ವಸಂತ ವೇದ ಪಾಠ ಶಿಬಿರ ಪೂರ್ವಭಾವಿ ಸಮಾಲೋಚನಾ ಸಭೆ

| Published : Apr 02 2025, 01:03 AM IST

ಸಾರಾಂಶ

ಏ.15 ರಿಂದ 30 ರ ತನಕ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ 15 ದಿನಗಳ ವಸಂತ ವೇದ ಪಾಠ ಶಿಬಿರ (ಶ್ಲೋಕ, ಸ್ತೋತ್ರ, ಸೂಕ್ತಗಳು, ಸಂಸ್ಕೃತ ಭಾಷಾಭ್ಯಾಸ, ಪಂಚಾಂಗ ಓದುವ ಕಲಿಕೆ, ಸಂಧ್ಯಾವಂದನೆ, ಪೂಜಾವಿಧಿ, ಧಾರ್ಮಿಕ ಉಪನ್ಯಾಸ, ಮನರಂಜನೆಯ ಆಟಗಳು) ನಡೆಸಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕು ತುಳು ಶಿವಳ್ಳಿ ಸಭಾ ಮತ್ತು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಸಹಯೋಗದೊಂದಿಗೆ ಸಮಾಜದ ಉಪನೀತ ವಟುಗಳಿಗೆ ‘ವಸಂತ ವೇದ ಪಾಠ ಶಿಬಿರ’ ನಡೆಸಿಕೊಂಡು ಬರಲಾಗುತ್ತಿದೆ.

ಈ ವರ್ಷ ಏ.15 ರಿಂದ 30 ರ ತನಕ ಪ್ರತಿ ವರ್ಷದಂತೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ 15 ದಿನಗಳ ವಸಂತ ವೇದ ಪಾಠ ಶಿಬಿರ (ಶ್ಲೋಕ, ಸ್ತೋತ್ರ, ಸೂಕ್ತಗಳು, ಸಂಸ್ಕೃತ ಭಾಷಾಭ್ಯಾಸ, ಪಂಚಾಂಗ ಓದುವ ಕಲಿಕೆ, ಸಂಧ್ಯಾವಂದನೆ, ಪೂಜಾವಿಧಿ, ಧಾರ್ಮಿಕ ಉಪನ್ಯಾಸ, ಮನರಂಜನೆಯ ಆಟಗಳು) ವನ್ನು ಎಲ್ಲರ ಸಹಕಾರದಿಂದ ನಡೆಸಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ತಿಳಿಸಿದ್ದಾರೆ.

ಇತ್ತೀಚೆಗೆ ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಶಿಬಿರದ ಮಾಹಿತಿ ನೀಡಿದರು. ಸಮಾಜದ ಉಪನೀತ ವಟುಗಳು ಶಿಬಿರದಲ್ಲಿ ಭಾಗವಹಿಸಿ ಬ್ರಾಹ್ಮಣ್ಯದ ಸಂಸ್ಕಾರವನ್ನು ಪಡೆದು ಜ್ಞಾನಸಂಪನ್ನರಾಗಬೇಕು ಎಂದರು.

ಇದೇ ಅವಧಿಯಲ್ಲಿ ಏ. 27 ರಂದು ಭಾನುವಾರ ತುಳು ಶಿವಳ್ಳಿ ಮಹಿಳಾ ಘಟಕದ ವತಿಯಿಂದ ಹೆಣ್ಣು ಮಕ್ಕಳಿಗಾಗಿ ಒಂದು ದಿನದ ಕನ್ನಿಕಾ ವ್ಯಕ್ತಿತ್ವವಿಕಸನ ಶಿಬಿರ ಮತ್ತು ಮಾತೃ ಭೋಜನಾ ಕಾರ್ಯಕ್ರಮವನ್ನು ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಹಮ್ಮಿಕೊಳ್ಳ ಲಾಗಿದೆ. ಏ. 28 ರಂದು ಸಮಾಜದ ಅಭ್ಯುದಯ ಹಾಗು ಲೋಕಸುಭಿಕ್ಷೆಗಾಗಿ ಪುಣ್ಯಪ್ರದ ಅಷ್ಟಾಕ್ಷರ ಯಾಗ ನಡೆಸಲು ಸಂಕಲ್ಪಿಸಲಾಗಿದೆ ಎಂದು ತಿಳಿಸಿದರು.

ತುಳು ಶಿವಳ್ಳಿ ಸಭಾ ಉಜಿರೆ ವಲಯಾಧ್ಯಕ್ಷ ಗಿರಿರಾಜ ಬಾರಿತ್ತಾಯ ಎಲ್ಲರ ಸಹಕಾರ ಕೋರಿದರು. ತಾಲೂಕು ಮಹಿಳಾ ಘಟಕಾಧ್ಯಕ್ಷೆ ಜಯಾ ಅನಂತಕೃಷ್ಣ ಆರ್ಮುಡತ್ತಾಯ , ಕೋಶಾಧಿಕಾರಿ ಪ್ರಕಾಶ್ ಕುದ್ದಣ್ಣಾಯ, ಯುವ ವಿಪ್ರ ವೇದಿಕೆ ಅಧ್ಯಕ್ಷ ಸೂರ್ಯನಾರಾಯಣ ಮುರುಡಿತ್ತಾಯ ಉಪಸ್ಥಿತರಿದ್ದರು. ಉಜಿರೆ ವಲಯ ಕಾರ್ಯದರ್ಶಿ ಹರ್ಷಕುಮಾರ್ ಕೆ ಎನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.