ. ದೇಶವನ್ನು ಸುಭದ್ರವಾಗಿ ನಿರ್ಮಿಸಬಲ್ಲ ಶಕ್ತಿ ಶಾಲೆಗಳಲ್ಲಿದೆ. ಹೀಗಾಗಿ ಮಾನವೀಯ ಹಾಗೂ ರಾಷ್ಟ್ರೀಯ ಮೌಲ್ಯಗಳನ್ನು, ನೀಡಬಲ್ಲ ಶಿಕ್ಷಣ ವ್ಯವಸ್ಥೆ ಪ್ರಸ್ತುತ ದಿನಮಾನಗಳಲ್ಲಿ ಅತ್ಯಂತ ಅವಶ್ಯವಾಗಿದೆ ಎಂದರು. ಶತಮಾನೋತ್ಸವ ಸಮಾರಂಭದಲ್ಲಿ ಈ ಶಾಲೆಯಲ್ಲಿ ಕಲಿತು ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ೧೫೦ಕ್ಕೂ ಹೆಚ್ಚು ವಿಶೇಷ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಪೂಜ್ಯಶ್ರೀ ಶಾಂತಲಿಂಗ ಸ್ವಾಮಿಗಳು, ಮೈಲಾರ ದೇವರು, ಗ್ರಾಪಂ ಅಧ್ಯಕ್ಷೆ ರುಕ್ಮವ್ವ ತಳವಾರ, ಉಪಾಧ್ಯಕ್ಷೆ ಶಾರವ್ವ ನಡಮನಿ, ಡಾ. ಹನುಮಂತ ಮಳಲಿ, ಪ್ರಕಾಶಗೌಡ ತಿರಕನಗೌಡ್ರ, ಶಂಕರಗೌಡ ಯಲ್ಲಪ್ಪಗೌಡ್ರ, ಬಿ.ಬಿ.ಐನಾಪೂರ, ಚಂದ್ರು ದಂಡಿನ, ಬಿಇಒ ಡಾ. ಗುರುನಾಥ ಹೂಗಾರ, ಟಿ.ಬಿ. ಪಾಟೀಲ, ಎನ್.ಎಸ್. ಪೂಜಾರ, ಶೇಷನಗೌಡ ಪಾಟೀಲ, ಬಸಪ್ಪ ಮೆಣಸಗಿ, ಹನುಮಂತಗೌಡ ನಡಮನಿ, ಗ್ರಾಪಂ ಸರ್ವ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು, ಯುವಕ ಸಂಘದವರು, ಗ್ರಾಮಸ್ಥರು ಇದ್ದರು.